ಗುರುವಾರ , ಫೆಬ್ರವರಿ 27, 2020
19 °C
ಸಂವಿಧಾನ ದಿನಾಚರಣೆಯಲ್ಲಿ ಮುಖಂಡರ ಅಭಿಮತ

ಸಂವಿಧಾನ ಶೋಷಿತರ ಮಹಾಗ್ರಂಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಶೋಷಿತ ಸಮುದಾಯದ ಭವಿಷ್ಯದ ಮಹಾ ಗ್ರಂಥ ಎಂದು ಛಲವಾದಿ ಮುಖಂಡ ಚೌಡಪ್ಪನಹಳ್ಳಿ ಲೋಕೇಶ್ ಅಭಿಪ್ರಾಯಪಟ್ಟರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಛಲವಾದಿ ಸಮುದಾಯ ವತಿಯಿಂದ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದರು. ಸಂವಿಧಾನ ರಚನೆ ಎಂಬುದು ನೀರು ಕುಡಿದಷ್ಟು ಸುಲಭವಾಗಿರಲಿಲ್ಲ. ಅನೇಕ ರಾಷ್ಟ್ರಗಳ ಸಂವಿಧಾನ ಹಗಲು ರಾತ್ರಿ ಮನನ ಮಾಡಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಪ್ರತಿಯೊಂದು ಸಮುದಾಯಕ್ಕೆ ಸಮಾನತೆ ನೀಡಿ ಅರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ದೂರದೃಷ್ಟಿ ಚಿಂತನೆಯಿಂದ ರಚಿಸಿದ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಡೀ ವಿಶ್ವ ಮೆಚ್ಚುವ ಕೊಡುಗೆಯಾಗಿದೆ ಎಂದು ಹೇಳಿದರು.

ಛಲವಾದಿ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ವಿ.ಸ್ವಾಮಿ ಹಾಗೂ ಜಿಲ್ಲಾ ಘಟಕ ಅಧ್ಯಕ್ಷ ರೆಡ್ಡಿಹಳ್ಳಿ ಮುನಿರಾಜು ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಸಂವಿಧಾನ ವಿರೋಧಿ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದೆ. ವಿರೋಧ ವ್ಯಕ್ತಪಡಿಸುತ್ತಿರುವವರು ಪ್ರಗತಿಪರ ಚಿಂತಕರಲ್ಲ. ಸಾಹಿತಿ, ರಾಜಕೀಯ ವಿಶ್ಲೇಷಕರಲ್ಲ. ಮನು ಸಿದ್ಧಾಂತದ ಪ್ರತಿಪಾದಕರು ಎಂದು ಟೀಕಿಸಿದರು.

ಸಂವಿಧಾನ ಬದಲಾವಣೆ ಮೊದಲ ಹಂತವಾಗಿಯೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರ ದಲಿತರು, ಅಲ್ಪಸಂಖ್ಯಾತರನ್ನು ಮೂಲೆಗುಂಪು ಮಾಡಲು ಹೊರಟಿದೆ. ಜಾತಿ ಗಣತಿಗೆ ನೋಂದಣಿ ಕಾಯ್ದೆ ಜಾರಿಗೆ ತರುತ್ತಿದೆ. ಕೇಂದ್ರ ಸರ್ಕಾರದ ಮೂರು ಕಾಯ್ದೆಗಳು ಜಾರಿಯಾದರೆ ದೇಶದ ಶೇಕಡ 50ರ ಜನಸಂಖ್ಯೆ ಸಂವಿಧಾನದಡಿ ನಾಗರಿಕ ಹಕ್ಕು ಕಳೆದುಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಕಾಯ್ದೆಗೆ ಸಹಕಾರ ನೀಡದೆ ಗಾಂಧೀಜಿ ಅವರ ಅಸಹಕಾರ ಚಳವಳಿಯಂತೆ ಆಂದೋಲನ ನಡೆಸಲು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ಹಾಗೂ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಪ್ರಧಾನ ಸಂಚಾಲಕ ಅತ್ತಿಬೆಲೆ ನರಸಪ್ಪ ಮಾತನಾಡಿ, ಸಂವಿಧಾನದ ಅರ್ಥ ಗೊತ್ತಿಲ್ಲದವರು ಕೇಂದ್ರದಲ್ಲಿ ಮಂತ್ರಿಯಾಗಿವುದು ಈ ದೇಶದ ದುರಂತ. ಶೋಷಿತ ಸಮುದಾಯ ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಸೋಮಶೇಖರ್, ವಕೀಲ ಸಿದ್ಧಾರ್ಥ, ಮುಖಂಡ ಕಾರಹಳ್ಳಿ ಕೆಂಪಣ್ಣ ಮಾತನಾಡಿದರು. ಛಲವಾದಿ ಮಹಾಸಭಾ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಮುಖಂಡರಾದ ಎಚ್.ಕೆ.ವೆಂಕಟೇಶಪ್ಪ,ನಾಗರಾಜ್, ಅವರೆಕಾಯಿ ರಮೇಶ್, ಮುರುಳಿ,ಸುಬ್ರಮಣಿ, ವೆಂಕಟೇಶ್, ರಾಜಕುಮಾರ್, ಸುಬ್ಬಣ್ಣ, ಚನ್ನಕೃಷ್ಣ, ಮುನಿರಾಜು ಇದ್ದರು .

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು