ಶುಕ್ರವಾರ, ಮೇ 14, 2021
25 °C

ಲಸಿಕೆ ಹಾಕಿಸಿಕೊಳ್ಳಲು ಉತ್ಸಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌-19 ಲಸಿಕೆ ಹಾಕುವ ಅಭಿಯಾನ ಚುರುಕುಗೊಂಡಿದೆ. ತಾಲ್ಲೂಕಿನ ಪ್ರತಿ ಗ್ರಾಮದ ಅಂಗನವಾಡಿ ಕೇಂದ್ರಗಳಲ್ಲೇ ಲಸಿಕೆ ಹಾಕುತ್ತಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿನ ಕಾರ್ಮಿಕರು ಹಾಗೂ ಹಿರಿಯ ನಾಗರೀಕರು ಲಸಿಕೆ ಹಾಕಿಸಿಕೊಳ್ಳಲು ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ಮಾಸ್ಕ್‌ ಧರಿಸದವರಿಗೆ ದಂಡ: ನಗರಸಭೆ ಆರೋಗ್ಯ ಇಲಾಖೆ ಸಿಬ್ಬಂದಿ ನಗರದ ಮಾರುಕಟ್ಟೆ ಪ್ರದೇಶ, ಬಸ್‌ ನಿಲ್ದಾಣ ಸೇರಿದಂತೆ ವಿವಿಧ ಕಡೆಗಳಲ್ಲಿ ದಿಢೀರ್ ದಾಳಿ ನಡೆಸಿ ಮಾಸ್ಕ್‌ ಧರಿಸದವರಿಗೆ ಸ್ಥಳದಲ್ಲೇ ದಂಡ ವಿಧಿಸಿದರು. ಮಾಸ್ಕ್‌ ಧರಿಸದೆ ಇದ್ದರೆ ಅಂಗಡಿಗಳ ಒಳಗೆ ಗ್ರಾಹಕರನ್ನು ಬಿಟ್ಟುಕೊಳ್ಳದಂತೆ ನಗರಸಭೆ ಪರಿಸರ ವಿಭಾಗದ ಇಂಜಿನಿಯರ್‌ ಈರಣ್ಣ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 539 ಕೋವಿಡ್‌-19 ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿ 145, ದೊಡ್ಡಬಳ್ಳಾಪುರ 123, ದೇವನಹಳ್ಳಿ 111, ಹೊಸಕೋಟೆ ತಾಲ್ಲೂಕಿನಲ್ಲಿ 160 ಕೋವಿಡ್‌-19 ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಗುಣಮುಖರಾಗಿ 134 ಜನ ಮನೆಗೆ ತೆರಳಿದ್ದಾರೆ. 544 ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಬುಧವಾರ ಕೋವಿಡ್‌ನಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಅಧಿಕಾರಿಗಳ ದಿಢೀರ್ ಭೇಟಿ

ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧೆಡೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕೋವಿಡ್ ನಿಯಮಗಳ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.

ಕೋವಿಡ್ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೇವನಹಳ್ಳಿ ಪುರಸಭಾ ಮುಖ್ಯಾಧಿಕಾರಿ ನಾಗರಾಜು, ತಾಲ್ಲೂಕು ಕಚೇರಿ ಕಂದಾಯ ನಿರೀಕ್ಷಕರು ಹಾಗೂ ಸಿಬ್ಬಂದಿ ದೇವನಹಳ್ಳಿ ತಾಲ್ಲೂಕಿನ ಎಲ್ಲಾ ದೇವಾಲಯಗಳು, ಹೋಟೆಲ್‌ಗಳು ಮತ್ತು ಎಲ್ಲಾ ಮದ್ಯದ ಅಂಗಡಿಗಳು, ಬೇಕರಿಗಳು, ವಾಣಿಜ್ಯ ಪ್ರದೇಶಗಳಿಗೆ ಜಂಟಿ ಕಾರ್ಯಾಚರಣೆ ನಡೆಸಿ ಕೋವಿಡ್ ಪ್ರಕರಣಗಳನ್ನು ತಪ್ಪಿಸಲು ನಿಯಮಗಳ ಪಾಲನೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ದೊಡ್ಡಬಳ್ಳಾಪುರ ನಗರ ಸಭೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ ಸೇರಿದಂತೆ ಸಾರ್ವಜನಿಕರ ಸಂಚಾರ ಹೆಚ್ಚಾಗಿರುವ ಪ್ರದೇಶಗಳಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸುಮಾ ಅವರು ಭೇಟಿ ನೀಡಿ,ಸಾರ್ವಜನಿಕರು ಮಾಸ್ಕ್ ಧರಿಸಿದ್ದಾರೆಯೇ ಎಂಬುದನ್ನು ಪರಿಶೀಲನೆ ನಡೆಸಿ ಮಾಸ್ಕ್ ‌ಧರಿಸದವರಿಗೆ ದಂಡ ವಿಧಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ ಅವರು ಹೊಸಕೋಟೆ ತಾಲ್ಲೂಕಿನ ಜಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ,ಕೋವಿಡ್ ಲಸಿಕೆ ನೀಡುತ್ತಿರುವ ಕುರಿತು ಪರಿಶೀಲನೆ ನಡೆಸಿದರು ಹಾಗೂ ಜಡಿಗೇನಹಳ್ಳಿ ಗ್ರಾಮದಲ್ಲಿ ಲಸಿಕೆ ಪಡೆಯದ ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡಿ,ಲಸಿಕೆ ಪಡೆಯುವಂತೆ ಮನವಿ ಮಾಡಿದರು. ನಂತರ ದೊಡ್ಡನಲ್ಲಾಳ ಗ್ರಾಮ ಪಂಚಾಯಿತಿ ದೊಡ್ಡದೇನಹಳ್ಳಿ ಗ್ರಾಮದಲ್ಲಿ ಮಾಸ್ಕ್ ಧರಿಸದೆ ವಾಹನ ಚಾಲನೆ‌ ಮಾಡುತ್ತಿದ್ದ ಸಾರ್ವಜನಿಕರಿಗೆ ದಂಡ ವಿಧಿಸಿದರು.

ದೊಡ್ಡಗಟ್ಟಿಗನಬ್ಬೆ ಮತ್ತು ಕುಂಬಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಹಾಗೂ ಮುಗಬಾಳ ಗ್ರಾಮ ಪಂಚಾಯತಿಯ ನಿಡಘಟ್ಟ ಗ್ರಾಮಕ್ಕೆ ಭೇಟಿ ನೀಡಿ ಕೋವಿಡ್-19 ಪರೀಕ್ಷೆ ಸರಿಯಾದ ಕ್ರಮದಲ್ಲಿ ನಡೆಸಲಾಗುತ್ತಿದೆಯೇ ಎಂದು ಪರಿಶೀಲಿಸಿದರು.

ಹೊಸಕೋಟೆ ತಾಲ್ಲೂಕಿನ ಗಣಗಲೂರು ಗ್ರಾಮ ಪಂಚಾಯಿತಿ ಮಾರನಗೆರೆ ಗ್ರಾಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ಹಾಗೂ ಹೊಸಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಭೇಟಿ ನೀಡಿ, ಕೋವಿಡ್ ತಡೆಗಟ್ಟಲು ಪಾಲಿಸಬೇಕಾದ ಕ್ರಮಗಳಾದ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಹಾಗೂ ಕೋವಿಡ್ ಲಸಿಕೆ ಪಡೆಯುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ‌ಬೆಂಗಳೂರು ಗ್ರಾಮಾಂತರ ‌ಜಿಲ್ಲಾಡಳಿತ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಪುಷ್ಪ‌ರಾಯರ್ ಅವರು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ
ಸಭೆ ನಡೆಸಿ ಕೋವಿಡ್ ಲಸಿಕೆ ಕಾರ್ಯಕ್ರಮ ಮತ್ತು ಮನೆ ಮನೆ ಇ-ಸಮೀಕ್ಷೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಕೋವಿಡ್ ಸೋಂಕು ತಡೆಗಟ್ಟಲು ಕೈಜೋಡಿಸಲು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು