ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರೊಂದಿಗೆ ಸಮುದಾಯ ಬೆರೆಯಬೇಕು: ರವಿ ಡಿ.ಚನ್ನಣ್ಣನವರ್

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗ್ರಾಮ ವಾಸ್ತವ್ಯ
Last Updated 17 ಜನವರಿ 2020, 13:52 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಸಮುದಾಯದತ್ತ ಪೊಲೀಸ್ ಯೋಜನೆಯಡಿ ಪೊಲೀಸ್ ಇಲಾಖೆಯಲ್ಲಿ ಸಾರ್ವಜನಿಕರು ತೊಡಗಿಸಿಕೊಳ್ಳಲು ಅಗತ್ಯ ತರಬೇತಿ ನೀಡಲಾಗುವುದು’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಹೇಳಿದರು.

ತಾಲ್ಲೂಕಿನ ಜಿಂಕೆಬಚ್ಚಹಳ್ಳಿ ಗ್ರಾಮದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಗುರುವಾರ ರಾತ್ರಿ ನಮ್ಮೂರಲ್ಲಿ ಒಂದು ದಿನ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪೊಲೀಸರಿಂದ ಗ್ರಾಮ ವಾಸ್ತವ್ಯ ಪರಿಕಲ್ಪನೆ ಹೊಸ ವಿಚಾರವಲ್ಲ. ಈ ಹಿಂದೆ ಬೀಟ್ ಪೊಲೀಸ್ ಪೇದೆಗಳು ಗ್ರಾಮಗಳಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಈಗ ಜನರೇ ಪೊಲೀಸ್ ಠಾಣೆಗೆ ಬರುವಂತಾಗಿದ್ದಾರೆ’ ಎಂದರು.

‘ಸಭೆಯಲ್ಲಿ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿ ಪ್ರತಿಕ್ರಿಯಿಸಿ, ಜಿಲ್ಲೆಯಾದ್ಯಂತ ಗಸ್ತು ವ್ಯವಸ್ಥೆ ಚುರುಕುಗೊಳ್ಳುವಂತೆ ಮಾಡಲಾಗಿದೆ. ಸಾರ್ವಜನಿಕರು ಹಾಗೂ ಯುವಪಡೆಗೆ, ಪೊಲೀಸ್ ಇಲಾಖೆಯ ಪರಿಭಾಷೆಗಳಾದ ಎಫ್‍ಐಆರ್, ಬಂಧನ, ವಾರೆಂಟ್ ಮೊದಲಾದ ವಿಚಾರಗಳ ಬಗ್ಗೆ ಅಗತ್ಯ ತರಬೇತಿ ನೀಡಿ ಸಮುದಾಯದತ್ತ ಪೊಲೀಸ್ ಅಡಿಯಲ್ಲಿ ನಿಯೋಜನೆ ಮಾಡಿಕೊಳ್ಳಲಾಗುವುದು’ ಎಂದರು.

‘ದೊಡ್ಡಬಳ್ಳಾಪುರಕ್ಕೆ ಸಂಚಾರ ಪೊಲೀಸ್ ಠಾಣೆಯ ಅಗತ್ಯವಿದೆ. ಈ ಬಗ್ಗೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರ ಮಂಜೂರಾಗುವ ಭರವಸೆಯಿದೆ. ಹೆದ್ದಾರಿಯಲ್ಲಿ ಆಗುವ ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಹೆದ್ದಾರಿ ಗಸ್ತು ವಾಹನವನ್ನು ನೆಲಮಂಗಲ ದೊಡ್ಡಬಳ್ಳಾಪುರ ರಸ್ತೆ ಮಾರ್ಗದಲ್ಲಿ ನಿಯೋಜಿಸಲಾಗಿದೆ. ರಸ್ತೆಯಲ್ಲಿ ವ್ಹೀಲಿಂಗ್‌ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕಾ ಪ್ರದೇಶಗಳಲ್ಲಿ ಅಂತರ್ಜಲಕ್ಕೆ ಕಾರ್ಖಾನೆಯ ತ್ಯಾಜ್ಯ ಹರಿಸುವುದು ಕ್ರಿಮಿನಲ್ ಅಪರಾಧ. ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ಕುರಿತು ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ‘ತಾಲ್ಲೂಕಿನಲ್ಲಿ ಹಿಂದೆ ಇದ್ದ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ವ್ಯತ್ಯಾಸವಿದೆ. ತಾವು ಶಾಸಕರಾದ ಮೇಲೆ ಕ್ಷೇತ್ರದ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ರಾಜ್ಯದಲ್ಲಿ ಸರ್ಕಾರ ಬದಲಾದ ಮೇಲೆ ಅನುದಾನಗಳನ್ನು ತಡೆ ಹಿಡಿಯಲಾಗಿದೆ. ಇಂದು ಸಾರ್ವಜನಿಕರ ಮಾಡಿರುವ ಬಸ್ ತಂಗುದಾಣ, ಕೈಗಾರಿಕಾ ಪ್ರದೇಶದ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಡಿವೈಎಸ್‍ಪಿ ಟಿ.ರಂಗಪ್ಪ ಮಾತನಾಡಿ, ‘ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಪೊಲೀಸ್ ಇಲಾಖೆಯಿಂದ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಲಾಗಿದೆ. 100 ಮಂದಿಯಲ್ಲಿ ಇಬ್ಬರು ಅಪರಾಧವೆಸಗಿ ಪೊಲೀಸರಿಗೆ ಭಯ ಪಡುತ್ತಿರಬಹುದು. ಅಂತಹವರಿಂದ ಇಡೀ ಜನತೆ ಪೊಲೀಸರೆಂದರೆ ಭಯ ಪಡುವುದು ಬೇಡ. ನಾವು ನಿಮ್ಮೊಂದಿಗೆ ಇದ್ದೇವೆ ಎನ್ನುವ ಉದ್ದೇಶದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರೂಪಿಸಿ ಪೊಲೀಸರ ಮೇಲೆ ಜನರಿಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸಲಾಗುತ್ತಿದೆ. ಮಾದಕ ವಸ್ತುಗಳು ಹಾಗೂ ಮದ್ಯಪಾನ ಸಮಾಜಕ್ಕೆ ಕಂಟಕಪ್ರಾಯವಾಗಿದೆ. ಯಾವುದೇ ಅಪರಾಧ ಕೃತ್ಯಗಳಾದರೂ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕಿದೆ’ ಎಂದರು.

ಕಾರ್ಯಕ್ರಮದಲ್ಲಿ ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದಕುಮಾರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ಸದಸ್ಯರಾದ ಚುಂಚೇಗೌಡ, ಅರುಣ ಆನಂದಕುಮಾರ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್, ಸದಸ್ಯೆ ರತ್ನಮ್ಮ, ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಳಿನಾ ರಂಗಪ್ಪ, ಎಪಿಎಂಸಿ ನಿರ್ದೇಶಕ ಬಿ.ವಿ.ಲೋಕೇಶ್, ಮುಖಂಡರಾದ ತಿ.ರಂಗರಾಜು, ಬಿ.ಎಚ್.ಕೆಂಪಣ್ಣ, ಆದಿತ್ಯನಾಗೇಶ್, ಕೆಎಎಸ್ ಅಧಿಕಾರಿ ಅಶೋಕ್, ಸರ್ಕಲ್ ಇನ್‌ಸ್ಪೆಕ್ಟರ್‌ ರಾಘವ ಎಸ್.ಗೌಡ, ಗ್ರಾಮಾಂತರ ಠಾಣೆ ಸಬ್ ಇನ್‌ಸ್ಪೆಕ್ಟರ್‌ ವಿ.ಗಜೇಂದ್ರ, ನಗರ ಠಾಣೆ ಸಬ್ ಇನ್‌ಸ್ಪೆಕ್ಟರ್ ಕೆ.ವೆಂಕಟೇಶ್ ಇದ್ದರು.

ಗ್ರಾಮದಲ್ಲಿ ಉತ್ಸವ: ಜಿಂಕೆಬಚ್ಚಹಳ್ಳಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಅವರ ಗ್ರಾಮ ವಾಸ್ತವ್ಯ ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿಸಿತ್ತು. ಗಣ್ಯರನ್ನು ವಾದ್ಯ ತಂಡಗಳೊಡನೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಮಹಿಳೆಯರು ಆರತಿ ಎತ್ತುವ ಮೂಲಕ ಸ್ವಾಗತ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT