ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ‘ಸರ್ಕಾರದ ಸಾಧನೆ ಜನರಿಗೆ ತಲುಪಿಸಿ’

ಬಿಜೆಪಿ ಆವತಿ ಶಕ್ತಿಕೇಂದ್ರದ ಅಧ್ಯಕ್ಷರ ಅಧಿಕಾರ ಸ್ವೀಕಾರ
Last Updated 8 ಆಗಸ್ಟ್ 2021, 4:45 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಬಿಜೆಪಿ ಸಂಘಟಿಸಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಯಾರೇ ಅಭ್ಯರ್ಥಿಗಳಾದರೂ ಅವರ ಪರವಾಗಿ ಕೆಲಸ ಮಾಡಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ವಿ. ನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕಿನ ಲಕ್ಷ್ಮೀಪುರ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆವತಿ ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಆಯೋಜಿಸಿದ್ದ ಬಿಜೆಪಿ ಆವತಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮುನಿಕೃಷ್ಣಪ್ಪ (ತಮ್ಮಯ್ಯ) ಅವರ ಪದವಿ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ಕೊಂಡೊಯ್ಯುವ ಮೂಲಕ ಜನರಿಗೆ ಮನವರಿಕೆ ಮಾಡಿಕೊಡಬೇಕು. ಬಿಜೆಪಿ ಎಲ್ಲಾ ಜಾತಿ, ಸಮುದಾಯಗಳನ್ನು ಸಮಾನವಾಗಿ ಕೊಂಡೊಯ್ಯುವಂತಹ ಪಕ್ಷವಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ರಾಜ್ಯವನ್ನು ಮಾದರಿಯಾಗಿ ಮಾಡಿದ್ದಾರೆ. 7 ವರ್ಷದ ಅವಧಿಯಲ್ಲಿ ಕಪ್ಪುಚುಕ್ಕೆಯಿಲ್ಲದೆ ಭ್ರಷ್ಟಾಚಾರ ರಹಿತವಾಗಿ ಆಡಳಿತ ನೀಡಿದ್ದಾರೆ. ಇಂತಹ ನಾಯಕರ ಸರಳತೆ ಮತ್ತು ಪಕ್ಷ ಸಂಘಟನೆಯಲ್ಲಿ ಅವರಿಗೆ ಇರುವ ಬದ್ಧತೆ ನಮ್ಮಲ್ಲೂ ಬರಬೇಕು ಎಂದರು.

ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎಚ್.ಎಂ. ರವಿಕುಮಾರ್ ಮಾತನಾಡಿ, ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಎಲ್ಲಾ ಜಾತಿಯ ಜನರು ಸೇರಿದಂತೆ ರೈತರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಇದನ್ನು ಸಹಿಸದ ವಿರೋಧ ಪಕ್ಷಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿ ಸರ್ಕಾರಗಳ ವಿರುದ್ಧ ಅಪಪ್ರಚಾರ ಮಾಡಲಿಕ್ಕೆ ತೊಡಗಿಸಿಕೊಂಡಿದೆ ಎಂದು ಹೇಳಿದರು.

ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಸಂಚಾಲಕ ಅಂಬರೀಶ್ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ತಾಲ್ಲೂಕಿನಲ್ಲಿ ಬಿಜೆಪಿ ಶಾಸಕರು ಇಲ್ಲದಿದ್ದರೂ ಉತ್ತಮ ಕೆಲಸಗಳನ್ನು ಜನರಿಗೆ ಮಾಡಿಸಿದರೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಆವತಿ ಶಕ್ತಿ ಕೇಂದ್ರದ ನೂತನ ಅಧ್ಯಕ್ಷ ಮುನಿಕೃಷ್ಣಪ್ಪ(ತಮ್ಮಯ್ಯ) ಮಾತನಾಡಿ, ಆವತಿ ಶಕ್ತಿ ಕೇಂದ್ರದ ಪ್ರತಿಯೊಂದು ಗ್ರಾಮಕ್ಕೆ ತೆರಳಿ ಪಕ್ಷವನ್ನು ಬಲಪಡಿಸಲಾಗುವುದು. ಗ್ರಾಮಗಳಲ್ಲಿ ಇರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ನಿವಾರಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ ಎಂದುತಿಳಿಸಿದರು.

ಅಧ್ಯಕ್ಷ ಸುನೀಲ್, ಪ್ರಧಾನ ಕಾರ್ಯದರ್ಶಿ ನೀಲೇರಿ ಮಂಜುನಾಥ್, ಭೂ ಮಂಜೂರಾತಿ ಮಾಜಿ ಸದಸ್ಯ ರಮೇಶ್, ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನಾಗೇಂದ್ರ, ಉಪಾಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ವಿನಯ್ ಕುಮಾರ್, ಮುಖಂಡರಾದ ಮಂಜುನಾಥ್, ಪಿಳ್ಳೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT