ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಮುಟ್ಟುಗೋಲು: ರೈತರ ಪ್ರತಿಭಟನೆ

3.20 ಎಕರೆ ಜಾಗ ವಶಕ್ಕೆ ಪಡೆದ ಹಿಂದಿನ ಜಿಲ್ಲಾಧಿಕಾರಿ ಕ್ರಮಕ್ಕೆ ತೀವ್ರ ಆಕ್ರೋಶ
Last Updated 6 ಜನವರಿ 2020, 13:14 IST
ಅಕ್ಷರ ಗಾತ್ರ

ದೇವನಹಳ್ಳಿ: ನಗರದ ಕಸಬಾ ಹೋಬಳಿ ವ್ಯಾಪ್ತಿಯ ಸರ್ವೇ ನಂ. 134ರ ರೈತರ ಭೂಮಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತಿದೆ ಎಂದು ಆರೋಪಿಸಿ ನೊಂದ ನೂರಾರು ರೈತರು ಪ್ರತಿಭಟನೆ ನಡೆಸಿದರು.

ಇಲ್ಲಿನ ಮಿನಿವಿಧಾನಸೌಧ ಆವರಣದಲ್ಲಿ ಮಾತನಾಡಿದ ರೈತ ಧನಂಜಯ, ಇಲ್ಲಿ ಒಟ್ಟು 150 ಎಕರೆ ಸರ್ಕಾರಿ ಜಮೀನು ಇತ್ತು. ಈ ಪೈಕಿ 134 ರೈತರಿಗೆ 68 ಎಕರೆ ಭೂಮಿಗೆ ಸಾಗುವಳಿ ಪತ್ರ ನೀಡಲಾಗಿತ್ತು. ಕಳೆದ ವರ್ಷ ಜಿಲ್ಲಾಧಿಕಾರಿ ಕರೀಗೌಡ ಅವರು 3.20 ಎಕರೆ ಜಾಗವನ್ನು ನ್ಯಾಯಾಲಯ ಸಂಕೀರ್ಣಕ್ಕೆ ಹಕ್ಕುಪತ್ರ ನೀಡಿರುವ ಭೂಮಿಯನ್ನು ಮುಟ್ಟುಗೋಲು ಹಾಕಿ ನ್ಯಾಯಾಲಯದ ವಶಕ್ಕೆ ನೀಡಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ 2008ರಲ್ಲಿ 50 ಸಾವಿರ ಜನಸಂಖ್ಯೆಗಿಂತ ಕಡಿಮೆ ಇದ್ದರೆ ಪರಿಶೀಲಿಸಿ ರೈತರಿಗೆ ನೀಡಬಹುದು ಎಂದು ಆದೇಶ ನೀಡಿದೆ. 2008ರ ಜನಗಣತಿಯಂತೆ ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ 46 ಸಾವಿರ ಜನಸಂಖ್ಯೆ ಇತ್ತು. ಜಮೀನು 1965ರಿಂದ ರೈತರ ಸ್ವಾಧೀನದಲ್ಲಿದೆ. 1977 ರಿಂದ 1983 ರವರೆಗೆ ಅಂದಿನ ಪುರಸಭೆ ಅಧ್ಯಕ್ಷರಾಗಿದ್ದ ಲಕ್ಷ್ಮೀನಾರಾಯಣ ಮತ್ತು ಅಂದಿನ ಉಪವಿಭಾಗಾಧಿಕಾರಿ ಹಾಗೂ ವಿಶೇಷ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ 68 ಎಕರೆ ಜಾಗಕ್ಕೆ ನೋಟಿಫಿಕೇಷನ್ ಅನ್ವಯ ರೈತರಿಗೆ ಸಾಗುವಳಿ ಹಕ್ಕುಪತ್ರ ನೀಡಿದ್ದರು ಎಂದು ವಿವರಿಸಿದರು.

‘ಹಿಂದಿನ ಜಿಲ್ಲಾಧಿಕಾರಿ ನಿಮ್ಮ ದಾಖಲೆಗಳು ನಕಲಿ ಎಂದು ರೈತರಲ್ಲಿ ಗೊಂದಲ ಸೃಷ್ಟಿಸಿದರು. ರೈತರ ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸದೆ ಸರ್ಕಾರ ನೀಡಿದ್ದ ಹಕ್ಕುಪತ್ರವನ್ನು ಜಿಲ್ಲಾಧಿಕಾರಿ ಕಿತ್ತುಕೊಂಡರು. ಮತ್ತೆ 3.20 ಎಕರೆ ರೈತರ ಭೂಮಿ ನ್ಯಾಯಾಲಯಕ್ಕೆ ನೀಡಬೇಕು ಎಂದು ವಶಕ್ಕೆ ಪಡೆದರು. ಹೀಗಾದರೆ ರೈತರ ಪಾಡೇನು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘1991ರಲ್ಲಿ ರೈತರಿಗೆ ಹಕ್ಕುಪತ್ರ ನೀಡಿದ ಸಂದರ್ಭದಲ್ಲಿ ಪುರಸಭೆ ಜನಸಂಖ್ಯೆ ಕೇವಲ 8,795 ಮಾತ್ರ ಇತ್ತು. ಈ ಸ.ನಂ.133 ಮತ್ತು ಇತರೆ ಸ.ನಂ ಗಳಲ್ಲಿ ಇದೇ ರೀತಿ ಸಾಗುವಳಿ ನೀಡಿದ ಜಮೀನುಗಳಲ್ಲಿ ಮನೆಗಳಿವೆ; ಕಟ್ಟಡವನ್ನೂ ನಿರ್ಮಿಸಲಾಗಿದೆ. ಎಲ್ಲ ಸ.ನಂ ಜಮೀನು ಬಿಟ್ಟು ಇದೇ ಜಮೀನು ಸರ್ಕಾರಕ್ಕೆ ಬೇಕಾಗಿತ್ತೇ’ ಎಂದು ಆಕ್ಷೇಪಿಸಿದರು.

ರೈತ ಮಂಜುನಾಥ್ ಮಾತನಾಡಿ, ರೈತರು ಆರಂಭದಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಭೂಮಿಗೆ ತೆರಿಗೆ ಕಟ್ಟಲಾಗಿದೆ. ಪ್ರತಿಯೊಂದು ದಾಖಲೆಯನ್ನು ಪರಿಶೀಲಿಸಿ ಅಂದಿನ ಅಧಿಕಾರಿಗಳು ನೀಡಿರುವ ಹಕ್ಕುಪತ್ರಕ್ಕೆ ಬೆಲೆಯಿಲ್ಲವೇ ಎಂದು ಕೇಳಿದರು.

ತಾಲ್ಲೂಕಿನಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ಇದ್ದರೆ ಒತ್ತುವರಿ ತೆರವುಗೊಳಿಸಿ ಸರ್ಕಾರದ ಸ್ವತ್ತು ಉಳಿಸಲಿ. ಅದನ್ನು ಬಿಟ್ಟು ರೈತರಿಗೆ ನೀಡಿರುವ ಸಾಗುವಳಿ ಹಕ್ಕುದಾರರ ಭೂಮಿಯನ್ನು ನ್ಯಾಯ ನೀಡುವವರೇ ಕಿತ್ತುಕೊಂಡರೆ ಯಾರ ಹತ್ತಿರ ಹೋಗಿ ನ್ಯಾಯ ಕೇಳಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಂತ ರೈತ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಎನ್.ವೀರಣ್ಣ, ತಾಲ್ಲೂಕು ಘಟಕ ಅಧ್ಯಕ್ಷ ವೆಂಕಟೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT