ಸೋಮವಾರ, ಡಿಸೆಂಬರ್ 6, 2021
27 °C
ಹೋಟೆಲ್‌, ವಸತಿಗೃಹ ಮಾಲೀಕರ ಸಭೆ

ವ್ಯಸನ ರಹಿತ ಸಮಾಜ ನಿರ್ಮಾಣ ಎಲ್ಲರ ಹೊಣೆ: ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ‘ಮಾದಕ ವಸ್ತು ರಹಿತ ಸಮಾಜ ನಿರ್ಮಿಸಲು ಎಲ್ಲರ ಸಹಕಾರ ಅಗತ್ಯ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್ ಹೇಳಿದರು.

ಮಾದಕ ವಸ್ತು ವಿರುದ್ದ ಸಮರ ಕುರಿತಂತೆ ನಗರದ ಬಸವ ಭವನದಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ಹೋಟೆಲ್‌, ಬಾರ್, ರೆಸಾರ್ಟ್, ರೆಸ್ಟೋರೆಂಟ್, ಲಾಡ್ಜ್ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.

‘ಮಾದಕವಸ್ತು ಈಗ ರಾಜ್ಯದಲ್ಲಿ ಬಹುಚರ್ಚಿತ ವಿಷಯವಾಗಿದೆ. ಜಿಲ್ಲೆಯಲ್ಲಿ ಈ ವಸ್ತುಗಳ ಮಾರಾಟಕ್ಕೆ ಅವಕಾಶ ಇಲ್ಲದಂತೆ ಕ್ರಮ ಕೈಗೊಳ್ಳಲು ತಮ್ಮಲ್ಲರ ಸಹಕಾರ ಮುಖ್ಯ. ಮುಂದಿನ ನಮ್ಮ ಮಕ್ಕಳ ಆರೋಗ್ಯದ ದೃಷ್ಟಿಯಿಂದ  ಮಾದಕ ವಸ್ತುಗಳ ಜಾಲವನ್ನು ತೊಡೆದು ಹಾಕಲು ಪೊಲೀಸರಿಗೆ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದರು.

ಡಿವೈಎಸ್‌ಪಿ ಟಿ.ರಂಗಪ್ಪ ಮಾತನಾಡಿ, ‘ಹಣದ ಆಸೆಗೆ ಅಮಾಯಕ ಯುವ ಜನರನ್ನು ಮಾದಕ ವ್ಯಸನಕ್ಕೆ ತಳ್ಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ ಸಿದ್ಧವಾಗಿದೆ. ಮಾದಕ ವಸ್ತು ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿರುವ ಎನ್‌ಡಿಪಿಎಸ್‌ ಕಾಯಿದೆಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಣೆ ಮಾಡುವವರಿಗೆ ಶಿಕ್ಷೆ ವಿಧಿಸಲಾಗುತ್ತಿದೆ’ ಎಂದರು.

‘ಮಾದಕ ವಸ್ತುಗಳಾದ ಗಾಂಜಾ, ಅಫೀಮು, ಚರಸ್ ಮತ್ತಿತರ ಪ್ರಜ್ಞೆ ತಪ್ಪಿಸುವಂತಹ ಆರೋಗ್ಯಕ್ಕೆ ಮಾರಕವಾಗುವಂತಹ ಚಟುವಟಿಕೆಗಳು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಅಂತಹವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸರ್ಕಲ್ ಇನ್‌ಸ್ಪೆಕ್ಟರ್‌ ರಾಘವ ಎಸ್.ಗೌಡ ಮಾತನಾಡಿ, ‘ರೆಸಾರ್ಟ್, ಲಾಡ್ಜ್‌ಗಳಲ್ಲಿ ಸಂಪೂರ್ಣ ದಾಖಲೆಗಳನ್ನು ಪಡೆದೇ ಕೊಠಡಿಗಳನ್ನು ನೀಡಬೇಕು. ನಂದಿ ಬೆಟ್ಟ ವ್ಯಾಪ್ತಿಯಲ್ಲಿನ ರೆಸಾರ್ಟ್ ಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪ ಪದೇ ಪದೇ ಕೇಳಿಬರುತ್ತಿದ್ದು, ಅಲ್ಲಿನ ರೆಸ್ಟೋರೆಂಟ್, ರೆಸಾರ್ಟ್‌ಗಳ ಸಿ.ಸಿ.ಟಿವಿ ಆನ್‌ಲೈನ್‌ ಸಂಪರ್ಕ ಪೊಲೀಸ್ ಠಾಣೆಗೆ ಕಲ್ಪಿಸಿಕೊಂಡು‌ ನಿಗಾವಹಿಸಲಾಗುವುದು’ ಎಂದರು.

ಸಭೆಯಲ್ಲಿ ಸಬ್‌ಇನ್‌ಸ್ಪೆಕ್ಟರ್‌ ಸೋಮಶೇಖರ್, ವಿ.ಗಜೇಂದ್ರ, ಮಂಜುನಾಥ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.