ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ರಾಜೀನಾಮೆ

ವರಿಷ್ಠರ ಮೌನ ನಡೆಗೆ ಅಸಮಾಧಾನ
Last Updated 14 ಏಪ್ರಿಲ್ 2022, 6:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಒಂದೂವರೆ ದಶಕಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹಲವು ಹುದ್ದೆಗಳನ್ನು ಕಾರ್ಯ ನಿರ್ವಹಿಸಿದ್ದೇನೆ. ಆದರೆ, ಪಕ್ಷದಲ್ಲಿ ನಮ್ಮ ಶ್ರಮಕ್ಕೆ ಗೌರವ ಇಲ್ಲದಾಗಿದೆ. ಇದರಿಂದ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಪುರುಷೋತ್ತಮ್ ಹೇಳಿದರು.

ನಗರದ ಬಿಎಸ್‌ಪಿ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದಲ್ಲಿ ಸ್ಥಳೀಯ ಮುಖಂಡರು ನನ್ನ ವಿರುದ್ಧ ಷಡ್ಯಂತ್ರ, ಗುಂಪುಗಾರಿಕೆ ನಡೆಸುತ್ತಿದ್ದರೂ ಪಕ್ಷದ ವರಿಷ್ಠರು ಕ್ರಮಕೈಗೊಳ್ಳಲಿಲ್ಲ. ಈ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚಿಸಿ ರಾಜೀನಾಮೆ ಕೊಡುವ ನಿರ್ಧಾರಕ್ಕೆ ಬರಲಾಗಿದೆ’ ಎಂದರು.

‘ಕೆಲವು ಮುಖಂಡರನ್ನು ಹೊಗಳಿದರಷ್ಟೇ ಪಕ್ಷದಲ್ಲಿ ಉಳಿಯಲು ಸಾಧ್ಯ. ಈ ರೀತಿಯ ಸುಳ್ಳು ಹೊಗಳಿಕೆ ನನಗೆ ಅಗತ್ಯ ಇಲ್ಲ. ಪಕ್ಷದಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲದ ಕಾರಣ ಬೇಸತ್ತು ರಾಜೀನಾಮೆ ಸಲ್ಲಿಸಲಾಗುತ್ತಿದೆ. ಪಕ್ಷದಲ್ಲಿ ನಿರಂತರವಾಗಿ ಶ್ರಮಿಸಿದರೂ ಮಲತಾಯಿ ಧೋರಣೆಯು ತೀವ್ರ ನೋವುಂಟು ಮಾಡಿದೆ. ಪಕ್ಷದ ವರಿಷ್ಠರು ಮಾತುಕತೆ ನಡೆಸಿದರೂ ಮತ್ತೆ ಪಕ್ಷಕ್ಕೆ ಸೇರುವುದಿಲ್ಲ’ ಎಂದು ತಿಳಿಸಿದರು.

ರಾಜಕಾರಣ ನಿಂತ ನೀರಲ್ಲ. ಕೆಲವೇ ದಿನಗಳಲ್ಲಿ ರಾಜಕೀಯ ಬದಲಾವಣೆ ಕುರಿತು ತಾಲ್ಲೂಕಿನ ಜನತೆಗೆ ತಿಳಿಸಲಾಗುವುದು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಲ್ಲೂಕು ಅಧ್ಯಕ್ಷ ಹರೀಶ್‌ ಜಗನ್ನಾಥ್ ಮಾತನಾಡಿ, ಪಕ್ಷದ ಜವಾಬ್ದಾರಿ ಹೊತ್ತ ನಂತರ ಹಲವು ಜನಪರ ಕಾರ್ಯಗಳನ್ನು ಮಾಡಲಾಗಿದೆ. ಆದರೆ ಜಿಲ್ಲಾ, ರಾಜ್ಯ ಸಮಿತಿ ಯಾವುದೇ ಬೆಂಬಲ ನೀಡಲಿಲ್ಲ ಎಂದು
ಹೇಳಿದರು.

ಪುರುಷೋತ್ತಮ್ ಅವರ ಸ್ವಂತ ಹಣದಿಂದ ಪಕ್ಷದ ಹೆಸರಲ್ಲಿ ಜನಪರ ಕಾರ್ಯಗಳನ್ನು ಮಾಡಲಾಯಿತು. ಆದರೆ, ಇತ್ತೀಚೆಗೆ ಒಂದು ಗುಂಪು ಪಕ್ಷದ ಗಮನಕ್ಕೆ ತರದೆ ಪತ್ರಿಕಾಗೋಷ್ಠಿ ನಡೆಸಿತು. ಇದೇ ರೀತಿ ಪದೇ ಪದೇ ಉಂಟಾದ ಅವಮಾನದಿಂದ ಬೇಸತ್ತು ತಾಲ್ಲೂಕು ಮತ್ತು ನಗರ ಘಟಕದ ಎಲ್ಲಾ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಕಮಲಮ್ಮ, ನಗರ ಪ್ರಧಾನ ಕಾರ್ಯದರ್ಶಿ ಕರೀಂ, ತಾಲ್ಲೂಕು ಸಂಚಾಲಕ ಆಂಜಿನಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT