ಶನಿವಾರ, ಏಪ್ರಿಲ್ 1, 2023
29 °C

ದೊಡ್ಡಬಳ್ಳಾಪುರ: ಸಂವಿಧಾನ ಜಗತ್ತಿನ ಶ್ರೇಷ್ಠ ಗ್ರಂಥ: ಎನ್. ತೇಜಸ್‌ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ‘ಜಾಗತಿಕ ಶಕ್ತಿಯಾಗಿ ಭಾರತ ರೂಪುಗೊಳ್ಳುತ್ತಿದ್ದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ನಮ್ಮ ಸಂವಿಧಾನವು ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ. ಎಲ್ಲರಿಗೂ ಸಮಪಾಲು; ಸಮಬಾಳು ಆಶಯದೊಂದಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡಬೇಕಿದೆ’ ಎಂದು ಉಪ ವಿಭಾಗಾಧಿಕಾರಿ ಎನ್. ತೇಜಸ್‌ಕುಮಾರ್ ಹೇಳಿದರು.

ನಗರದ ಭಗತ್‍ಸಿಂಗ್ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗುರುವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ದೇಶದ ಸಮಗ್ರತೆ, ಏಕತೆಗೆ ಧಕ್ಕೆ ಬಾರದಂತೆ ಜಾತ್ಯತೀತ ಪರಿಕಲ್ಪನೆ, ಸಮಾನತೆ ಹಾಗೂ ಮೂಲಭೂತ ಹಕ್ಕುಗಳನ್ನು ನೀಡಿರುವ ಸಂವಿಧಾನವನ್ನು ಗೌರವಿಸುವ ಹೊಣೆಗಾರಿಕೆ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲಿದೆ. ಕರ್ತವ್ಯಲೋಪವಾಗದಂತೆ ನೋಡಿಕೊಳ್ಳಬೇಕಿದೆ ಎಂದರು.

ಜ. 26 ಪ್ರತಿಯೊಬ್ಬ ಭಾರತೀಯರ ಹೆಮ್ಮೆಯ ದಿನ. ಅಂತೆಯೇ ಮತದಾನದ ಜಾಗೃತಿ ಮೂಡಿಸಲು ಆಚರಿಸುವ ರಾಷ್ಟ್ರೀಯ ಮತದಾರರ ದಿನಾಚರಣೆ ಸಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖ ದಿನವಾಗಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕಿದೆ. ನಮ್ಮ ಸಂವಿಧಾನ ನಮ್ಮ ಹೆಮ್ಮೆಯಾಗಿದೆ
ಎಂದರು.

ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ದೇಶದ ಪ್ರಜೆಗಳಿಗೆ ಮೂಲಭೂತ ಹಕ್ಕುಗಳನ್ನು ನೀಡುವ ಮೂಲಕ ಸಮಾನತೆ, ಸಮಬಾಳು ಪರಿಕಲ್ಪನೆ ಹೊಂದಿರುವುದು ನಮ್ಮ ಸಂವಿದಾನ. ಇಂತಹ ಮಹತ್ವದ ಸಂವಿಧಾನವನ್ನು ಸದಾ ನೆನೆಯುವಂತೆ ಮಾಡಿದವರು ಡಾ.ಬಿ.ಆರ್. ಅಂಬೇಡ್ಕರ್ ಎಂದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಅಂಜುಶ್ರೀ (ಕ್ರೀಡೆ), ಕಿರಣ್‌ಕುಮಾರ್ (ಮಾಹಿತಿ ತಂತ್ರಜ್ಞಾನ), ಬಿ.ಎಸ್‌. ನಂದೀಶ್ (ಶಿಕ್ಷಣ) ತಾಯಪ್ಪ ನಡುವಿನ ಮನಿ (ಚಿತ್ರಕಲೆ), ಜಿ. ದಿಲೀಪ (ಎನ್‍ಸಿಸಿ), ಡಾ.ಸುನಿಲ್‌ಕುಮಾರ್ (ಪರಿಸರ), ಹಂಸವೇಣಿ (ಭರತ ನಾಟ್ಯ), ಪುಟ್ಟಸಿದ್ದಯ್ಯ (ರಂಗಭೂಮಿ), ಬಿ.ಜಿ. ಅಮರನಾಥ (ಜೀವಮಾನ ಸಾಧನೆ), ಟಿ.ಎಂ.ಸಿ ಬ್ಯಾಂಕ್ (ಸಹಕಾರ ಕ್ಷೇತ್ರ) ಹಾಗೂ ಸರ್ಕಾರಿ ಸೇವೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಎಸ್‌. ಶ್ರೀನಾಥಗೌಡ, ಶಾಂತಮ್ಮ ಮತ್ತು ತಂಡ (ಜನಪದ), ಎಂ.ಎನ್‌. ಶೋಭಾ, ಎಂ.ಡಿ. ಮೈತ್ರಿ, ಕೆ.ಎಸ್‌. ಗೋವಿಂದರಾಜು ಅವರನ್ನು ಸನ್ಮಾನಿಸಲಾಯಿತು.

ಲೆಫ್ಟಿನೆಂಟ್‌ ಶ್ರೀನಿವಾಸ್ ನೇತೃತ್ವದಲ್ಲಿ ಎನ್.ಸಿ.ಸಿ, ಸೇವಾದಳ, ಪೊಲೀಸ್ ಸಿಬ್ಬಂದಿ, ಶಾಲಾ ಮಕ್ಕಳ ಬ್ಯಾಂಡ್ ಸೆಟ್ ಒಳಗೊಂಡ ಆಕರ್ಷಕ ಪಥ ಸಂಚಲನ ನಡೆಯಿತು.

ಸಮಾರಂಭದಲ್ಲಿ ತಹಶೀಲ್ದಾರ್ ಮೋಹನಕುಮಾರಿ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ, ಉಪಾಧ್ಯಕ್ಷೆ ಫರ್ಹಾನಾ ತಾಜ್, ಪೌರಾಯುಕ್ತ ಕೆ.ಜಿ. ಶಿವಶಂಕರ್, ಬಿಇಒ ಆರ್. ರಂಗಪ್ಪ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು