ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಆರೋಪ: ದೇವನಹಳ್ಳಿ ತಹಶೀಲ್ದಾರ್ ಶಿವರಾಜ್‌ ಅಮಾನತು

Published 11 ಸೆಪ್ಟೆಂಬರ್ 2023, 23:30 IST
Last Updated 11 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ದೇವನಹಳ್ಳಿ: ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ದೇವನಹಳ್ಳಿ ತಹಶೀಲ್ದಾರ್ ಶಿವರಾಜ್‌ ಅವರನ್ನು ಸೋಮವಾರ ಅಮಾನತು ಮಾಡಲಾಗಿದೆ. 

ಲೋಕಾಯುಕ್ತರ ಶಿಫಾರಸ್ಸಿನಂತೆ ಶಿವರಾಜ್‌ ಅವರನ್ನು ಅಮಾನತು ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ತಹಶೀಲ್ದಾರ್ ಶಿವರಾಜ್, ಆದಾಯಕ್ಕಿಂತಲೂ ಶೇ 225ರಷ್ಟು ಅಧಿಕ ಪ್ರಮಾಣದ ಆಸ್ತಿ ಹೊಂದಿದ್ದಾರೆ ಎಂದು ಲೋಕಾಯುಕ್ತ ಪ್ರಾಥಮಿಕ ತನಿಖೆಯಲ್ಲಿ ಧೃಡಪಟ್ಟಿದೆ ಎಂದು ಮೂಲಗಳು ತಿಳಿಸಿವೆ. 

ಲೋಕಾಯುಕ್ತ ಪೊಲೀಸರು ಆಗಸ್ಟ್‌ 17ರಂದು ಶಿವರಾಜ್‌, ಅವರ ಸ್ನೇಹಿತರು, ಸಂಬಂಧಿಗಳ ಮನೆ ಸೇರಿದಂತೆ ಏಕಕಾಲಕ್ಕೆ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದರು. ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಅಡಿಯಲ್ಲಿ ಆಗಸ್ಟ್‌ 30ರಂದು ಲೋಕಾಯುಕ್ತದಲ್ಲಿ ದೂರು ದಾಖಲು ಮಾಡಿಕೊಂಡಿದ್ದರು. 

ತಹಶೀಲ್ದಾರ್‌ ಹುದ್ದೆಯಲ್ಲಿ ಶಿವರಾಜ್‌ ಮುಂದುವರೆದರೆ ಪ್ರಕರಣದ ತನಿಖೆಗೆ ಅಡ್ಡಿಯಾಗುವ ಮತ್ತು ಸಾಕ್ಷ್ಯಗಳ ನಾಶ ಸಾಧ್ಯತೆ ಕಾರಣ ಅವರನ್ನು ಅಮಾನತು  ಮಾಡುವಂತೆ ಲೋಕಾಯುಕ್ತರು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ಇದಕ್ಕೂ ಮೊದಲು ದೇವನಹಳ್ಳಿಯ ತಹಶೀಲ್ದಾರ್ ಹುದ್ದೆಯಿಂದ ಶಿವರಾಜ್‌ ಅವರನ್ನು ಸರ್ಕಾರ ಜುಲೈ 28ರಂದು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ (ಕೆಎಟಿ) ತಡೆಯಾಜ್ಞೆ ತಂದಿದ್ದರು. ನಿವೃತ್ತಿಯ ಹೊಸ್ತಿನಲ್ಲಿ ಅಮಾನತುಗೊಂಡಿರುವ ಅವರು ಲೋಕಾಯುಕ್ತ ತನಿಖೆ ಎದುರಿಸಬೇಕಾಗಿದೆ.

ಒಂದೇ ಕುರ್ಚಿಗೆ ಹಗ್ಗ ಜಗ್ಗಾಟ

ತಹಶೀಲ್ದಾರ್ ಶಿವರಾಜ್‌ ಅವರನ್ನು ವರ್ಗಾವಣೆ ಮಾಡಿ ಆ ಜಾಗಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಸಹಾಯಕರಾಗಿದ್ದ ಎಚ್‌.ಬಾಲಕೃಷ್ಣರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಜುಲೈ 28ರ ಮಧ್ಯಾಹ್ನ ತಹಶೀಲ್ದಾರ್‌ ಆಗಿ ಬಾಲಕೃಷ್ಣ ಅವರು ಅಧಿಕಾರ ಸ್ವೀಕಾರ ಮಾಡಿದ್ದರು. ಅದಕ್ಕೆ ತಡೆ ತಂದಿದ್ದ ಶಿವರಾಜ್‌ ಹುದ್ದೆಯಲ್ಲಿ ಮುಂದುವರೆದಿದ್ದರು. ಇದೀಗಾ ಲೋಕಾಯುಕ್ತ ಶಿಫಾರಸ್ಸಿನ ಮೇರೆಗೆ ಅಮಾನತ್ತಾಗಿ ಆದೇಶ ಹೊರಬರುತ್ತಿದ್ದಂತೆಯೇ ಸೋಮವಾರ ಮಧ್ಯಾಹ್ನ ಪಟ್ಟಣದ ತಹಶೀಲ್ದಾರ್ ಕಚೇರಿಗೆ ಬಂದ ಎಚ್‌.ಬಾಲಕೃಷ್ಣರವರು ಮತ್ತೊಮ್ಮೆ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ಮೊದಲು ದೇವನಹಳ್ಳಿಯ 51ನೇ ತಹಶೀಲ್ದಾರ್‌ ಆಗಿ ಬಾಲಕೃಷ್ಣ ಅವರು ಎರಡು ತಿಂಗಳು ಕರ್ತವ್ಯ ನಿರ್ವಹಿಸಿದ್ದು ಇದೀಗಾ 61ನೇ ತಹಶೀಲ್ದಾರ್‌ ಆಗಿ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT