ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದುರ್ನಾತಕ್ಕೆ ಊಟ ಸೇರುತ್ತಿಲ್ಲ‌, ನಿದ್ದೆ ಬರುತ್ತಿಲ್ಲ: ಸ್ಪಂದಿಸದ ಜನಪ್ರತಿನಿಧಿ

ಚರಂಡಿ ವ್ಯವಸ್ಥೆಯನ್ನೇ ಕಾಣದ ಇಂದಿರಾನಗರ * ಪರಿಶಿಷ್ಟರ ಕಾಲೊನಿಯಲ್ಲಿ ಸೌಲಭ್ಯ ಮರಿಚೀಕೆ
Published : 23 ಸೆಪ್ಟೆಂಬರ್ 2024, 4:21 IST
Last Updated : 23 ಸೆಪ್ಟೆಂಬರ್ 2024, 4:21 IST
ಫಾಲೋ ಮಾಡಿ
Comments

ವಿಜಯಪುರ(ದೇವನಹಳ್ಳಿ): ಚರಂಡಿ ವ್ಯವಸ್ಥೆ ಇಲ್ಲದೆ ಸಣ್ಣ ಕಾಲುವೆಯಲ್ಲಿ ಹರಿಯುತ್ತಿರುವ ಕೊಳಚೆ ನೀರು. ಗಬ್ಬುನಾತದಿಂದ ನೆಮ್ಮದಿಯಿಂದ ಊಟ–ನಿದ್ದೆ ಮಾಡದ ಜನ. ಇಲ್ಲಿ ಸ್ವಚ್ಚತೆ ಎಂಬುದು
ಮರಿಚೀಕೆ...

–ಇದು ಯಾವುದೇ ಕುಗ್ರಾಮವಲ್ಲ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 20 ಕಿ.ಮೀ ಅಂತರದಲ್ಲಿರುವ ವಿಜಯಪುರದ 20ನೇ ವಾರ್ಡ್‌ನ ಇಂದಿರಾನಗರ.

ಇಲ್ಲಿ 100ಕ್ಕೂ ಹೆಚ್ಚು ಕುಟುಂಬ ವಾಸ ಇರುವ ಈ ಬಡಾವಣೆ ಇದುವರೆಗೆ ಚರಂಡಿ ವ್ಯವಸ್ಥೆಯನ್ನೇ ಕಂಡಿಲ್ಲ. ಜನರೇ ಮಣ್ಣು ಅಗೆದು ನಿರ್ಮಿಸಿಕೊಂಡಿರುವ ಕಾಲುವೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಈ ಜಾಗದಲ್ಲಿ ಗಿಡಗಂಟಿ ಬೆಳೆದು ನೀರು ಸರಾಗವಾಗಿ ಹರಿಯದೆ ಇಡೀ ಪ್ರದೇಶವೇ ಗಬ್ಬು
ನಾರುತ್ತಿದೆ.

ಪರಿಶಿಷ್ಟರೇ ಹೆಚ್ಚಾಗಿ ವಾಸಿಸುತ್ತಿರುವ ಕಾಲೊನಿಯಲ್ಲಿ ಸ್ವಚ್ಛತೆ ಮತ್ತು ಸೌಲಭ್ಯ ಮರಿಚೀಕೆಯಾಗಿದೆ.

25 ವರ್ಷದ ಹಿಂದೆ ನಿರ್ಮಿಸಿರು ಕಚ್ಚಾ ಚರಂಡಿ ಈಚೆಗೆ ಸಂಪೂರ್ಣ ಹದಗೆಟ್ಟಿದೆ. ಸಣ್ಣ ಚರಂಡಿಯಲ್ಲಿ ಕೊಳಚೆ ನೀರು ಹರಿಯದೆ,‌ ಮನೆಗಳ ಮುಂದೆ ಸಂಗ್ರಹವಾಗಿದೆ. ಇದರಿಂದ ಮನೆಯಲ್ಲಿ ಕುಳಿತು ನೆಮ್ಮದಿಯಿಂದ ಊಟ ಮಾಡಲು ಆಗುತ್ತಿಲ್ಲ. ರಾತ್ರಿ ವೇಳೆ ಸೊಳ್ಳೆಕಾಟದಿಂದ ನಿದ್ದೆ ಬರುತ್ತಿಲ್ಲ ಎಂಬುದು ಸ್ಥಳೀಯರ ಅಳಲು.

ಚರಂಡಿಯಿಂದ ಮನೆಗೆ ನುಗ್ಗುವ ಇಲಿಗಳು: ಮನೆಗಳ ಮುಂಭಾಗದ ಚರಂಡಿಯಿಂದ ಇಲಿಗಳು ಬಿಲಗಳು ಮಾಡಿಕೊಂಡು ಮನೆಗಳೆಲೆಲ್ಲಾ ಓಡಾಡುತ್ತಿವೆ. ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಪುರಸಭೆಯ ಪೌರಕಾರ್ಮಿಕರು ಆರು ತಿಂಗಳಿಗೊಮ್ಮೆ ಬರುತ್ತಾರೆ. ಚರಂಡಿಯಲ್ಲಿ ಬಿದ್ದಿರುವ ಕಸ ತೆಗೆದು ಒಂದು ಕಡೆ ಗುಡ್ಡೆ ಹಾಕಿ ಹೋಗುತ್ತಾರೆ. ಅದನ್ನು ತೆರವುಗೊಳಿಸಲು ಒಂದು ತಿಂಗಳು ಕಾಯಬೇಕು. ಅವರು ತೆರವುಗೊಳಿಸುವಷ್ಟರಲ್ಲಿ ಕಸ ಮತ್ತೆ ಚರಂಡಿ ಪಾಲಾಗುತ್ತದೆ.

ಇಂದಿರಾನಗರದಲ್ಲಿ ಚರಂಡಿ ನಿರ್ಮಾಣಕ್ಕೆ ಹಲವು ಬಾರಿ ಪುರಸಭೆಗೆ ಮನವಿ ಸಲ್ಲಿಸಲಾಗಿದೆ. ಆಗ ಮಾತ್ರ ಚರಂಡಿ ಸ್ವಚ್ಛಗೊಳಿಸುತ್ತಾರೆ. ಮತ್ತೆ ದೂರು ಸಲ್ಲಿಸಿರುವವರೆಗೂ ಇತ್ತ ತಲೆ ಹಾಕುವುದಿಲ್ಲ. ಪಟ್ಟಣದಲ್ಲಿ ಯಾವ ವಾರ್ಡ್‌ಗಳಲ್ಲಿಯೂ ಈ ದುಸ್ಥಿತಿ ಇಲ್ಲ. ಪರಿಶಿಷ್ಟರು ವಾಸ ಮಾಡುವ ಪ್ರದೇಶದಲ್ಲಿ ಮಾತ್ರವೇ ಇಂತಹ ಪರಿಸ್ಥಿತಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪರಿಶಿಷ್ಟರ ಕಲ್ಯಾಣಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ  ಮೀಸಲಿಡುತ್ತಿದೆ. ಆದರೆ ನಮ್ಮ ಸಬಲೀಕರಣ ಸರಿಯಾಗಿ ಆಗುತ್ತಿಲ್ಲ ಎನ್ನುವುದಕ್ಕೆ ಈ ಇಂದಿರಾನಗರವೇ ಸಾಕ್ಷಿ ಎನ್ನುತ್ತಾರೆ
ಸ್ಥಳೀಯರು.

ಜನರು ನೀರು ಹಿಡಿಯುವ ಪೈಪ್ ಸುತ್ತಲೂ ಬೆಳೆದಿರುವ ಹುಲ್ಲು

ಜನರು ನೀರು ಹಿಡಿಯುವ ಪೈಪ್ ಸುತ್ತಲೂ ಬೆಳೆದಿರುವ ಹುಲ್ಲು

ಸ್ನಾನದ ಮನೆ, ಶೌಚಾಲಯಕ್ಕೆ ಜಾಗವಿಲ್ಲ

‘ನಮಗಿರುವ ಸಣ್ಣ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ಶೌಚಾಲಯ ಮತ್ತು ಸ್ನಾನದ ಮನೆ ನಿರ್ಮಿಸಿಕೊಳ್ಳಲು ಜಾಗವಿಲ್ಲ‌. ಸ್ನಾನಕ್ಕಾಗಿ ನೀರು ಕಾಯಿಸಿಕೊಳ್ಳಲು ರಸ್ತೆಯಲ್ಲೆ ಒಲೆ ಇಟ್ಟುಕೊಂಡು ಕಾಯಿಸಿಕೊಳ್ಳಬೇಕು. ನಮಗೆ ಎಲ್ಲಾದರೂ ನಿವೇಶನ ಕೊಟ್ಟರೆ, ಸಾಲ ಮಾಡಿಕೊಂಡಾದರೂ ಒಂದೊಂದು ಮನೆ ಕಟ್ಟಿಕೊಳ್ಳುತ್ತೇವೆ ಎಂದು ಮನವಿ ಮಾಡಿದರೂ, ಪ್ರಯೋಜನೆ ಆಗುತ್ತಿಲ್ಲ. ನಮ್ಮ ಕಷ್ಟ ಅರಿಯುವ  ಮಾನವೀಯತೆಯನ್ನುಪುರಸಭೆ ಮತ್ತು ಜನಪ್ರತಿನಿಧಿಗಳು ಕಳೆದುಕೊಂಡಿದ್ದಾರೆ’ ಎಂದು ಬೇಸರಿಸುತ್ತಾರೆ ಇಲ್ಲಿನ ಸ್ಥಳೀಯರು.

ಚರಂಡಿಯಲ್ಲಿ ಕುಡಿವ ನೀರಿನ ಪೈಪ್‌

ಇಲ್ಲಿಗೆ ನೀರು ಪೂರೈಸುವ ಪೈಪ್‌ ಅನ್ನು ಪುರಸಭೆಯವರು ಚರಂಡಿಯಲ್ಲೇ ಅಳವಡಿಸಿದ್ದಾರೆ. ಇಲ್ಲಿ ಕೊಳಾಯಿಗಳನ್ನು ನೆಲದ ಮಟ್ಟಕ್ಕೆ ಅಳವಡಿಸಲಾಗಿದೆ. ಅಲ್ಲಿಂದ ಪೈಪ್‌ ಅಳವಡಿಸಿಕೊಂಡು ನೀರು ಹಿಡಿಯಬೇಕು. ಚರಂಡಿ ಸ್ವಚ್ಛಗೊಳಿಸಿ ಕಸವನ್ನು ಕೊಳಾಯಿ ಸಮೀಪದಲ್ಲೆ ಹಾಕಿ ಹೋಗುತ್ತಾರೆ. ಕಸ‌ ಪಕ್ಕದಲ್ಲೇ ನೀರು ಹಿಡಿಯಬೇಕು. ಕೊಳಾಯಿಗಳಲ್ಲಿ ನೀರು ಬಾರದಿದ್ದರೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತದೆ. ಈ ಪ್ರದೇಶದ ರಸ್ತೆ ಹಳ್ಳಗಳಿಂದ ಕೂಡಿರುವುದರಿಂದ ನೀರಿನ ಟ್ಯಾಂಕರ್ ಬರ‌ವುದು ಕಷ್ಟವಾಗಿದೆ. ಅಲ್ಲದೆ ರಸ್ತೆ ಒತ್ತುವರಿ ಮಾಡಿಕೊಂಡು ಕೆಲವರು ಶೆಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ಹೀಗಾಗಿ ದೂರದಲ್ಲೇ ಟ್ಯಾಂಕರ್‌ ನಿಲ್ಲಿಸಲಾಗುತ್ತದೆ. ಅಲ್ಲಿಂದಲೇ ನೀರು ಹೊತ್ತು ತರಬೇಕು ಎಂದು ಸ್ಥಳೀಯರು ಕಷ್ಟ ಹೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT