ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರಸಭೆಯಾಗಿ ದೇವನಹಳ್ಳಿ ಮೇಲ್ದರ್ಜೆಗೆ?

ಸಂದೀಪ್‌
Published 12 ಫೆಬ್ರುವರಿ 2024, 4:26 IST
Last Updated 12 ಫೆಬ್ರುವರಿ 2024, 4:26 IST
ಅಕ್ಷರ ಗಾತ್ರ

ದೇವನಹಳ್ಳಿ: ಹೈನುಗಾರಿಕೆ ಮತ್ತು ಕೃಷಿಯೊಂದಿಗೆ ಇನ್ನೂ ಹಳ್ಳಿ ಸೊಗಡು ಉಳಿಸಿಕೊಂಡು ಬೆಂಗಳೂರಿಗೆ ಹೂವು, ತರಕಾರಿ ಪೂರೈಸುತ್ತಿರುವ ದೇವನಹಳ್ಳಿಯ ಗ್ರಾಮೀಣ ಭಾಗವನ್ನು ನಗರಸಭೆಯ ವ್ಯಾಪ್ತಿಗೆ ಸೇರಿಸುವ ಚಿಂತನೆ ನಡೆದಿದೆ. ನಗರಸಭೆಯಲ್ಲಿ ವಿಲೀನಗೊಳ್ಳಲಿರುವ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಪೈಕಿ ಎಂಟು ಗ್ರಾಮ ಪಂಚಾಯಿತಿಗಳು ಅಸ್ತಿತ್ವ ಕಳೆದುಕೊಳ್ಳುವ ಆತಂಕ ಎದುರಿಸುತ್ತಿವೆ.

ನಗರಸಭೆಯಾಗಿ ಮೇಲ್ದರ್ಜೆಗೆ ಏರಲು ಕನಿಷ್ಠ 50 ಸಾವಿರದಿಂದ ಗರಿಷ್ಠ 5 ಲಕ್ಷ ಜನಸಂಖ್ಯೆ ಇರಬೇಕು. ಪುರಸಭೆಯಾಗಿರುವ  ದೇವನಹಳ್ಳಿಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಎಂಟು ಪಂಚಾಯಿತಿಗಳನ್ನು ವಿಲೀನ ಮಾಡಿಕೊಂಡು ವಿಸ್ತೀರ್ಣ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ.

ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಅಣ್ಣೇಶ್ವರ, ಕನ್ನಮಂಗಲ, ಬೆಟ್ಟಕೋಟೆ ಗ್ರಾಮ ಪಂಚಾಯಿತಿ ಸೇರಿಸಿಕೊಂಡು ನಗರಸಭೆಯಾದರೆ ಅನುಕೂಲ ಹೆಚ್ಚು ಎನ್ನುತ್ತಾರೆ ಸ್ಥಳೀಯರು. 

ತಾಲ್ಲೂಕಿನ ಉತ್ತರ ಗಡಿಯ ಯಲಹಂಕದ ಜಾಲ ಹೋಬಳಿಗೆ ಹೊಂದಿಕೊಂಡಂತೆ ವಿಮಾನ ನಿಲ್ದಾಣ ಸ್ಥಾಪನೆಯಾಗಿದೆ. ಆದರೆ ಇಡೀ ದೇವನಹಳ್ಳಿ ನಗರದ ಸ್ವರೂಪ ಪಡೆದುಕೊಂಡಿಲ್ಲ. ಇಂದಿಗೂ ದೇವನಹಳ್ಳಿ ಪಟ್ಟಣದಲ್ಲಿ ಗ್ರಾಮೀಣ ಸೊಗಡು ಮಾಸಿಲ್ಲ. ರಿಯಲ್‌ ಎಸ್ಟೇಟ್‌ನಿಂದಾಗಿ ಬಡಾವಣೆಗಳು ತಲೆ ಎತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮನೆಗಳು ನಿರ್ಮಾಣವಾಗಿಲ್ಲ. ದೊಡ್ಡ ಸಂಖ್ಯೆಯಲ್ಲಿ ಜನರು ವಲಸೆಯೂ ಬಂದಿಲ್ಲ.

ಒಂದು ಕಡೆ  ಕೃಷಿ ಭೂಮಿ ಉಳಿಸಿಕೊಳ್ಳಲು ರೈತರು ಹೋರಾಟ ಮಾಡುತ್ತಿದ್ದಾರೆ. ಮತ್ತೊಂದೆಡೆ ನಗರದ ಯಾವುದೇ ಸ್ವರೂಪ ಕಾಣದ ಗ್ರಾಮಗಳನ್ನು ಪಟ್ಟಣವೆಂದು ಗುರುತಿಸಿ, ಮರುನಾಮಕಾರಣ ಮಾಡಲು ಯೋಜನೆ ಸಿದ್ಧವಾಗುತ್ತಿದ್ದು, ಪರ ವಿರೋಧ ಚರ್ಚೆ ಆರಂಭವಾಗಿದೆ.

ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯೂ ದೇವನಹಳ್ಳಿಯ ಪುರಸಭೆಗೆ ಈ ಕುರಿತು ಪತ್ರ ವ್ಯವಹಾರ ನಡೆಸಿದ್ದು, ಪಂಚಾಯಿತಿಗಳ ವರಮಾನಗಳ ಕುರಿತು ಮಾಹಿತಿ ಕೇಳಿದೆ. ಕೃಷಿ ಜೀವನ ಬಿಟ್ಟು ಇತರೇ ಉದ್ಯಮ ಗೊತ್ತಿಲ್ಲದ ರೈತಾಪಿಗಳಿಗೆ ಒತ್ತಾಯ ಪೂರ್ವಕವಾಗಿ ನಗರದ ವ್ಯಾಪ್ತಿಗೆ ಸೇರಿಸಲು ಸದ್ದಿಲ್ಲದೇ ನಡೆಯುತ್ತಿರುವ ಪ್ರಕ್ರಿಯೆಕ್ಕೆ ಪ್ರಜ್ಞಾವಂತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇವನಹಳ್ಳಿ ನಗರಸಭೆಯಾದರೇ ಎಂಟು ಪಂಚಾಯಿತಿ ವ್ಯಾಪ್ತಿಯಲ್ಲಿ ಒದಗಿಸುತ್ತಿರುವ ಕಸ ವಿಲೇವಾರಿ, ನೈರ್ಮಲ್ಯತೆ, ಕುಡಿಯುವ ನೀರು, ಚರಂಡಿ ವ್ಯವಸ್ಥೆಗಳಿಗಾಗಿ ಈಗ ಪಾವತಿಸುತ್ತಿರುವ ತೆರಿಗೆಗಿಂತ ಹೆಚ್ಚು ತೆರಿಗೆಯನ್ನು ನಗರದ ಸ್ವರೂಪವಿಲ್ಲದಿರುವ ಪ್ರದೇಶದಿಂದ ವಸೂಲಿ ಮಾಡಲಾಗುತ್ತದೆ.

ಅಧಿಕಾರದ ಕೇಂದ್ರೀಕರಣವಾಗಿ ಸ್ಥಳೀಯವಾಗಿ ಗ್ರಾ.ಪಂಗಳಲ್ಲಿ ಸಿಗುತ್ತಿದ್ದ ಎಲ್ಲ ಸೇವೆಗಳನ್ನು ಪಡೆಯಲು ದೇವನಹಳ್ಳಿಗೆ ಬರಬೇಕಾಗುತ್ತದೆ. ಪಿಡಿಓಗಳ ಬದಲಾಗಿ ಎಂಟು ಗ್ರಾ.ಪಂಗಳಿಗೆ ಒಬ್ಬರೇ ಪೌರಾಯುಕ್ತರು ನೇಮಕವಾಗಲಿದ್ದಾರೆ. ಬಯಪ್ಪದಿಂದ ಅನುಮತಿ ಪಡೆಯದೇ ಗ್ರಾಮಗಳಲ್ಲಿ ರೈತರು ಕಟ್ಟಿಕೊಳ್ಳುವ ಮನೆಗಳೆಲ್ಲವೂ ಅಕ್ರಮ ಕಟ್ಟಡ ಎಂದೆನಿಸಿಕೊಳ್ಳುತ್ತದೆ.

ರಾಜಕೀಯ ಪ್ರತಿನಿಧಿತ್ವ ಕಡಿತ

ಎಂಟು ಗ್ರಾಮ ಪಂಚಾಯಿತಿಗಳ ಅಸ್ತಿತ್ವ ಕಳೆದುಕೊಳ್ಳುವುದರಿಂದ ಪ್ರಸ್ತುತ ಇರುವ 131 ಗ್ರಾ.ಪಂ ಸ್ಥಾನ, 5 ತಾ.ಪಂ ಸ್ಥಾನ, 3 ಜಿ.ಪಂ ಸ್ಥಾನ ರದ್ದಾಗಲಿದೆ. ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ರಾಜಕೀಯ ಪ್ರತಿನಿಧಿತ್ವ ಕಡಿತಗೊಳ್ಳಲಿದೆ.

ನಗರಸಭೆ ವ್ಯಾಪ್ತಿಯಲ್ಲಿ ಗ್ರಾ.ಪಂ ಸದಸ್ಯರಾಗಿ ಆಯ್ಕೆ ಆಗಲು ಸಾಧ್ಯವಿಲ್ಲ. ತಾಲ್ಲೂಕು ಪಂಚಾಯಿತಿಯ, ಜಿಲ್ಲಾ ಪಂಚಾಯಿತಿ ಕ್ಷೇತ್ರವೂ ರದ್ದಾಗಲಿದೆ. ಅದರ ವ್ಯಾಪ್ತಿಯೂ ಕಡಿಮೆಯಾಗುತ್ತದೆ. ಭವಿಷ್ಯದಲ್ಲಿ ಗ್ರಾ.ಪಂ ಸದಸ್ಯ, ಅಧ್ಯಕ್ಷ, ಉಪಾಧ್ಯಕ್ಷ, ತಾ.ಪಂ, ಜಿ.ಪಂ ಸದಸ್ಯರಾಗಬೇಕು ಎಂದು ಹಂಬಲವಿರುವ ವಿವಿಧ ಪಕ್ಷಗಳ ರಾಜಕೀಯ ಉತ್ಸಾಹಿಗಳಿಗೆ ಅವಕಾಶ ಕೈತಪ್ಪಲಿದೆ.

ಕೈತಪ್ಪುವ ಮೀಸಲಾತಿ

ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಉನ್ನತ ಶಿಕ್ಷಣದ ದಾಖಲಾತಿಗೆ, ನವೋದಯ ಸೇರಿದಂತೆ ವಿವಿಧ ಸರ್ಕಾರಿ ವಸತಿ ಶಾಲೆಗಳ ದಾಖಲಾತಿಗೆ ಹಾಗೂ ಸರ್ಕಾರಿ ನೌಕರಿಯ ನೇಮಕಾತಿಯಲ್ಲಿ ಲಭ್ಯವಿರುವ ಗ್ರಾಮೀಣ ಅಭ್ಯರ್ಥಿ ಕೋಟಾದಲ್ಲಿರುವ ಮೀಸಲಾತಿಯೂ ಕಡಿತಗೊಳ್ಳಲಿದ್ದು, ನಗರಸಭೆಯಿಂದಾಗಿ ಮುಂದಿನ ದಿನಗಳಲ್ಲಿ ಈ ಸವಲತ್ತು ದೊರೆಯುವುದಿಲ್ಲ.

ಹಲವು ಯೋಜನೆ ಸ್ಥಗಿತ

ನಗರಸಭೆ ವ್ಯಾಪ್ತಿಗೆ ಒಳಪಡುತ್ತಿರುವ ಎಂಟು ಪಂಚಾಯಿತಿಗಲ ಪೈಕಿ 5 ಗ್ರಾಪಂಗಳಿಗೆ ಈಗಾಗಲೇ ವಿವಿಧ ಯೋಜನೆಗಳಲ್ಲಿ ಉತ್ತಮ ಅಭಿವೃದ್ಧಿ ಸಾಧನೆಗಾಗಿ ಗಾಂಧಿ ಗ್ರಾಮ ಪುರಸ್ಕಾರ ಸೇರಿದಂತೆ, ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿವೆ.

ಈ ಪ್ರದೇಶವೂ ನಗರಸಭೆಗೆ ಸೇರಿಕೊಂಡರೇ ಉದ್ಯೋಗ ಖಾತ್ರಿ ಯೋಜನೆಗಳು, ಜಿ.ಪಂ, ತಾ.ಪಂ ಅನುದಾನವೂ ಸ್ಥಗಿತಗೊಳ್ಳಲಿದ್ದು, ಕೃಷಿ, ತೋಟಗಾರಿಕೆ ಇಲಾಖೆಯಿಂದ ಗ್ರಾಮೀಣ ಭಾಗದ ಜನರಿಗೆ ಸಿಗುವ ಆರ್ಥಿಕ ಚೈತನ್ಯ ರದ್ದಾಗುವ ಜೊತೆಗೆ, ಸ್ಥಳೀಯವಾಗಿರುವ ಜ್ವಲಂತ ಸಮಸ್ಯೆಗಳಿಗೆ ತ್ವರಿತವಾಗಿ ಅಭಿವೃದ್ಧಿ ಕೆಲಸ ಮಾಡುವುದು ಕ್ಲಿಷ್ಟವಾಗುತ್ತದೆ.

ನಿರ್ಧಾರ ಸ್ವಾಗತಾರ್ಹ

ದೇವನಹಳ್ಳಿಗೆ ಶ್ರೀಮಂತ ಪಂಚಾಯಿತಿಗಳು ವಿಲೀನವಾಗುವುದರಿಂದ ಅನುದಾನದ ಕೊರತೆ ದೂರಾಗಿ, ಐತಿಹಾಸಿಕ ನಗರ ವಿಶ್ವ ದರ್ಜೆಯ ಗುಣಮಟ್ಟದ ಅಭಿವೃದ್ಧಿ ಕಾಣಲಿದೆ. ಇದೇ ಕ್ಷೇತ್ರದಿಂದ ಆಯ್ಕೆಯಾಗಿರುವ ಕೆ.ಎಚ್‌.ಮುನಿಯಪ್ಪರು ಉಸ್ತುವಾರಿ ಸಚಿವರಾಗಿರುವುದು ವರದಾನವಾಗಲಿದೆ. ಸರ್ಕಾರ ನಿರ್ಧಾರ ಸ್ವಾಗತಾರ್ಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT