ಹೊಸಕೋಟೆ ಎಂದಾಕ್ಷಣ ಬೆಳ್ಳಂ ಬೆಳಗ್ಗೆಯ ರುಚಿಯಾದ ಬಿರಿಯಾನಿ ಸ್ಮೃತಿ ಪಟಲದಲ್ಲಿ ಮೂಡುತ್ತದೆ.
ಇಲ್ಲಿನ ಸ್ವಾದಿಷ್ಟ ಬಿರಿಯಾನಿ ಸವಿಯಲು ಬೆಂಗಳೂರು ಮತ್ತು ತಮಿಳುನಾಡಿನಿಂದ ಬೆಳಗಿನ 4.30ಕ್ಕೆ ಬಂದು ಹೊಸಕೋಟೆ ಬಿರಿಯಾನಿ ಹೋಟೆಲ್‌ಗಳಿಗೆ ಲಗ್ಗೆ ಇಡುತ್ತಾರೆ.
ಪಾತ್ರೆಯಲ್ಲಿ ಬೇಯುತ್ತಿರುವಾಗಲೆ ವಾಸನೆ ಅನುಭವಿಸುವ ಜನ ಹಸಿದ ಸಿಂಗದಂತೆ ಬಿರಿಯಾನಿ ಕೈಗೆ ಬರುತ್ತಿದ್ದಂತೆ ಗಬಗಬ ತಿಂದು ತಮ್ಮ ಆಸೆ ಮತ್ತು ಹಸಿವು ತಣಿಸಿಕೊಳ್ಳುತ್ತಾರೆ.
ನಗರದ ಬಹುತೇಕ ಬಿರಿಯಾನಿ ಅಂಗಡಿಗಳು ಬೆಳಗ್ಗೆ 4ಕ್ಕೆ ತೆರೆಯುತ್ತವೆ. ಅಲ್ಲಿಂದ ತಡರಾತ್ರಿ 10-11 ಗಂಟೆಯವರೆಗೆ ಜನ ಹೋಟೆಲ್‌ಗಳಲ್ಲಿ ಕಿಕ್ಕಿರಿದು ತುಂಬಿರುತ್ತಾರೆ.
ಬಿರಿಯಾನಿಯೊಂದಿಗೆ ಕಾಲ್‌ಸೂಪ್, ಬೋಟಿ ಪ್ರೈ, ಚಿಕಬ್ ಕಬಾಬ್, ಚಿಕನ್ ಮತ್ತು ಮಟನ್ ಪ್ರೈ, ಮಟನ್ ಸಾಂಬಾರ್, ಕೈಮಾ, ಲಿವರ್ ಪ್ರೈ, ಬ್ಲಡ್ ಪ್ರೈ ಮತ್ತು ತಲೆ ಮಾಂಸ ಸೇರಿದಂತೆ ಹಲವು ಖಾದ್ಯಗಳು ನಾಲಿಗೆಯಲ್ಲಿ ನೀರೂರುವಂತೆ ಮಾಡುತ್ತವೆ.
ರಾಜ್ಯದವರು ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ಜನರು ಇಲ್ಲಿನ ಬಿರಿಯಾನಿಗೆ ಮಾರು ಹೋಗಿದ್ದಾರೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಟೆಕೆಗಳು ಮತ್ತು ಕಾರ್ಮಿಕರು ಇಲ್ಲಿನ ಬಿರಿಯಾರಿ ಪ್ರತಿ ನಿತ್ಯದ ಬೆಳಗಿನ ಉಪಹಾರ ಆಗಿದೆ.
ಮಾಂಸಾಹಾರಿ ಹೋಟೆಲ್‌ಗಳಲ್ಲಿ ಪೈಪೋಟೆ ಆರಂಭವಾಗಿದ್ದು, ಎಲ್ಲಾ ಹೋಟೆಲ್‌ಗಳು ತಮ್ಮದೇ ಆದ ರುಚಿಯನ್ನು ಸೃಷ್ಠಿಸಿಕೊಂಡಿವೆ.
ಗುಣಮಟ್ಟದ ಕುರಿ, ಮೇಕೆ ಮತ್ತು ಕೋಳಿ ಮಾಂಸ ತಂದು ಸ್ವಚ್ಛಗೊಳಿಸಿ, ಸೌದೆಯ ಒಲೆಯಲ್ಲಿ ಅಡುಗೆ ಸಿದ್ದಪಡಿಸುತ್ತಾರೆ. ಯಾವುದೇ ಕಂಪನಿ ಮತ್ತು ರಾಸಾಯನಿಕಯುಕ್ತ ಮಸಾಲೆ ಬಳಸದ ಪ್ರತಿಯೊಬ್ಬರೂ ಮಸಾಲೆಯನ್ನು ತಯಾರಿಸಿ ಬಳಸುತ್ತಾರೆ. ಇದರಿಂದ ಅಡುಗೆಯ ಸ್ವಾದ ಹೆಚ್ಚುತ್ತದೆ. ಇದರಿಂದ ಗ್ರಾಹಕರು ಮುಗಿ ಬೀಳುತ್ತಾರೆ ಎನ್ನುತ್ತಾರೆ ಇಲ್ಲಿನ ಹೋಟೆಲ್
ಸಿಬ್ಬಂದಿಯೊಬ್ಬರು.
ಬಿರಿಯಾನಿಗೆ ಹೈದರಾಬಾದ್ ಹೆಸರು ಪಡೆದಿತ್ತು. ಅಂತಹ ಹೈದರಾಬಾದಿನಲ್ಲಿಯೇ ಹೊಸಕೋಟೆ ಬಿರಿಯಾನಿ ಮಳಿಗೆ ತೆರೆಯುವ ಮಟ್ಟಕ್ಕೆ ಹೊಸಕೋಟೆ ಬಿರಿಯಾನಿ ಹೆಸರು ಮಾಡಿದೆ.