ಮಂಗಳವಾರ, ಸೆಪ್ಟೆಂಬರ್ 28, 2021
20 °C
ಸೋಂಕಿತರಿಗೆ ಅಗತ್ಯ ನೆರವು ಕಲ್ಪಿಸಲು ಒತ್ತಾಯ

ಹಳ್ಳಿಯಲ್ಲಿ ಕೋವಿಡ್‌ ಸೋಂಕು ಉಲ್ಬಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಬೆಂಗಳೂರು ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಎಲ್ಲಿಯೂ ಕೊರೊನಾ ಸೋಂಕು ಕಡಿಮೆಯಾಗಿಲ್ಲ. ಸರ್ಕಾರ ಸುಳ್ಳು ಲೆಕ್ಕ ಕೊಡುವುದು ಬಿಟ್ಟು, ಕೊರೊನಾದಿಂದ ಸಂಕಷ್ಟಕ್ಕೀಡಾದವರಿಗೆ ಬದುಕಲು ನೆಲೆ ಕಲ್ಪಿಸಬೇಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಶೆಟ್ಟಿ ಹೇಳಿದರು.

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರವೇ ಪ್ರವೀಣ್‌ಕುಮಾರ್ ಶೆಟ್ಟಿ ಬಣದಿಂದ ಪ್ರತಿನಿತ್ಯ ರೋಗಿಗಳಿಗೆ ವಿತರಿಸುತ್ತಿರುವ ಹಾಲು, ಹಣ್ಣು, ಮೊಟ್ಟೆ ಮೊದಲಾದ ಅಗತ್ಯ ವಸ್ತುಗಳ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

ಕೋವಿಡ್ ಸೋಂಕು ರಾಜ್ಯದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಸರ್ಕಾರದ ಲಾಕ್‍ಡೌನ್‌ನಿಂದಾಗಿ ಬಡವರು, ಕಾರ್ಮಿಕರು, ಆಟೊ ಚಾಲಕರು, ಕೆಲಸವಿಲ್ಲದೇ ಜೀವನ ಮಾಡುವುದೇ ಕಷ್ಟಕರವಾಗಿದೆ. ಉದ್ಯಮಿಗಳು ಬಾಗಿಲು ಮುಚ್ಚಿದ್ದಾರೆ. ಜೀವನ ಮಾಡುವುದು ಹೇಗೆ ಎನ್ನುವ ಪರಿಸ್ಥಿತಿ ಉಂಟಾಗಿದೆ. ಸರ್ಕಾರ ಲಾಕ್‍ಡೌನ್ ಮಾಡಿದರೆ ಸಮಸ್ಯೆ ಬಗೆಹರಿಯದು. ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ವಿತರಿಸಿ ಅವರ ಬದುಕಿಗೆ ಆಸರೆಯಾಗಬೇಕಿದೆ ಎಂದು ಒತ್ತಾಯಿಸಿದರು.

ಜನಪ್ರತಿನಿಧಿಗಳೇ ಜನಸೇವೆಯಿಂದ ದೂರವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಸ್ಪತ್ರೆಯಲ್ಲಿ ಜೀವದ ಹಂಗು ತೊರೆದು ರೋಗಿಗಳಿಗೆ ಬಿಸಿನೀರು, ಕಷಾಯ, ಹಾಲು, ಮೊಟ್ಟೆ, ಬಾಳೆಹಣ್ಣು ಉಚಿತವಾಗಿ ವಿತರಿಸುತ್ತಿರುವುದು ಅಭಿನಂದನೀಯ ಎಂದರು.

ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, 13 ದಿನಗಳಿಂದ ಆಸ್ಪತ್ರೆ ರೋಗಿಗಳಿಗೆ ಹಾಗೂ ಕೋವಿಡ್ ಕಾರ್ಯಕರ್ತರಿಗೆ ಹಾಲು, ಹಣ್ಣು, ಮೊಟ್ಟೆ, ಬಿಸಿನೀರು, ಕಷಾಯ ಮೊದಲಾದ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲಾಗುತ್ತಿದೆ. ದಾನಿಗಳು ಆಹಾರ ಪೊಟ್ಟಣ ನೀಡಿದರೆ ಅದನ್ನು ತಲುಪಿಸುವ ಕಾರ್ಯ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಸಹಕಾರ ನೀಡುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದರು.

ಕರವೇ ಸದಸ್ಯರಾದ ರಘುನಂದನ್, ಸುಬ್ರಹ್ಮಣ್ಯ, ಜೋಗಹಳ್ಳಿ ಅಮ್ಮು, ಎಚ್.ಎಸ್. ವೆಂಕಟೇಶ್, ಎಸ್.ಎಲ್‌.ಎನ್. ವೇಣು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು