ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಿಂದ ಮಹಿಳೆಯ ಅಭಿವೃದ್ಧಿ

ಇನ್‌ಸ್ಫೈರ್ ಕಾಲೇಜಿನಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ
Last Updated 5 ಜನವರಿ 2020, 13:13 IST
ಅಕ್ಷರ ಗಾತ್ರ

ವಿಜಯಪುರ: ಬಡ, ದಲಿತ, ಹಿಂದುಳಿದ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗುವುದಕ್ಕಾಗಿ ಸಾವಿತ್ರಿ ಬಾಯಿ ಫುಲೆಯವರು ನಡೆಸಿದ ಹೋರಾಟವನ್ನು ಮರೆಯಲು ಸಾಧ್ಯವಿಲ್ಲ ಎಂದು ಇನ್‌ಸ್ಫೈರ್ ಕಾಲೇಜಿನ ಪ್ರಾಂಶುಪಾಲ ಎನ್.ಶ್ರೀನಿವಾಸಮೂರ್ತಿ ಹೇಳಿದರು.
ಇಲ್ಲಿನ ಶಿಡ್ಲಘಟ್ಟ ಕ್ರಾಸ್‌ನಲ್ಲಿರುವ ಇನ್‌ಸ್ಫೈರ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಾವಿತ್ರಿಬಾಯಿಫುಲೆ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾವಿತ್ರಿ ಬಾಯಿ ಫುಲೆಯವರು 17 ನೇ ವಯಸ್ಸಿಗೆ ಒಬ್ಬ ಶಿಕ್ಷಕಿಯಾಗಿ ರೂಪುಗೊಂಡರು. ಹಿಂದುಳಿದ ಜಾತಿಯಲ್ಲಿ ಜನಿಸಿದ್ದ ಅವರಿಗೆ ಬಾಲ್ಯದಲ್ಲಿ ಲಿಂಗ ತಾರತಮ್ಯ, ಬಡತನ ಮತ್ತು ಜಾತಿಯ ಕಾರಣದಿಂದ ಶಿಕ್ಷಣ ವಂಚಿತ ಇತರ ಹೆಣ್ಣು ಮಕ್ಕಳಿಗೂ ಶಿಕ್ಷಣ ಒದಗಿಸುವ ಹಂಬಲವಿತ್ತು. ಕೇವಲ ಮೇಲ್ವರ್ಗದ ಪುರುಷರ ಸ್ವತ್ತಾಗಿದ್ದ ಶಿಕ್ಷಣ ತಳವರ್ಗಕ್ಕೂ ದಕ್ಕಬೇಕು, ಹೆಣ್ಣು ಮಕ್ಕಳಿಗೂ ಶಿಕ್ಷಣ ಒದಗಿಸಿಕೊಡಬೇಕೆಂದು ಅವರು ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ಆರಂಭಿಸಿದರು ಎಂದರು.

‘ಇಂದು ದೇಶದಲ್ಲಿ ಕೋಟ್ಯಾಂತರ ಜನ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೂ ಕೂಡ ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿ ಇನ್ನೂ ಜೀವಂತವಿದೆ. ಸ್ತ್ರೀಯರ ಅನಕ್ಷರತೆ ಇನ್ನೂ ಇದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಸಾವಿತ್ರಿ ಬಾ ಫುಲೆಯವರ ಕನಸನ್ನು ನನಸಾಗಿಸುವ ಹೊಣೆ ನಮ್ಮ ಮೇಲಿದೆ’ ಎಂದರು.

ಸಂಸ್ಥೆಯ ಕಾರ್ಯದರ್ಶಿ ಮಹಂತೇಶಪ್ಪ ಮಾತನಾಡಿ, ಜಡ್ಡುಗಟ್ಟಿದ ಜಾತಿ ವ್ಯವಸ್ಥೆಯೆ ಸಮಾಜವನ್ನು ತಪ್ಪು ದಾರಿಗೆ ತೆಗೆದುಕೊಂಡು ಹೋಗುತ್ತಿದೆ. ಸಾವಿತ್ರಿ ಬಾಯಿ ಅವರು, ಹೆಣ್ಣು ಮಕ್ಕಳ ಶಕ್ತಿಯಾಗಿ ಹೋರಾಟ ನಡೆಸಿದ ಹಿನ್ನೆಲೆಯಿಂದ ಮಹಿಳೆಯರಿಗೂ ಸಮಾನ ಹಕ್ಕು ದೊರೆತಿದೆ ಎಂದು ತಿಳಿಸಿದರು.

ಹಿಂದಿನ ಕಾಲಕ್ಕೂ, ಈಗಿನ ಕಾಲಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಅನೇಕ ಮಹಿಳೆಯರ ಹೋರಾಟದ ಫಲವಾಗಿ ಮಹಿಳೆಯರು ಸಮಾಜದಲ್ಲಿ ಜೀವಿಸುವ ಹಕ್ಕು ಸಿಕ್ಕಿದೆ. ಫುಲೆ ಶಿಕ್ಷಣ ಕ್ಷೇತ್ರದ ಜತೆಗೆ ಮಹಿಳಾ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದಾರೆ ಎಂದರು.

ಹಿಂದೆ ಹೆಣ್ಣಿಗೆ ಜೀವಿಸುವ ಹಕ್ಕು ಸಹ ಇರಲಿಲ್ಲ. ಆಕಸ್ಮಿಕವಾಗಿ ಗಂಡ ಮೃತಪಟ್ಟರೆ ಅದೇ ಚಿತೆಯ ಮೇಲೆ ಪ್ರಾಣ ಬಿಡಬೇಕಿತ್ತು. ಇದಕ್ಕೆ ಸತಿ ಸಹಗಮನ ಪದ್ಧತಿ ಎನ್ನುತ್ತಿದ್ದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ಕಲ್ಪಿಸಿದಾಗ ಮಾತ್ರ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು. ದೇವರಾಜುಲು.ಎನ್, ಉಪನ್ಯಾಸಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT