ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ವ್ಯವಸ್ಥೆ ಕೇಂದ್ರೀಕರಣಕ್ಕೆ ಕಳವಳ: ಶಾಸಕ ಶರತ್ ಬಚ್ಚೇಗೌಡ

ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್‌ ವಿತರಿಸಿದ ಶಾಸಕ ಶರತ್‌ ಬಚ್ಚೇಗೌಡ
Last Updated 24 ಜೂನ್ 2021, 3:48 IST
ಅಕ್ಷರ ಗಾತ್ರ

ಸೂಲಿಬೆಲೆ: ‘ಕೋವಿಡ್ ಕಾಲಘಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಸಿಕೊಂಡು ತರಗತಿ ನಡೆಸುತ್ತಿರುವುದು ಸಮಾಜದಲ್ಲಿ ಕಾಣಿಸಿರುವ ಧನಾತ್ಮಕ ಬದಲಾವಣೆ. ಆದರೆ, ಮೂಲಸೌಲಭ್ಯದಿಂದ ವಂಚಿತರಾಗಿರುವ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣದಿಂದಲೂ ವಂಚಿತರಾಗುತ್ತಿದ್ದಾರೆ. ಶಿಕ್ಷಣದ ವಿಕೇಂದ್ರಿಕರಣ ನಿರೀಕ್ಷಿಸಿದ್ದ ನಮಗೆ ಮತ್ತೆ ಕೇಂದ್ರೀಕರಣದತ್ತ ಸಾಗುತ್ತಿದೆ’ ಎಂದು ಶಾಸಕ ಶರತ್ ಬಚ್ಚೇಗೌಡ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರಿಗೂ ಶಿಕ್ಷಣದ ಮೂಲಕ ಜ್ಞಾನದ ಶಕ್ತಿ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳ ಸತತ ಪ್ರಯತ್ನಗಳಿಂದ ಅಧಿಕಾರ ಮತ್ತು ಶಿಕ್ಷಣದ ವಿಕೇಂದ್ರಿಕರಣವಾಯಿತು. ಪ್ರಾಥಮಿಕ, ಪದವಿ ಮತ್ತು ಉನ್ನತ ಶಿಕ್ಷಣ ಪಡೆಯುವ ಅವಕಾಶ ದೊರೆಯಿತು. ಜ್ಞಾನದ ಶಕ್ತಿ ಎಲ್ಲೆಡೆ ಪಸರಿಸಬೇಕು. ಶಿಕ್ಷಣದಿಂದ ಯಾರು ವಂಚಿತರಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದರು.

ಹಳ್ಳಿಯಲ್ಲಿರುವ ಮಗುವಿಗೂ, ನಗರ ಪ್ರದೇಶದಲ್ಲಿರುವ ಮಗುವಿಗೂ ವಿದ್ಯಾಭ್ಯಾಸ ಮಾಡಬೇಕಾದರೆ ಸಾಕಷ್ಟು ವ್ಯತ್ಯಾಸಗಳಿವೆ. ನಗರ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಲ್ಯಾಪ್‌ಟಾಪ್, 4ಜಿ ನೆಟ್‌ವರ್ಕ್ ಇರುತ್ತದೆ. ಸೌಲಭ್ಯಗಳಿಂದ ವಂಚಿತವಾಗುತ್ತಿರುವ ಮಕ್ಕಳು ಕಲಿಕೆಯಿಂದಲೂ ವಂಚಿತರಾಗುತ್ತಿದ್ದಾರೆ. ಕಲಿಕೆ ಆರಾಧನೆಯಾಗಿದೆ. ಶಿಕ್ಷಣದ ಕಲಿಕೆಯಲ್ಲಿ ನೇರ ತರಗತಿಗಳ ಬೀರುವ ಪರಿಣಾಮ ಆನ್‌ಲೈನ್ ತರಗತಿಗಳಲ್ಲಿ ಸಿಗುವುದಿಲ್ಲ ಎಂದು ಹೇಳಿದರು.

ಸಾರ್ವಜನಿಕರಿಗೆ ಆರೋಗ್ಯ, ಶಿಕ್ಷಣ ಮತ್ತು ಆಹಾರ ಭದ್ರತೆ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯ. ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸರ್ಕಾರ ಟ್ಯಾಬ್ ವಿತರಣೆ ಮಾಡುತ್ತಿದೆ. ಗ್ರಾಮೀಣ ಪ್ರದೇಶಕ್ಕೆ ಸರ್ಕಾರ ಡೇಟಾ ಸಂಪರ್ಕ ಕಲ್ಪಿಸಿ ಕೊಡದಿದ್ದರೆ ಯೋಜನೆ ನಿಷ್ಪ್ರಯೋಜಕವಾಗಿ ಟ್ಯಾಬ್ ಆಟಿಕೆಯಾಗಿ ಬಳಕೆಯಾಗುವ ಅಪಾಯವಿದೆ ಎಂದು ಎಚ್ಚರಿಸಿದರು.

ನೆಟ್‌ವರ್ಕ್ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತರಲು ವಿದ್ಯಾರ್ಥಿಗಳ ಪರವಾಗಿ ಪ್ರಾಧ್ಯಾಪಕರು, ಶಾಸಕರಿಗೆ ಮನವಿ ಮಾಡಿದರು.

ಮುಖಂಡ ಬಿ.ಜಿ. ನಾರಾಯಣಗೌಡ, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ದೇವರಾಜ್, ಸೈಯದ್ ಮಹಬೂಬ್, ಬೆಟ್ಟಹಳ್ಳಿ ಗೋಪಿನಾಥ್, ಕಾಲೇಜು ಅಭಿವೃದ್ಧಿ ಸದಸ್ಯರಾದ ಭಾಗ್ಯಮ್ಮ, ದೇವದಾಸ್ ಸುಬ್ರಾಯ್ ಶೇಟ್‌, ಡಾ.ಸಾಧಿಕ್ ಪಾಪಾ, ರಮೇಶ, ಗ್ರಾ.ಪಂ. ಉಪಾಧ್ಯಕ್ಷ ಶಿವಣ್ಣ, ಪ್ರಾಂಶುಪಾಲ ಡಾ.ಆದಿನಾರಾಯಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT