ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿ: ಕೊಯಿರಾ ಹಳೆಯ ಶಾಲೆಯ ಮರಗಳಿಗೆ ಕೊಡಲಿ

ನಿಯಮ ಉಲ್ಲಂಘಿಸಿ ಮರ ಕಟಾವು
Published 9 ಫೆಬ್ರುವರಿ 2024, 13:12 IST
Last Updated 9 ಫೆಬ್ರುವರಿ 2024, 13:12 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಹೋಬಳಿಯ ಕೊಯಿರ ಗ್ರಾಮದ ಹಳೆಯ ಸರ್ಕಾರಿ ಆವರಣದಲ್ಲಿ ಮೂರು ಬೃಹತ್‌ ಮರಗಳನ್ನು ಕಿಡಿಗೇಡಿಗಳು ಕಡಿದು ಸಾಗಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಳೆದ 12 ವರ್ಷಗಳಿಂದ ಈ ಶಾಲೆಯಲ್ಲಿ ಯಾವುದೇ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿಲ್ಲ. ಇಲ್ಲಿದ್ದ ಶಾಲೆಯನ್ನು ಗ್ರಾಮದಿಂದ ಅರ್ಧ ಕಿ.ಮೀ ದೂರದ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಸ್ಥಳ ಶಿಕ್ಷಣ ಇಲಾಖೆಯ ಸುಪರ್ದಿಯಲ್ಲಿದೆ.

ಆದರೆ ಮರ ಕಡಿದವರಿಂದ ಹೊಸ ಶಾಲೆಯ ಎಸ್‌ಡಿಎಂಸಿ ಹಣ ವಸೂಲಿ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ತಪ್ಪಿಸ್ಥರನ್ನು ರಕ್ಷಿಸಲು ಹೊಸ ಶಾಲಾ ಶಿಕ್ಷಕ ವೃಂದ ಸೇರಿದಂತೆ ಸ್ಥಳೀಯರ ಮುಖಂಡು ಸಭೆ ನಡೆಸಿ, ಅವರಿಂದ ಎಸ್‌ಡಿಎಂಸಿಗೆ ₹15 ಸಾವಿರ ಪಾವತಿಸುವಂತೆ ಮಾಡಿದ್ದಾರೆ.

ಮರ ಕಡಿಯಲು ಹೊಸ ಶಾಲೆಯ ಎಸ್‌ಡಿಎಂಸಿ ಅನುಮತಿಸಿರುವುದು ನಿಯಮಬಾಹಿರ ಹಾಗೂ ಟೆಂಡರ್‌ ಕರೆಯದೆ ಮರ ಕಡಿದು ಮಾರಾಟ ಮಾಡಿರುವುದು ನಿಯಮ ಉಲ್ಲಂಘನೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಬಗ್ಗೆ ಸಾರ್ವನಿಕವಾಗಿ ಚರ್ಚೆ ಆಗುತ್ತಿದ್ದಂತೆ ಹಳೆ ಶಾಲೆಯೂ ಹೊಸ ಶಾಲೆಗೆ ಸೇರಿದೆ ಎಂಬಂತೆ ಸಭಾ ನಡಾವಳಿಗಳನ್ನು ಸೃಷ್ಟಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಈಗಾಗಲೇ ಇಲ್ಲಿದ್ದ ಶಾಲೆಯೂ 12 ವರ್ಷಗಳ ಮುನ್ನವೇ ಸ್ಥಳಾಂತರವಾಗಿದ್ದು, ಹೊಸ ಶಾಲೆಗೆ ಮಾತ್ರ ಎಸ್‌ಡಿಎಂಸಿ ಸೀಮಿತ. ಹಳೆಯ ಶಾಲೆಯ ಶಿಕ್ಷಣ ಇಲಾಖೆಯ ಸುಪರ್ದಿಯಲ್ಲಿದೆ. ತಪ್ಪಿತಸ್ಥರನ್ನು ಕಾಪಾಡಲು ಎಸ್‌ಡಿಎಂಸಿ ತಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಹಳೆಯ ವಿದ್ಯಾರ್ಥಿಗಳು. ನಾವು ವಿದ್ಯಾರ್ಥಿಯಾಗಿದ್ದಾಗ ಇಲ್ಲಿ ಮರಗಳನ್ನು ನೆಡಲಾಗಿತ್ತು. ಹುಲಸಾಗಿ ಬೆಳೆದಿದ್ದ ಎಂದು ಹಳೆಯ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಯಿರ ಗ್ರಾಮದ ಹಳೆ ಸರ್ಕಾರಿ ಶಾಲೆಯ ಆವರಣದಲ್ಲಿದ್ದ ಸಿಲ್ವರ್‌ ಮರಗಳು
ಕೊಯಿರ ಗ್ರಾಮದ ಹಳೆ ಸರ್ಕಾರಿ ಶಾಲೆಯ ಆವರಣದಲ್ಲಿದ್ದ ಸಿಲ್ವರ್‌ ಮರಗಳು

ಸರ್ಕಾರದ ಚರಾಸ್ತಿ ಮತ್ತು ಸಿರಾಸ್ತಿಯನ್ನು ಹರಾಜು ಮೂಲಕವೇ ಮಾರಾಟ ಮಾಡಬೇಕು. 35 ವರ್ಷಗಳಿಂದ ಇದ್ದ ಮರವನ್ನು ಕಾನೂನು ಪಾಲಿಸದೆ ಕಡಿದು ಹಾಕಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.

-ಚಿಕ್ಕೇಗೌಡ ಪರಿಸರವಾದಿ ಕೊಯಿರ

ಹಳೆ ಶಾಲಾ ಕಟ್ಟಡದಲ್ಲಿ ಮರ ಕಟಾವು ಮಾಡಲು ಎಸ್‌ಡಿಎಂಸಿ ಸಮಿತಿಯ ಒಪ್ಪಿಗೆಯಂತೆ ಕಟಾವು ಮಾಡಲಾಗಿದೆ. ಮರ ಕಟಾವು ಮಾಡಿದವರು ₹15 ಸಾವಿರ ಪಾವತಿ ಮಾಡಿದ್ದಾರೆ.

-ರಾಜಣ್ಣ ಮುಖ್ಯ ಶಿಕ್ಷಕ ಕೊಯಿರ ಪ್ರಾ.ಪಾ.ಶಾಲೆ

ಮರ ಕಟಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಇಲಾಖೆಯ ಗಮನಕ್ಕೆ ತಂದು ವರದಿ ನೀಡಲಾಗಿದೆ. ಯಾವುದೇ ರೀತಿಯ ಕಾನೂನು ತೊಡಕುಗಳಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು

-ಕೃಷ್ಣರಾಮ್ ಸಿಆರ್‌ಪಿ ಕೊಯಿರ ಕ್ಲಸ್ಟರ್

ಎಸ್‌ಡಿಎಂಸಿ ಎಡವಟ್ಟು

ಹೊಸ ಶಾಲೆಯ ಎಸ್‌ಡಿಎಂಸಿ ತನ್ನ ವ್ಯಾಪ್ತಿಗೆ ಬಾರದ ಹಳೆ ಶಾಲಾ ಕಟ್ಟಡಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಆಗಸ್ಟ್‌ನಲ್ಲಿ ಅಲ್ಲಿರುವ ಕಟ್ಟಡ ಮರ ತೆರವು ಮಾಡಬೇಕು ಎಂದು ಸಭಾ ನಡಾವಳಿ ಸೃಷ್ಟಿಸಿದೆ. ಆದರೆ ಈ ಕುರಿತು ಯಾವುದೇ ಟೆಂಡರ್‌ ಪ್ರಕ್ರಿಯೆ ನಡೆದಿಲ್ಲ. ಏಕಾಏಕಿ ಮರ ಕಡಿದಿರುವುದರಿಂದ ಅದಕ್ಕೆ ದಂಡವಾಗಿ ₹15 ಸಾವಿರ ಎಸ್‌ಡಿಎಂಸಿಗೆ ಪಾವತಿಯಾಗಿದೆ. ಇವರೇ ಅನುಮತಿ ಕೊಟ್ಟು ಅವರಿಗೆ ದಂಡ ಪಾವತಿ ಮಾಡಿರುವುದು ಎಷ್ಟು ಸಮಂಜಸ ಎಂಬುದು ಪರಿಸರವಾದಿಗಳ ವಾದವಾಗಿದೆ. ಮರ ಕಡಿದು ಮೂರು ದಿನ ಕಳೆದಿದ್ದರೂ ಸುಮ್ಮನಿದ್ದ ಶಾಲೆಯ ಮುಖ್ಯಶಿಕ್ಷಕರು ಮರದ ವಿಚಾರವಾಗಿ ಫೆ.9ರಂದು ಸ್ಥಳೀಯ ಪೊಲೀಸರು  ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಶಾಲಾ ಅಭಿವೃದ್ಧಿ ಸಮಿತಿಯಲ್ಲಿ ಸಭೆಯಲ್ಲಿ ತೀರ್ಮಾನಿಸಿ ಮರ ತೆರವು ಮಾಡಲಾಗಿದೆ. ಮರ ಕಡಿದವರಿಂದ ಈಗಾಗಲೇ ₹15 ಸಾವಿರ ಹಣ ಸಂದಾಯವಾಗಿದೆ ಎಂದು ಪತ್ರಕ್ಕೆ ಬಿಇಒ ಪ್ರತಿಕ್ರಿಯಿಸಿದ್ದಾರೆ. ಇಲ್ಲಿ ಟೆಂಡರ್‌ ಯಾವಾಗ ನಡೆಯಿತು ಯಾರು ಮರವನ್ನು ತೆರವು ಮಾಡಿದ್ದಾರೆ ಎಂದು ತಿಳಿಸಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT