ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವ ಆಶಯಕ್ಕೆ ಬದ್ದರಾಗಿರಿ

ದೊಡ್ಡಬಳ್ಳಾಪುರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ
Last Updated 25 ಜನವರಿ 2020, 14:32 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: 18 ವರ್ಷ ತುಂಬಿದವರು ಮತದಾರರಾಗಿ ನೋಂದಾಯಿಸಿಕೊಳ್ಳುವುದಷ್ಟೇ ಅಲ್ಲದೇ ಮತದಾನ ಪ್ರಾಮುಖ್ಯವನ್ನು ಅರಿಯಬೇಕಿದ್ದು, ಪ್ರಜಾಪ್ರಭುತ್ವದ ಆಶಯಗಳಿಗೆ ಬದ್ದರಾಗಿ ನಡೆದುಕೊಳ್ಳಬೇಕಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಸಂದೀಪ್ ಎ.ನಾಯಕ್ ಹೇಳಿದರು.

ಭಾರತ ಚುನಾವಣಾ ಆಯೋಗ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ತಾಲ್ಲೂಕು ಆಡಳಿತ, ವಕೀಲರ ಸಂಘ, ಸಹಯೋಗದಲ್ಲಿ ನಗರದ ಡಾ.ರಾಜ್‍ಕುಮಾರ್ ಕಲಾಮಂದಿರದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಂದು ಮತದಿಂದ ಸಹ ಅಭ್ಯರ್ಥಿ ಸೋಲುವ ಸಂದರ್ಭ ಬರಬಹುದು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬಲ್ಲ ಆರಂಭಿಕ ಹಂತವೇ ಚುನಾವಣಾ ಪ್ರಕ್ರಿಯೆಯಾಗಿದ್ದು, ಸುಭದ್ರ ಸರ್ಕಾರಕ್ಕಾಗಿ ಮತದಾನ ಮಾಡುವುದು ಪ್ರತಿಯೊಬ್ಬ ಮತದಾರರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಉತ್ತಮ ಆಡಳಿತದ ಜವಾಬ್ದಾರಿ ಮತದಾರರ ಮೇಲಿದೆ. ಆದರೆ ಇಂದು 80 ದಾಟಿದ ವಯಸ್ಸಾದವರು ಮತದಾನ ಮಾಡುತ್ತಿದ್ದು, ಬಹಳಷ್ಟು ಯುವಕರು ರಜೆ ಸಿಕ್ಕಿತು ಎಂದು ವೃಥಾ ಕಾಲ ಕಳೆಯುತ್ತಿದ್ದಾರೆ. ಚುನಾವಣೆಯಲ್ಲಿ ಒಂದೊಂದು ಮತವೂ ಅಮೂಲ್ಯವಾಗಿದೆ. ಒಂದು ಮತದಿಂದ ಸಹ ಅಭ್ಯರ್ಥಿ ಸೋಲುವ ಸಂದರ್ಭ ಬರಬಹುದು. ಈ ನಿಟ್ಟಿನಲ್ಲಿ ಮತದಾನ ಪ್ರಾಮುಖ್ಯವನ್ನು ಎಲ್ಲರೂ ಅರಿತು ಮತದಾನಕ್ಕೆ ಪ್ರೇರೇಪಿಸಬೇಕಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ವಕೀಲ ಕೆ.ಎಸ್.ಶ್ರೀಧರ್, ಹಿಂದೆ ರಾಜವಂಶಸ್ಥರಿಂದ ರಾಜ್ಯವಾಳುವ ರಾಜ ಹುಟ್ಟುತ್ತಿದ್ದ. ಆದರೆ ಈಗ ಪ್ರಜಾಪ್ರಭುತ್ವದಲ್ಲಿ ಮತಗಟ್ಟೆಯಿಂದ ರಾಜ್ಯವಾಳುವ ರಾಜ ಹುಟ್ಟುತ್ತಾನೆ. ಪ್ರಜ್ಞಾವಂತ ಮತದಾರರಿಂದ ಪ್ರಜಾಪ್ರಭುತ್ವದ ಆಶಯಗಳು ಈಡೇರುತ್ತವೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಲುವಾಗಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮತದಾನದ ಹಕ್ಕು ಇದೆ ಎಂದು ಎರಡು ಮೂರು ಕಡೆ ಮತದಾನ ಮಾಡುವುದು ಅಪರಾಧ. ಅಂತೆಯೇ ಯಾವುದೇ ಆಮಿಷಗಳಿಗೆ ಒಳಗಾಗುವುದು ನಮ್ಮನ್ನು ನಾವೇ ಮಾರಿಕೊಂಡಂತೆ ಎಂದರು.

ಕಾರ್ಯಕ್ರಮದಲ್ಲಿ ಮತದಾರರ ಜಾಗೃತಿಗಾಗಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ನೂತನವಾಗಿ ನೋಂದಾಯಿಸಿದ ಮತದಾರರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಿಗೆ ಪ್ರಶಂಸಾ ಪತ್ರ ನೀಡಲಾಯಿತು.

ಉಪವಿಭಾಗಾಕಾರಿ ಸಿ.ಮಂಜುನಾಥ್, ತಹಶೀಲ್ದಾರ್ ಟಿ.ಎಸ್.ಶಿವರಾಜ್, ಉಪವಿಭಾಗಾಕಾರಿ ಕಚೇರಿಯ ತಹಶೀಲ್ದಾರ್ ಕೆ.ವಿ.ರಾಜೀವ್ ಲೋಚನ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಚ್.ಕೆ.ಸೋಮಶೇಖರ್, ಕೊಂಗಾಡಿಯಪ್ಪ ಕಾಲೇಜಿನ ಪ್ರಾಂಶುಪಾಲ ಡಿ.ಎನ್.ಬಾಬು, ಸರ್ಕಾರಿ ಸಹಾಯಕ ಅಭಿಯೋಜಕ ಸಿ.ವಿ.ಸುಬ್ರಮಣ್ಯ, ವಕೀಲರ ಸಂಘದ ಅಧ್ಯಕ್ಷ ರಾ.ಬೈರೇಗೌಡ, ತಾಲ್ಲೂಕು ಪಂಚಾಯಿತಿಯ ಅಧಿಕಾರಿ ಗೀತಾಮಣಿ, ಚುನಾವಣಾ ಶಾಖೆಯ ಅಧಿಕಾರಿ ರವಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT