ಭಾನುವಾರ, ಜನವರಿ 26, 2020
18 °C
ದೊಡ್ಡಬಳ್ಳಾಪುರದಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

ಶಿಕ್ಷಣ, ಸಮಾನತೆಗೆ ಆದ್ಯತೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 63ನೇ ಪುಣ್ಯಸ್ಮರಣೆಯನ್ನು ಪರಿನಿರ್ವಾಣ ದಿನವನ್ನಾಗಿ ಆಚರಿಸಲಾಯಿತು.

ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಶಾಸಕ ಟಿ.ವೆಂಕಟರಮಣಯ್ಯ, ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರು, ದಲಿತ ಸಂಘಟನೆಗಳ ಮುಖಂಡರು ಮಾಲಾರ್ಪಣೆ ಮಾಡಿ ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸಿದರು.

ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾತನಾಡಿ, ‘ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ ಶಿಕ್ಷಣ ಹಾಗೂ ಸಮಾನತೆಗಳಿಗೆ ಒತ್ತು ನೀಡುವ ಅಗತ್ಯವಿದೆ. ಎಲ್ಲರೂ ಅವರ ಸ್ಮರಣೆ ಮಾಡಬೇಕಿದೆ. ಜಾತ್ಯತೀತ ಮನೋಭಾವಕ್ಕೆ ಪ್ರೇರಣೆ ನೀಡಿ, ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ರೂಪಿಸಿಕೊಟ್ಟ ಭಾರತರತ್ನ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡರೆ ನಮ್ಮ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಚುಂಚೇಗೌಡ, ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಎಂ.ಬೈರೇಗೌಡ ಇದ್ದರು.

ಬಿಎಸ್‍ಪಿ ಕಚೇರಿಯಲ್ಲಿ: ನಗರದ ಬಿಎಸ್‍ಪಿ ಕಚೇರಿಯಲ್ಲಿ ನಡೆದ ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಹುಜನ ಸಮಾಜವಾದಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಅಂಬೇಡ್ಕರ್ ಯಾವುದೇ ಒಂದು ಜನಾಂಗಕ್ಕೆ ಮಾತ್ರ ಅನುಕೂಲವಾಗುವಂತೆ ಮೀಸಲಾತಿ ರೂಪಿಸಲಿಲ್ಲ. ಬದಲಾಗಿ ಶತಮಾನಗಳಿಂದ ಸಮಾಜದಲ್ಲಿ ಶೋಷಣೆಗೊಳಗಾದ ದೀನರು-ದಲಿತರ ಬಗ್ಗೆ ಅಧ್ಯಯನ ನಡೆಸಿ ಎಲ್ಲ ಶೋಷಿತರಿಗೂ ಅನುಕೂಲ ಕಲ್ಪಿಸಿದರು ಎಂದರು.

‘ಅಂಬೇಡ್ಕರ್‌ ಮೀಸಲಾತಿ ನೀತಿ ರೂಪಿಸದಿದ್ದರೆ ನಾವೆಲ್ಲರೂ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದೇ ಇನ್ನೂ ಅಂಧಕಾರದಲ್ಲಿಯೇ ಇರಬೇಕಿತ್ತು. ಇಂತಹ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಲಘುವಾಗಿ ಮಾತನಾಡಿ, ತಪ್ಪು ತಿಳಿವಳಿಕೆ ಮೂಡಿಸುವುದು ಸರಿಯಲ್ಲ’ ಎಂದರು.

ಬಿಎಸ್‍ಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಹನುಮಂತಗೌಡ, ಕಾರ್ಯದರ್ಶಿ ರಂಗನಾಥ್, ಉಸ್ತುವಾರಿ ಕೆ.ವಿ.ಮುನಿಯಪ್ಪ, ನಗರ ಅಧ್ಯಕ್ಷ ಆಂಜಿನಪ್ಪ, ಕಚೇರಿ ಕಾರ್ಯದರ್ಶಿ ದಾಳಪ್ಪ, ದೇವರಾಜು, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಕಮಲಮ್ಮ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು