ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತ ಸಮುದಾಯದಿಂದ ಪರ್ಯಾಯ ರಾಜಕೀಯ

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ನಿರ್ಧಾರ
Published 24 ಏಪ್ರಿಲ್ 2024, 4:51 IST
Last Updated 24 ಏಪ್ರಿಲ್ 2024, 4:51 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:  ಸಮಸ್ತ ದುಡಿಯುವ ಜನ ಒಂದುಗೂಡಿ ಐಕ್ಯ ಶಕ್ತಿಯಾಗಿ ಸಂವಿಧಾನ ಬಲಪಡಿಸಲು ಹಾಗೂ ಎಲ್ಲಾ ಶೋಷಿತ ಸಮುದಾಯಗಳು ಸಾಹಿತಿ-ಕಲಾವಿದರ ಜೊತೆಗೂಡಿ ಮುಂದಿನ ದಿನಗಳಲ್ಲಿ ಪರ್ಯಾಯ ರಾಜಕೀಯ ಕಟ್ಟುವ ಕಡೆಗೂ ಹೆಜ್ಜೆ ಹಾಕುವ ನಿರ್ಧಾರವನ್ನು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ತೆಗೆದುಕೊಂಡಿದೆ.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ರಮೇಶ್ ರಾಮಗೊಂಡನಹಳ್ಳಿ ಈ ವಿಚಾರ ತಿಳಿಸಿದರು.

ದೇಶದ ದುಡಿಯುವ ವರ್ಗ, ದಮನಿತರು, ಅಲ್ಪಸಂಖ್ಯಾತರು ಮತ್ತು ಪ್ರಜ್ಞಾವಂತರು ಒಂದಾಗಿದ್ದಾರೆ. ಬಿಜೆಪಿ ಸೋಲಿಸಿ ಸಂಘ ಪರಿವಾರದ ಷಡ್ಯಂತ್ರ ವಿಫಲಗೊಳಿಸಲು ಒಗ್ಗೂಡಿ ಶ್ರಮಿಸಲು ಮುಂದಾಗಿದ್ದಾರೆ ಎಂದರು.

‘ಶರಣಾಗುವುದಿಲ್ಲ, ಸಂವಿಧಾನದ ನಾಶಕ್ಕೆ ಅವಕಾಶ ನೀಡುವುದಿಲ್ಲ’ ಎಂಬ ಘೋಷಣೆಯೊಂದಿಗೆ ಈ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವ ನಿಟ್ಟಿನಲ್ಲಿ ಊರು, ಕೇರಿ, ಹಾಡಿಗಲ್ಲಿಗಳಲ್ಲಿ ಪ್ರತಿಯೊಬ್ಬರೂ ಬಿಜೆಪಿ, ಜೆಡಿಎಸ್‌ ವಿರುದ್ಧ ಮತ ಹಾಕುವಂತೆ ಮನವೊಲಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಮುಖಂಡ ರಾಜುಸಣ್ಣಕ್ಕಿ ಮಾತನಾಡಿ, ದೇಶದ ಜನಸಾಮಾನ್ಯರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳಲ್ಲಿ ತೆಗೆದುಕೊಂಡ ಎಲ್ಲಾ ನಿರ್ಧಾರಗಳು ಜನ ವಿರೋಧಿ ಹಾಗೂ ರೈತ ವಿರೋಧಿಯಾಗಿವೆ ಎಂದು ದೂರಿದರು.

ಛಲವಾದಿ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಗುರುರಾಜಪ್ಪ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬರುವ ಮೊದಲಿನಿಂದಲೂ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳುತ್ತಾ ಸಂವಿಧಾನ ಬಾಹಿರ ಕಾನೂನು ಜಾರಿ ಮಾಡುತ್ತಿದ್ದಾರೆ. ನಿರುದ್ಯೋಗ ಸಮಸ್ಯೆಯನ್ನು ಹೆಚ್ಚಿಸಿ ದೇಶದ ಯುವಜನರನ್ನು ಅತಂತ್ರದಲ್ಲಿಟ್ಟಿದ್ದಾರೆ. ಅಹಿಂದ ವರ್ಗಗಳ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿದಲ್ಲದೆ ಧರ್ಮ, ಜಾತಿಗಳ ನಡುವಿನ ಕಲಹಕ್ಕೆ ಅವರನ್ನು ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

ದಲಿತ ಮುಖಂಡ ವಡ್ಡರಹಳ್ಳಿ ರಾಜಗೋಪಾಲ್ ಮಾತನಾಡಿ, ದಕ್ಷಿಣ ರಾಜ್ಯಗಳಿಂದ ಸಂಗ್ರಹವಾದ ಅತಿ ಹೆಚ್ಚು ತೆರಿಗೆಯ ಪಾಲನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ನೀಡಲಾಗುತ್ತಿದೆ. ಈ ಮೂಲಕ ಪ್ರಾದೇಶಿಕ ಅಸಮಾನತೆ ನಿರಂತರವಾಗಿ ಹೆಚ್ಚಿದೆ. ರಾಜ್ಯಗಳ ಸ್ವಾಯತ್ತತೆಯನ್ನು ಕಸಿದುಕೊಳ್ಳುತ್ತಿದ್ದಾರೆ. ತಮ್ಮ ಜನವಿರೋಧಿ ನೀತಿಗಳನ್ನು ವಿರೋಧಿಸಿದವರ ಮೇಲೆ ತೆರಿಗೆ ಭಯೋತ್ಪಾದನೆ ಮಾಡುತ್ತಾ ವಿರೋಧವನ್ನು ಹತ್ತಿಕ್ಕುತ್ತಿದ್ದಾರೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ಮುನಿಸುಬ್ಬಯ್ಯ, ಕುರುಬರಹಳ್ಳಿ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT