ಶನಿವಾರ, ಫೆಬ್ರವರಿ 27, 2021
21 °C
ಖಾಸಗಿ ಕಂಪನಿಗಳಿಗೆ ಜಿ.ಪಂ ಸದಸ್ಯ ಕೆ.ಸಿ.ಮಂಜುನಾಥ್ ಮನವಿ

ದೇವನಹಳ್ಳಿ: ಕೆರೆಗಳ ಸಮಗ್ರ ಅಭಿವೃದ್ಧಿಗೆ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಬಯಲು ಸೀಮೆ ಪ್ರದೇಶದಲ್ಲಿರುವ ಕೆರೆಗಳ ಅಭಿವೃದ್ಧಿಗೆ ಸಾಮಾಜಿಕ ಕಳಕಳಿಯಿಂದ ಖಾಸಗಿ ಕಂಪನಿಗಳು ಒತ್ತು ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಹೇಳಿದರು.

ಇಲ್ಲಿನ ಕನ್ನಮಂಗಲ ಗ್ರಾಮದ ಕೆರೆಯಲ್ಲಿ ಐ.ಟಿ.ಸಿ ಖಾಸಗಿ ಕಂಪನಿ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಹೂಳು ಎತ್ತುವ ಕಾಮಗಾರಿಗೆ ನಡೆದ ಭೂಮಿ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಮಂಗಲ, ಕೆಂಪ್ಪತಿಮ್ಮನಹಳ್ಳಿ , ಜೋಗಿಹಳ್ಳಿ, ಪೂಜನಹಳ್ಳಿ, ದೊಡ್ಡಪ್ಪನಹಳ್ಳಿ, ಕನ್ನಮಂಗಲಪಾಳ್ಯ ವ್ಯಾಪ್ತಿಯ ಕೆರೆ 86 ಎಕರೆ ವಿಸ್ತೀರ್ಣದಲ್ಲಿದೆ. ಕಳೆದ ಮೂರು ವರ್ಷಗಳ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಕರೀಗೌಡರ ಕಾಳಜಿಯಿಂದ ಹೂಳೆತ್ತಲು ಆರಂಭಿಸಲಾಗಿತ್ತು. 30 ಎಕರೆಯಲ್ಲಿ ಬೆಳೆದಿದ್ದ ಬಿದಿರು ಪೊದೆಗಳು ಸರಾಗವಾಗಿ ನೀರು ಹರಿಯಲು ಅಡ್ಡಿಯಾಗಿತ್ತು. ಅಲ್ಲದೆ ಕೊರೊನಾದಿಂದ ಕಾಮಗಾರಿಗೆ ಅಡ್ಡಿಯಾಗಿತ್ತು. 

ಹೂಳು ಮೂರು ಅಡಿ ಮಾತ್ರ ಎತ್ತಬೇಕು ಎಂದು ಸರ್ಕಾರದ ಮಾರ್ಗಸೂಚಿಯನ್ನು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕೆರೆಯ ಮಧ್ಯೆ ನಡುಗಡ್ಡೆ ನಿರ್ಮಾಣ ಮಾಡಿ ಅದರ ಸುತ್ತಲು ವಿವಿಧ ದೇಸಿ ಹಣ್ಣಿನ ಗಿಡ ಬೆಳೆಸುವ ಚಿಂತನೆ ಇದೆ. ಪ್ರತಿಯೊಂದು ಜೀವ ಸಂಕುಲಕ್ಕೆ ಕುಡಿಯಲು ನೀರು ಬೇಕು, ಪಕ್ಷಿ ಸಂಕುಲಗಳಿಗೆ ಆಹಾರ ಮತ್ತು ಆಶ್ರಯಕ್ಕಾಗಿ ಗಿಡಮರಗಳು ಬೇಕು. ಪ್ರಕೃತಿ ಬಿಟ್ಟು ಬದುಕಲು ಮಾನ
ವನಿಗೆ ಸಾಧ್ಯವಿಲ್ಲ. ಗತಕಾಲ ಮರುಸ್ಥಾಪಿಸಬೇಕು. ಭವಿಷ್ಯದ ಪೀಳಿಗೆಗೆ ಅನುಕೂಲವಾಗಬೇಕು. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಸುತ್ತಮುತ್ತ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕಂಪನಿಗಳೊಂದಿಗೆ ಒಳನಾಟ ಇಟ್ಟುಕೊಂಡು ಸರ್ಕಾರಿ ಶಾಲೆಗಳ ಆಧುನೀಕರಣ ಮತ್ತು ಕೆರೆಗಳ ಅಭಿವೃದ್ಧಿ ಮಾಡಿಕೊಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್.ನಾಗೇಶ್ ಮಾತನಾಡಿ, ಈ ಒಂದು ಕೆರೆ ಅಭಿವೃದ್ಧಿಯಾಗಿ ಮಳೆಯಿಂದ ತುಂಬಿದರೆ ಕೆರೆ ಸುತ್ತಮುತ್ತ ಇರುವ ನೂರಾರು ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗಲಿದೆ. ಜೊತೆಗೆ ಕುಡಿಯುವ ನೀರಿನ ಕೊರತೆ ನೀಗಲಿದೆ. ತಾಲ್ಲೂಕಿನಲ್ಲಿರುವ ಪ್ರತಿಯೊಂದು ಕೆರೆ ದುರಸ್ತಿ ಮಾಡಿ ಸಮರ್ಪಕ ನಿರ್ವಹಣೆ ಮಾಡಿದರೆ ಯಾವುದೇ ನೀರಾವರಿ ಯೋಜನೆ ಅವಶ್ಯ ಇರುವುದಿಲ್ಲ ಎಂದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಆಂಬರೀಷ್, ಗೌರಮ್ಮ, ನಂದಿನಿ, ಲಕ್ಷ್ಮಕಾಂತ್, ರಾಮಾಂಜಿನಪ್ಪ, ನಾರಾಯಣಸ್ವಾಮಿ, ನಾಗರಾಜ್, ಕೃಷ್ಣಯ್ಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು