ಮಂಗಳವಾರ, ಡಿಸೆಂಬರ್ 1, 2020
25 °C

ಅಶೋಕ ವನದಲ್ಲಿ ಕಂಡ ಕೈರಾತ

ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

ಏಕಾಶಿಪುರದ ಅಶೋಕ ವನದಲ್ಲಿ ಕಂಡ ಕೈರಾತ ಪಕ್ಷಿ

ದೊಡ್ಡಬಳ್ಳಾಪುರ: ದೂರದಿಂದ ಥಟ್ಟನೆ ನೋಡಿದರೆ ಕೋಗಿಲೆಯಂತೆ ಕಾಣುತ್ತದೆ. ಆದರೆ ಒಂದಿಷ್ಟು ಹತ್ತಿರದಿಂದ ಸೂಕ್ಷ್ಮವಾಗಿ ಗಮನಿಸಿದರಷ್ಟೇ ಇದು ಕೋಗಿಲೆ ಅಲ್ಲ; ಕೈರಾತ ಎಂದು ತಿಳಿಯುತ್ತದೆ.

ಹೌದು, ತಾಲ್ಲೂಕಿನ ಏಕಾಶಿಪುರದ ಆಂಜನೇಯಸ್ವಾಮಿ ದೇವಾಲಯ ಸಮೀಪ ನಿರ್ಮಿಸಲಾಗಿರುವ ಅಶೋಕ ವನದಲ್ಲಿ ಕೈರಾತ (Blue faced malkoha) ಪಕ್ಷಿ ಕಂಡು ಬಂದಿತು.

ಈ ಪಕ್ಷಿ ತಾಲ್ಲೂಕಿನ ಮಟ್ಟಿಗೆ ಅಪರೂಪಕ್ಕೆ ಒಮ್ಮೆ ಮಾತ್ರ ಕಾಣುತ್ತಿರುವ ಪಕ್ಷಿಯಾಗಿದೆ ಎನ್ನುತ್ತಾರೆ ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ್‌.

ಸೂಕ್ಷ್ಮವಾಗಿ ಗಮನಿಸುವಿಕೆ ಹಾಗೂ ಆಲಿಸುವಿಕೆ ಇದ್ದರೆ ಪ್ರಕೃತಿಯಲ್ಲಿ ಸದಾ ವಿಸ್ಮಯ ಕಾಣಿಸುತ್ತವೆ ಎಂಬುದನ್ನು ಕೋಗಿಲೆ ಕುಟುಂಬಕ್ಕೆ ಸೇರಿದ ನೀಲಿ ಮುಖದ ಕೈರಾತ ಕಣ್ಣಿನ ಮೂಲಕ ನೋಡುಗರ ಗಮನ ಸೆಳೆಯುತ್ತದೆ.

ಈಚೆಗೆ ಏಕಾಶಿಪುರ ಸುತ್ತಮುತ್ತ ಕೆಲ ಪಕ್ಷಿಪ್ರಿಯರ ಕಣ್ಣಿಗೆ ಮಂಗಟೆ ಪಕ್ಷಿ ಕಂಡಿರುವ ಬಗ್ಗೆ ಮಾಹಿತಿ ಇತ್ತು. ಹೀಗಾಗಿ ಮಂಗಟೆ ಹುಡುಕಾಟದ ನಡುವೆ ಕೈರಾತ ಮೊದಲ ನೋಟದಲ್ಲಿಯೇ ಪಕ್ಷಿ ಪ್ರಿಯರು ಖುಷಿಗೊಳ್ಳುವಂತೆ ಮಾಡಿದೆ.

ಕೈರಾತ ಪಕ್ಷಿ ಕಣ್ಣಿನ ಸುತ್ತ ಇರುವ ಬಿಳಿಯ ಬಣ್ಣದ ಉಂಗುರ ಬಿಳಿಗಣ್ಣಿನ ಚಿಟಗುಬ್ಬಿ(ವೈಟ್ ಏ) ಪಕ್ಷಿಯಲ್ಲಿ ಮಾತ್ರ ಕಾಣಬಹುದಾಗಿದೆ. ಆದರೆ, ಲಂಟನಾ ಬೇಲಿಯೊಳಗೆ ಕೂತು ಇಣುಕಿ ನೋಡಿದ ಕೈರಾತದಲ್ಲಿ ಉದ್ದನೆ ಬಾಲ, ಹಸಿರು ಬಣ್ಣದ ಕೊಕ್ಕು, ಕಣ್ಣಿನ ಸುತ್ತಲೂ ನೀಲಿ ಬಣ್ಣದ ಉಂಗುರದ ನಡುವೆ ಕೆಂಡದ ಕೆಂಪಿನ ಕಣ್ಣು ಗಮನ ಸೆಳೆಯುತ್ತದೆ.

ತನ್ನ ಆಹಾರಕ್ಕೆ ಅನುಕೂಲವಾಗುವಂತೆ ಮೇಲೆ ಹಾರಾಡುವುದಕ್ಕಿಂತ ಹೆಚ್ಚಾಗಿ ಬೇಲಿಯೊಳಗಿನ ನೆಲದ ಮೇಲೆ ಓಡಾಡುವ ಮೂಲಕವೇ ಆಹಾರವನ್ನು (ಚಿಕ್ಕ ಹುಳುಗಳು,ಮಿಡತೆ ) ಹುಡುಕಿ ತಿನ್ನುತ್ತದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಮಟ್ಟಿಗೆ ಅಪರೂಪವಾಗಿರುವ ಕೈರಾತ, ಪಕ್ಷಿ ಪ್ರಿಯರ ಕಣ್ಣಿಗೆ ಕಾಣಿಸಿಕೊಂಡು ಖುಷಿ ನೀಡಿದೆ ಎನ್ನುತ್ತಾರೆ ಚಿದಾನಂದ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು