ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ಕಾರೇಪುರ ಗ್ರಾಮದ ರೈತರ ಹೊಲಗಳಿಗೆ ಜೆಡಿಎಸ್ ಮುಖಂಡರ ತಂಡ ಭೇಟಿ ನೀಡಿ ಮಳೆ–ಬೆಳೆ ಕುರಿತು ಮಾಹಿತಿ ಸಂಗ್ರಹಿಸಿತು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಬೆಳೆ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ಬರ ಪರಿಹಾರ ಹಣ ಬಿಡುಗಡೆಗೆ ವಿಳಂಬ ಮಾಡುತ್ತಿದೆ. ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಜೆಡಿಎಸ್ ದನಿ ಎತ್ತಿ ಸರ್ಕಾರದ ಗಮನ ಸೆಳೆಯಲಿದೆ ಎಂದು ಹೇಳಿದರು.
ಬರದಿಂದ ರೈತರು ಸಂಕಷ್ಟದ್ದಲ್ಲದ್ದರೂ ಸರ್ಕಾರ ಪರಿಹಾರ ಹಣ ನೀಡದೇ ತಡಮಾಡುತ್ತಿದೆ. ಈ ವಿಳಂಬ ದೋರಣೆ ಖಂಡನೀಯ ಎಂದರು.
ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ರೈತರಿಗೆ ಸಮರ್ಪಕ ವಿದ್ಯುತ್ ಸರಬರಾಜಾಗುತ್ತಿಲ್ಲ. ಕೃಷಿಗೆ 7 ಗಂಟೆಗಳ ಕಾಲದ ತ್ರೀ ಫೇಸ್ ವಿದ್ಯುತ್ ಸರಬರಾಜು ಮಾಡುವ ಸರ್ಕಾರದ ಹೇಳಿಕೆ ವಾಸ್ತವದಲ್ಲಿ ಜಾರಿಯಾಗಿಲ್ಲ. ಇದರಿಂದ ರೈತರು ತೀವ್ರ ಸಂಕಷ್ಟಪಡುವಂತಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಹಿರಿಯ ಮುಖಂಡ ಇ.ಕೃಷ್ಣಪ್ಪ ಮಾತನಾಡಿ, ರೈತರು ಸಂಕಷ್ಟದಲ್ಲಿದ್ದರೂ ರಾಜ್ಯ ಸರ್ಕಾರದ ಸಚಿವರು ಗಮನ ಹರಿಸದೇ ಮೋಜು ಮಾಡುತ್ತಿದ್ದಾರೆ. ಸರ್ಕಾರ ಹೀಗೆ ನಿರ್ಲಕ್ಷ್ಯ ವಹಿಸಿದರೆ ಹೋರಾಟ ನಡೆಸಿ ಬಿಸಿ ಮುಟ್ಟಿಸಲಾಗುವುದು ಎಂದರು.
ಜೆಡಿಎಸ್ ಹಿರಿಯ ಮುಖಂಡರಾದ ಡಾ.ಎಂ.ಶ್ರೀನಿವಾಸಮೂರ್ತಿ, ಎಚ್.ಅಪ್ಪಯ್ಯ, ಅಂಚರಹಳ್ಳಿ ಆನಂದ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮೀಪತಯ್ಯ, ಯುವ ಜೆ.ಡಿ.ಎಸ್ ಅಧ್ಯಕ್ಷ ಸುನಿಲ್ ಕುಮಾರ್, ದೊಡ್ಡಬೆಳವಂಗಳ ಹೋಬಳಿ ಅಧ್ಯಕ್ಷ ಸತೀಶ್ ಕುಮಾರ್, ಮಧುರೆ ಹೋಬಳಿ ಅಧ್ಯಕ್ಷ ರಂಗಸ್ವಾಮಿ ಇದ್ದರು.