ಭಾನುವಾರ, ಸೆಪ್ಟೆಂಬರ್ 27, 2020
21 °C

ದೇವನಹಳ್ಳಿ -ವಿಜಯಪುರ ಮುಖ್ಯರಸ್ತೆ ವಿಸ್ತರಣೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಇಲ್ಲಿನ ವಿಜಯಪುರ-ದೇವನಹಳ್ಳಿ ಮುಖ್ಯರಸ್ತೆಯ ಅಗಲೀಕರಣಕ್ಕಾಗಿ ಲೋಕೋಪಯೋಗಿ ಸಚಿವರೇ ನೀಡಿದ್ದರೂ ಭರವಸೆ ಈಡೇರಿಸಿಲ್ಲ’ ಎಂದು ಮುಖಂಡ ಆಶ್ವಥಪ್ಪ ಬೇಸರ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರಾಗಿದ್ದ ಎಚ್.ಸಿ.ಮಹದೇವಪ್ಪ ಅವರು ವಿಜಯಪುರಕ್ಕೆ ಬಂದಿದ್ದಾಗ ನೀಡಿದ್ದ ಮನವಿಯನ್ನು ಪಡೆದುಕೊಂಡಿದ್ದ ಅವರು, ‘ದೇವನಹಳ್ಳಿಯಿಂದ ಕೋಲಾರದವರೆಗೂ ರಸ್ತೆ ಅಗಲೀಕರಣಕ್ಕೆ ಅನುದಾನ ಬಿಡುಗಡೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿ ಮುಗಿದು ಮೈತ್ರಿ ಸರ್ಕಾರವೂ ಅಸ್ತಿತ್ವಕ್ಕೆ ಬಂದ ನಂತರವೂ ರಸ್ತೆ ಅಗಲೀಕರಣದ ಕಡೆಗೆ ಲೋಕೋಪಯೋಗಿ ಸಚಿವರು ಗಮನವನ್ನೆ ಹರಿಸಲಿಲ್ಲ. ಸ್ಥಳೀಯವಾಗಿ ಇಲಾಖೆಯವರೂ ಗಮನಹರಿಸಿಲ್ಲ’ ಎಂದು ಆರೋಪಿಸಿದರು.

ಮುಖಂಡ ಆಸೀಪ್ ಮಾತನಾಡಿ, ‘ವಿಜಯಪುರದಿಂದ ದೇವನಹಳ್ಳಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಸಾಕಷ್ಟು ಜನರೂ ಮೃತಪಟ್ಟಿದ್ದಾರೆ. ರಾತ್ರಿಯ ವೇಳೆಯಲ್ಲಿ ಈ ರಸ್ತೆಯಲ್ಲಿ ವೇಗವಾಗಿ ಬರುವ ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳಿಗೆ ಡಿಕ್ಕಿಹೊಡೆದು ಜನರು ಸಾವನ್ನಪ್ಪಿದ್ದಾರೆ. ಅಪಘಾತಗಳಾದಾಗ ಮಾತ್ರ ಸ್ಥಳಕ್ಕೆ ಬರುವ ಅಧಿಕಾರಿಗಳು, ರಸ್ತೆ ಅಗಲೀಕರಣಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳುತ್ತಾರಾದರೂ ಇದುವರೆಗೂ ಅಗಲೀಕರಣ ಕಾಮಗಾರಿ ಆರಂಭಿಸಿಲ್ಲ. ರಸ್ತೆಯ ಇಕ್ಕೆಲುಗಳಲ್ಲಿ ಒಣಗಿರುವ ಮರಗಳನ್ನು ತೆರವುಗೊಳಿಸಿ ಅಪಘಾತಗಳನ್ನು ತಪ್ಪಿಸಬೇಕು' ಎಂದು ಒತ್ತಾಯಿಸಿದರು.

ಮುಖಂಡ ಗೊಡ್ಲುಮುದ್ದೇನಹಳ್ಳಿ ಮುನಿರಾಜು ಮಾತನಾಡಿ, ‘ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಭಯದಿಂದಲೇ ವಾಹನ ಚಾಲನೆ ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಇಕ್ಕೆಲಗಳಲ್ಲೆ ಲಾರಿಗಳನ್ನು ನಿಲ್ಲಿಸಿಕೊಂಡಿರುವುದರಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಒಂದೇ ಬಾರಿಗೆ ಎರಡು ಭಾರೀ ವಾಹನಗಳು ಸಂಚರಿಸಲು ಆಗುವುದಿಲ್ಲ. ರಸ್ತೆಯುದ್ದಕ್ಕೂ ಮೂರು ಕಡೆಗಳಲ್ಲಿ ಎತ್ತರದ ಪ್ರದೇಶಗಳಿವೆ. ಎದುರಿಗೆ ಬರುವ ವಾಹನಗಳನ್ನು ಗುರುತಿಸಲು ಸಾಧ್ಯವಾಗದೆ ಅಪಘಾತಗಳು ಸಂಭವಿಸುತ್ತಿವೆ. ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಇತ್ತಿಚೆಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಸ್ಥಳೀಯ ವ್ಯಕ್ತಿ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲೂ ಅಧಿಕಾರಿಗಳು ರಸ್ತೆ ವಿಸ್ತರಣೆಗೆ ಮಾಡಲಿಕ್ಕೆ ಶೀಘ್ರವಾಗಿ ಚಾಲನೆ ದೊರೆಯಲಿದೆ ಎಂದಿದ್ದರು. ಆದರೆ, ಇದುವರೆಗೂ ಆರಂಭವಾಗಿಲ್ಲ’ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.