ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗೆ ಕಳ್ಳಿಹಾಲು ಕುಡಿಸಿದ ಸಹಪಾಠಿ: ಆರೋಪ

Published 11 ಮಾರ್ಚ್ 2024, 15:49 IST
Last Updated 11 ಮಾರ್ಚ್ 2024, 15:49 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಬಚ್ಚಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಓದುತ್ತಿರುವ ತಮ್ಮ ತಂಗಿಯ ಮಗನಿಗೆ ಸಹಪಾಠಿಗಳು ಕಳ್ಳಿಹಾಲು ಕುಡಿಸಿದ್ದಾರೆ ಎಂದು ವಸತಿ ಶಾಲೆಯ ವಿದ್ಯಾರ್ಥಿಯ ಪೋಷಕರಾಗಿರುವ ಬಿ.ಆರ್‌.ಭಾಸ್ಕರ್‌ ಪ್ರಸಾದ್‌ ಆರೋಪಿಸಿದ್ದಾರೆ.

ಈ ಸಂಬಂಧ ಅವರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

‘ಇದು ಕೊಲೆ ಯತ್ನ, ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆ ವ್ಯಾಪ್ತಿಗೆ ಬರುವ ಪ್ರಕರಣವಾಗಿದೆ. ಈ ಪ್ರಕರಣಕ್ಕೆ ನೇರ ಹೊಣೆಗಾರರಾಗಿರುವ ಶಾಲೆಯ ಪ್ರಾಂಶುಪಾಲರು, ವಾರ್ಡ್‌ನ್‌, ಆರೋಗ್ಯ ಸಹಾಯಕಿ ಸೇರಿದಂತೆ ಇತರರನ್ನು ಬಂಧಿಸಬೇಕೆಂದು’ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಸಂತ್ರಸ್ತ ವಿದ್ಯಾರ್ಥಿಗೆ ಬೆಂಗಳೂರಿನ ಯಶವಂತಪುರದಲ್ಲಿನ ಮಣಿಪಾಲ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

‘ವಸತಿ ಶಾಲೆಯಲ್ಲಿ ನಡೆದಿರುವ ಘಟನೆಯ ಸತ್ಯವನ್ನು ಮುಚ್ಚಿಟ್ಟು ಶಾಲೆಯ ಪ್ರಾಂಶುಪಾಲರು ಹಾಗೂ ಆರೋಗ್ಯ ಸಹಾಯಕಿರು ಏನು ಆಗಿಯೇ ಇಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆತನಿಗೆ ಈ ಹಿಂದಿನಿಂದಲೂ ಗಂಟಲು ಹುಣ್ಣಿನ ಸಮಸ್ಯೆ ಇತ್ತು. ಈಗ ಹೆಚ್ಚಾಗಿದ್ದು ಜ್ವರ ಬಂದಿದೆ ಎನ್ನುವ ಉಡಾಫೆಯ ಉತ್ತರ ನೀಡಿದ್ದಾರೆ. ಘಟನೆ ನಡೆದ ಸಮಯದಲ್ಲೇ ಪೋಷಕರಿಗೆ ಮಾಹಿತಿ ತಿಳಿಸಿದ್ದರೆ ಹೆಚ್ಚಿನ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿಸಲಾಗುತಿತ್ತು. ಆರೋಗ್ಯ ಸಮಸ್ಯೆ ಹೆಚ್ಚು ಉಲ್ಬಣಿಸುವುದನ್ನು ತಡೆಯಬಹುದಾಗಿತ್ತು’ ಎಂದು ತಿಳಿಸಿದರು.

‘ಇಲ್ಲಿನ ವಸತಿ ಶಾಲೆಯಲ್ಲಿ ಈ ಹಿಂದೆಯೂ ಹಲವಾರು ಪ್ರಕರಣಗಳು ನಡೆದಿವೆ. ಈ ಬಗ್ಗೆ ಸಾಕಷ್ಟು ಜನ ಪೋಷಕರು ದೂರು ನೀಡಿದ್ದರು ಸಹ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಹಾಗಾಗಿಯೇ ಇಂತಹ ಪ್ರಕರಣಗಳು ಮರುಕಳುಹಿಸುತ್ತಲೇ ಇವೆ. ಪೊಲೀಸರು ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿ ತಕ್ಷಣ ಬಂಧಿಸಬೇಕು.ಇಲ್ಲವಾದರೆ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಕಳ್ಳಿ ಗಿಡ ‌ಇಲ್ಲ

ವಸತಿ ಶಾಲೆಯಲ್ಲಿ ನಡೆದಿರುವ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರಾದ ನಾಗರತ್ನಮ್ಮ ‘ನಮ್ಮ ವಸತಿ ಶಾಲೆಯ ಆವರಣದಲ್ಲಿ ಕಳ್ಳಿ ಗಿಡಗಳೇ ಇಲ್ಲ. ಶಾಲಾ ಆವರಣದಲ್ಲಿನ ಅಲಂಕಾರಕ್ಕಾಗಿ ಬೆಳೆಸಲಾಗಿರುವ ಹೂವಿನ ಗಿಡದಲ್ಲಿನ ಕಾಯಿಗಳನ್ನು ಹುಡುಗರು ಬಾಯಿಗೆ ಹಾಕಿರುವ ಕಾರಣ ಅಂಟು ದ್ರವದ ಕಾಯಿಗಳಿಂದ ಗಂಟಲು ಹುಣ್ಣಾಗಿರಬಹುದು. ಈ ಘಟನೆ ಉದ್ದೇಶ ಪೂರಕವಾಗಿ ನಡೆದಿಲ್ಲ. ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿ ಮಾಹಿತಿ ಪಡೆಯಲಾಗಿದೆ. ನಮ್ಮಲ್ಲಿಯು ಸಹ ಉತ್ತಮ ಚಿಕಿತ್ಸೆ ಕೊಡಿಸಲಾಗಿತ್ತು’ ಎಂದಿದ್ದಾರೆ. ‘ವಸತಿ ಶಾಲೆಯಲ್ಲಿ ಹಲ್ಲೆಗೆ ಒಳಗಾಗಿರುವ ವಿದ್ಯಾರ್ಥಿಯ ಪೋಷಕರಾಗಿರುವ ಬಿ.ಆರ್‌.ಭಾಸ್ಕರ್‌ ಪ್ರಸಾದ್‌ ಅವರು ನೀಡಿರುವ ದೂರನ್ನು ಸ್ವೀಕರಿಸಲಾಗಿದೆ. ತನಿಖೆಯ ನಂತರ ಶೀಘ್ರವೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ಎಂದು ಗ್ರಾಮಾಂತರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಸಾಧೀಕ್‌ ಪಾಷ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT