ಶನಿವಾರ, ಸೆಪ್ಟೆಂಬರ್ 18, 2021
22 °C
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವಿಶ್ವ ಆನೆ ದಿನ l ಪ್ರವಾಸಿಗರು, ಚಿಣ್ಣರ ಸಂಭ್ರಮ

ಆನೇಕಲ್: ಆನೆ, ಮಾನವ ಸಂಘರ್ಷ ತಪ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ವಿಶ್ವ ಆನೆ ದಿನಾಚರಣೆ ಅಂಗವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆನೆಗಳಿಗೆ ಆಹಾರ ಪುಷ್ಟೀಕರಣ ಮತ್ತು ಶ್ರಮದಾನದ ಮೂಲಕ ವಿನೂತನವಾಗಿ ಆಚರಿಸಲಾಯಿತು.

ಜೈವಿಕ ಉದ್ಯಾನದಲ್ಲಿ ಆನೆ ಮರಿಗಳ ನೈಸರ್ಗಿಕ ನಡುವಳಿಕೆ ಉತ್ತೇಜಿಸುವ ಸಲುವಾಗಿ ವಿವಿಧ ಆಹಾರ ಪುಷ್ಟೀಕರಣವನ್ನು ಮರಿಗಳಿಗೆ ನೀಡುವ ಮೂಲಕ ಸ್ವತಂತ್ರ್ಯವಾಗಿ ವಿಹರಿಸಲು ಅವಕಾಶ ಕಲ್ಪಿಸಲಾಗಿತ್ತು.

ಮೃದು ಪೈಪ್‌ನ ಒಳಗಡೆ ಹುಲ್ಲು, ಕ್ಯಾರೆಟ್‌, ಗೆಣಸು, ಬಾಳೆಹಣ್ಣು, ಕಲ್ಲಂಗಡಿ, ಕಬ್ಬು ಮತ್ತು ಬೆಲ್ಲ ತುಂಬಿಸಿ ಎತ್ತರದಲ್ಲಿ ಮರಕ್ಕೆ ಕಟ್ಟಲಾಗಿತ್ತು. ಆನೆ ಮರಿಗಳು ತನ್ನ ಸೊಂಡಿಲಿನಿಂದ ಈ ಆಹಾರ ತೆಗೆದುಕೊಳ್ಳಲು ಪ್ರೋತ್ಸಾಹಿಸಲಾಯಿತು.

ಆನೆಗಳು ಸಂಭ್ರಮಿಸಲು ವಿವಿಧ ಚಟುವಟಿಕೆ ಉದ್ಯಾನದಲ್ಲಿ ರೂಪಿಸಲಾಗಿತ್ತು. ರೀಟಾ ಎಂಬ ಹೆಣ್ಣಾನೆಯನ್ನು ದುಬೈನಲ್ಲಿ ನೆಲೆಸಿರುವ ಅಮಿತ್‌ ನಾರಂಗ್‌ ಎಂಬುವವರು ದತ್ತು ಪಡೆದರು. ಮೃಗಾಲಯಕ್ಕೆ ಶ್ರಮದಾನ ಎಂಬ ಕಾರ್ಯಕ್ರಮದ ಮೂಲಕ ನಾಗರಿಕರು, ವನ್ಯಜೀವಿ ಆಸಕ್ತರು, ಉದ್ಯಾನದಲ್ಲಿ ಮೇವಿನ ಕೊಯ್ಲು ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಕಟಾವು ಮಾಡಿದ ಮೇವನ್ನು ಮಾವುತರು ಆನೆಗಳಿಗೆ ನೀಡುವ ಮೂಲಕ ಸಂಭ್ರಮಿಸಿದರು. ಪ್ರವಾಸಿಗರಿಗೆ ಆನೆಗಳಿಗೆ ಮೇವು ನೀಡಿದ ಸಂತೃಪ್ತಿ ಉಂಟಾಯಿತು. ಆನೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಿರ್ವಹಣೆ, ಕಾಡಿನಲ್ಲಿ ಎದುರಿಸುವ ಸಮಸ್ಯೆ, ಅಳಿವಿನಂಚಿನಲ್ಲಿರುವ ಆನೆಗಳ ಬಗ್ಗೆ ಮಾಹಿತಿ ನೀಡಲಾಯಿತು.

ಆನೆ ಮತ್ತು ಮಾನವ ಸಂಘರ್ಷ, ಆನೆಗಳ ನೆನಪಿನ ಶಕ್ತಿ, ಆಫ್ರಿಕ ಮತ್ತು ಏಷ್ಯನ್‌ ಆನೆಗಳ ವ್ಯತ್ಯಾಸವನ್ನು ಎಸ್‌ಓಎಸ್‌ ಚಿಲ್ಡ್ರನ್‌ ವಿಲೇಜ್‌ನ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ತಿಳಿಸಿಕೊಡಲಾಯಿತು. ‌

ವನ್ಯಜೀವಿ ಪ್ರತಿಜ್ಞೆ ಸ್ವೀಕರಿಸಲಾಯಿತು. ಮಾವುತರ ಕುಟುಂಬದವರು ತಯಾರಿಸಿದ್ದ ಆನೆ ಫ್ರೆಂಡ್‌ಶಿಪ್‌ ಬ್ಯಾಂಡ್‌ನ್ನು ಪ್ರವಾಸಿಗರಿಗೆ ಕಟ್ಟುವ ಮೂಲಕ ಆನೆ ದಿನ ಆಚರಿಸಲಾಯಿತು ಎಂದು ಜೈವಿಕ ಉದ್ಯಾನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದರು.

ಹಿರಿಯ ಮಾವುತ ಮೊಟ್ಟಣ್ಣ ಅವರು ಆನೆ ಪದಕದ ಹಾರವನ್ನು ಮಾವುತ, ಕಾವಡಿ ಮತ್ತು ಕುಟುಂಬಗಳ ಮಕ್ಕಳಿಗೆ ನೀಡಿ ಆನೆಗಳನ್ನು ನೋಡಿಕೊಳ್ಳುವ ಭರವಸೆ ಜೊತೆಗೆ ಕೌಶಲ ತಿಳಿಸಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.