ದೊಡ್ಡಬಳ್ಳಾಪುರ: ಒಂದೇ ದಿನದಲ್ಲಿ ವಿವಿಧ ಬ್ರಾಂಡ್‌ಗಳ ಅಡುಗೆ ಎಣ್ಣೆ 1 ಲೀಟರ್‌ಗೆ ₹20 ದಿಢೀರ್ ಏರಿಕೆ ಕಂಡಿದ್ದು, ಗ್ರಾಹಕರು ಹಾಗೂ ಹೋಟೆಲ್ ಉದ್ಯಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಶುಕ್ರವಾರ ಅಂಗಡಿಗಳಲ್ಲಿ 15 ಲೀಟರ್ ಅಡುಗೆ ಎಣ್ಣೆ ₹1,550 ರಿಂದ ₹1,570 ಹಾಗೂ 15 ಕೆ.ಜಿ ಟಿನ್ ಅಡುಗೆ ಎಣ್ಣೆ ₹1,700 ಇತ್ತು. ಆದರೆ ಶನಿವಾರ ಬೆಳಿಗ್ಗೆ ಒಂದು ಲೀಟರ್‌ಗೆ ₹20 ಏರಿಕೆಯಾಗಿದೆ.
‘ಬೆಲೆ ಏರಿಕೆ ಬಗ್ಗೆ ಅಂಗಡಿಗಳವರನ್ನು ಪ್ರಶ್ನಿಸಿದರೆ ಕೇಂದ್ರ ಸರ್ಕಾರ ಅಡುಗೆ ಎಣ್ಣೆ ಮೇಲೆ ಹೆಚ್ಚುವರಿ ಜಿಎಸ್‌ಟಿ ಸುಂಕ ವಿಧಿಸಿದೆ. ಹಾಗಾಗಿಯೇ ಬೆಲೆ ಏರಿಕೆ ಅನಿವಾರ್ಯಗಿದೆ ಎನ್ನುತ್ತಿದ್ದಾರೆ. ಆದರೆ ಹಳೇ ದಾಸ್ತಾನು ಮುಗಿಯುವವರೆಗಾದರು ಹಿಂದಿನ ಬೆಲೆಗೆ ಮಾರಾಟ ಮಾಡಬೇಕು. ಹಾಗೆಯೇ ಈ ರೀತಿಯ ಒಮ್ಮೆಗೆ ₹20 ಬೆಲೆ ಏರಿಕೆ ಗ್ರಾಹಕರಿಗೆ ಸರ್ಕಾರ ಮಾಡುತ್ತಿರುವ ಮಹಾ ಮೋಸವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಹೋಟೆಲ್ ಮಾಲೀಕರ ಸುರೇಶ್.
ನಗರದ ವಿವಿಧ ಖಾಸಗಿ ಮಾಲ್, ಸಹಕಾರಿ ಕ್ಷೇತ್ರದ ಜನತಾ ಬಜಾರ್‌ಗಳಲ್ಲಿ ಈ ಹಿಂದಿನ ಬೆಲೆಗೆ ಅಡುಗೆ ಎಣ್ಣೆ ಮಾರಾಟ ಮಾಡುತ್ತಿದ್ದರಿಂದ ಗ್ರಾಹಕರು ಹೆಚ್ಚಿನ ಎಣ್ಣೆ ಖರೀದಿಗೆ ಮುಗಿಬಿದ್ದರು. ಗ್ರಾಹಕರಷ್ಟೇ ಅಲ್ಲದೆ ಕೆಲ ಚಿಲ್ಲರೆ ಅಂಗಡಿ ಮಾಲೀಕರು ಸಹ ಹೆಚ್ಚಿನ ಅಡುಗೆ ಎಣ್ಣೆ ಖರೀದಿಗೆ ಮುಂದಾದರು. ಆದರೆ ಖಾಸಗಿ ಮಾಲ್ ಹಾಗೂ ಸಹಕಾರಿ ಕ್ಷೇತ್ರದ ಜನತಾ ಬಜಾರ್ ಅಂಗಡಿಗಳಲ್ಲಿ ಗ್ರಾಹಕರಲ್ಲದವರಿಗೆ ಹೆಚ್ಚಿನ ಎಣ್ಣೆ ಮಾರಾಟ ಮಾಡಲು ನಿರಾಕರಿಸಿದರು. ಇನ್ನು ನಗರದ ಮಾಲ್‌ಗಳಲ್ಲಿ ಗ್ರಾಹಕರು ಇತರೆ ದಿನಸಿಗಳನ್ನು ಖರೀದಿಸಿದರೆ ಮಾತ್ರ ಒಬ್ಬರಿಗೆ 5 ಲೀಟರ್ ಅಡುಗೆ ಎಣ್ಣೆಯ ಒಂದು ಕ್ಯಾನ್ ನೀಡುತ್ತಿದ್ದಾರೆ.