ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ | 759 ದಿನ ಪೂರೈಸಿದ ರೈತರ ಪ್ರತಿಭಟನೆ l ರಾಜಕಾರಣಿಗಳ ಮೊಸಳೆ ಕಣ್ಣೀರು

ಸಂದೀಪ್‌
Published 29 ಏಪ್ರಿಲ್ 2024, 5:00 IST
Last Updated 29 ಏಪ್ರಿಲ್ 2024, 5:00 IST
ಅಕ್ಷರ ಗಾತ್ರ

ದೇವನಹಳ್ಳಿ: ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಹೋರಾಟಕ್ಕೆ ಯಾವುದೇ ರಾಜಕೀಯ ಪಕ್ಷ ಮತ್ತು ಸರ್ಕಾರದಿಂದ ಸ್ಪಂದನೆ ದೊರೆತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರವೇ ಧರಣಿ ಸ್ಥಳಕ್ಕೆ ಬಂದು ಮೊಸಳೆ ಕಣ್ಣೀರು ಹಾಕುವುದು ಬಿಟ್ಟಿ ಬೇರೇನು ಕ್ರಮವಹಿಸಿಲ್ಲ.

ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿ 1,777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಕೆಐಎಡಿಬಿ ಭೂ ಸ್ವಾಧೀನ ಮಾಡಿಕೊಳ್ಳವುದನ್ನು ವಿರೋಧಿಸಿ, ಸ್ವಾಧೀನ ಹಿಂಪಡೆಯಬೇಕೆಂದು ನಡೆಸುತ್ತಿರುವ ಧರಣಿ ಎರಡು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಹೋರಾಟಗಾರರು ಉಪವಾಸ ಸತ್ಯಗ್ರಹ, ಪಾದಯಾತ್ರೆ, ಟ್ರ್ಯಾಕ್ಟರ್‌ ಮತ್ತು ಬೈಕ್‌ ರ‍್ಯಾಲಿ ಸೇರಿದಂತೆ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡಸಿದರು. ಈಗ ಹೋರಾಟ 758 ದಿನ ಪೂರೈಸಿದೆ. ಆದರೂ ಯಾರಿಂದಲೂ ಸೂಕ್ತ ಸ್ಪಂದನೆ ದೊರೆತಿಲ್ಲ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅವಧಿಯಲ್ಲಿ ಕೈಗಾರಿಕ ಸಚಿವರಾಗಿದ್ದ ಮುರಗೇಶ್‌ ನಿರಾಣಿ ಸೇರಿದಂತೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ದೇವನಹಳ್ಳಿಗೆ ಭೇಟಿ ನೀಡಿದಾಗ ಭೂಮಿ ಉಳಿಸುವ ಭರವಸೆ ನೀಡಿದ್ದರು. ಆದರೆ ಅವರ ಭರವಸೆ ಇಂದಿಗೂ ಕನಸ್ಸಾಗಿಯೇ ಉಳಿದಿದೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಧರಣಿಯ 135ನೇ ದಿನ ಜಿಲ್ಲಾಡಳಿತ ಭವನಕ್ಕೆ ಬಂದು, ರೈತರ ಪರ ನಾವೀದ್ದೇವೆ ಎಂದಿದ್ದರು.   ಸ್ವಾತಂತ್ರ್ಯ ದಿನಾಚರಣೆಯಂದು ನಡೆದ ಪ್ರತಿಭಟನೆಯಲ್ಲಿ ರೈತರು ಮತ್ತು ಹೋರಾಟಗಾರರಿಗೆ ಲಾಟಿ ಏಟು ಕೊಟ್ಟು, ಕ್ರಿಮಿನಲ್‌ ಪ್ರಕರಣ ದಾಖಲು ಮಾಡಿದ್ದರು. ಇದಕ್ಕೆ ಸೂಚನೆ ನೀಡಿದ್ದ ಡಾ.ಕೆ.ಸುಧಾಕರ್‌ ಪರ ಕುಮಾರಸ್ವಾಮಿ ಅವರು ಈ ಬಾರಿ ಪ್ರಚಾರ ನಡೆಸಿದ್ದು ಬೇಸರ ತರಿಸಿದೆ ಎನ್ನುತ್ತಾರೆ ಹೋರಾಟಗಾರರು.

ಇಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಹ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಧರಣಿ ಸ್ಥಳಕ್ಕೆ ಭೇಟಿ ನೀಡಿ, ನಮ್ಮ ಸರ್ಕಾರ ಬಂದರೇ ನಿಮ್ಮ ಭೂಮಿಯನ್ನು ಉಳಿಸುತ್ತೇವೆ, ಭೂ ಸ್ವಾಧೀನದ ಆದೇಶ ಹಿಂಪಡೆಯುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ಬಳಿಕ ಮರೆತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಹೋರಾಟಗಾರರು.

ಮೂರು ಕೃಷಿ ಕಾಯ್ದೆ ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ದೆಹಲಿಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಪ್ರತಿಭಟನೆ ನಡೆಯಿತು. ಇದಕ್ಕೆ ಕೇಂದ್ರ ಸರ್ಕಾರ ಮಣಿದು ಮೂರು ಕೃಷಿ ಕಾಯಿದೆ ಹಿಂಪಡೆಯಿತು. ರೈತ ಹೋರಾಟಕ್ಕೆ ಕೇಂದ್ರ ಸರ್ಕಾರವೇ ತಲೆ ಬಾಗಿರುವಾಗ, ಇಲ್ಲಿ ಎರಡು ವರ್ಷದಿಂದ ಹೋರಾಟ ನಡೆಯುತ್ತಿದ್ದರೂ, ರಾಜ್ಯದಲ್ಲಿ ಅಧಿಕಾರ ನಡೆಸಿದ ಸರ್ಕಾರಗಳು ಕಣ್ಣು–ಕಿವಿ ಇಲ್ಲದಂತೆ ವರ್ತಿಸುತ್ತಿವೆ ಎನ್ನುವುದು ರೈತರ ಆಕ್ರೋಶ.

ನಾಲ್ಕೈದು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಹಲವು ಸಂಧಾನ ಸಭೆ ನಡೆದರೂ ಅದಕ್ಕೆ ಫಲ ದೊರೆತಿಲ್ಲ.  ಇವೆಲ್ಲ ಕಾರಣಗಳಿಂದ ಬೇಸತ್ತ ಹೋರಾಟಗಾರರು ಧರಣಿ ಸ್ಥಳದಲ್ಲಿ ‘ಪ್ರತಿರೋಧ ಸಮಾವೇಶ’ ನಡೆಸಿ, ಭೂ ಸ್ವಾಧೀನ ಆಗುತ್ತಿರುವ 13 ಹಳ್ಳಿಗಳಲ್ಲಿ ಮತದಾನ ಬಹಿಷ್ಕಾರ ಹಾಗೂ ಪ್ರಚಾರಕ್ಕೆ ಬರುವ ಅಭ್ಯರ್ಥಿಗಳಿಗೆ ಪ್ರತಿರೋಧ ತೋರುವ ನಿರ್ಧಾರ ಕೈಕೊಂಡಿದ್ದರು.

ಅದರಂತೆ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಅವರಿಗೆ ಘೇರಾವ್‌ ಹಾಕಿ, ಪ್ರಚಾರ ಸಭೆಗೆ ಅಡ್ಡಿ ಪಡಿಸಲಾಗಿತ್ತು. ಆಗ ನಡೆದ ಸಂಧಾನ ಸಭೆಯೂ ವಿಫಲವಾಗಿತ್ತು.

ಇದನ್ನು ಗಮನಿಸಿದ ಜಿಲ್ಲಾಡಳಿತ ರೈತರೊಂದಿಗೆ ಮಾತುಕತೆ ನಡೆಸಿತು. ಜಿಲ್ಲಾಧಿಕಾರಿ ಎನ್‌.ಶಿವಶಂಕರ ನೇತೃತ್ವದಲ್ಲಿ ಅಧಿಕಾರಗಳ ತಂಡ ಹೋರಾಟಗಾರರು ಮತ್ತು ರೈತರೊಂದಿಗೆ ಚರ್ಚೆ ನಡೆಸಿ, ಚುನಾವಣೆ ಬಳಿಕ ಈ ಬಗ್ಗೆ ಸಚಿವರು ಸಭೆ ನಡೆಸುವ ಭರವಸೆ ನೀಡಿ, ಮತದಾನ ಬಹಿಷ್ಕಾರ ಹಾಕದಂತೆ ಮನವೊಲಿಸಿತು. ಇದರ ಪರಿಣಾಮ 13 ಹಳ್ಳಿಯ ರೈತರು ಮತದಾನದಲ್ಲಿ ಪಾಲ್ಗೊಂಡಿದ್ದರು. ಈಗ ಎರಡು ವರ್ಷದ ಬೇಡಿಕೆಗೆ ಈಡೇರಿವುದೆ ಎಂದು ಕಾದು ನೋಡಬೇಕಿದೆ.

ಮುನಿಯಪ್ಪರದ್ದು ಜಾಣ ಕಿವುಡು

ಕಳೆದ ವಿಧಾನ ಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ 13 ಹಳ್ಳಿಗಳ 1777 ಎಕರೆ ಭೂಮಿಯನ್ನು ಉಳಿಸುತ್ತೇವೆ ಎಂದು ಮಾತು ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪರು ಜಾಣ ಕಿವುಡು ಪ್ರದರ್ಶನ ಮಾಡುತ್ತಿದ್ದಾರೆ ಎನ್ನುವುದು ರೈತ ಹೋರಾಟಗಾರರ ಅಸಮಾಧಾನ. ಒಂದು ವರ್ಷದಲ್ಲಿ ಐದಾರು ಬಾರಿ ರೈತ ಹೋರಾಟಗಾರರು ಸಚಿವರ ಮನೆ ಹತ್ತಿರ ಹೋಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಇದೀಗಾ ಲೋಕಸಭಾ ಚುನಾವಣೆ ಬಂದಾಗ ರಕ್ಷಾ ರಾಮಯ್ಯ ಅವರ ತಂದೆ ಸೀತಾ ರಾಮಯ್ಯರನ್ನು ಕರೆತಂದು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಚುನಾವಣೆಯಲ್ಲಿ ಬೆಂಬಲಿಸಿ ಎಂದು ಮನವಿ ಮಾಡಿದ್ದರು ಎಂದು ರೈತರು ತಿಳಿಸಿದರು.

ಪೋಲನಹಳ್ಳಿ ಪ್ರಮೋದ್‌ ರೈತ ಹೋರಾಟಗಾರ
ಪೋಲನಹಳ್ಳಿ ಪ್ರಮೋದ್‌ ರೈತ ಹೋರಾಟಗಾರ
ಕೊಟ್ಟ ಮಾತನ್ನು ಸಿಎಂ ಸಿದ್ದರಾಮಯ್ಯ ಮರೆತ್ತಿದ್ದಾರೆ. ರೈತಪರವಾಗಿ ಇರುತ್ತೇವೆ ಎಂದ ಸಚಿವ ಕೆ.ಎಚ್‌.ಮುನಿಯಪ್ಪ ಅದನ್ನು ಕಾರ್ಯಸಾಧು ಮಾಡುವಲ್ಲಿ ಸೋತ್ತಿದ್ದಾರೆ. ಕೊಟ್ಟ ಭರವಸೆ ಈಡೇರುವವರೆಗೂ ಭೂ ಸ್ವಾಧೀನ ವಿರೋಧಿ ಹೋರಾಟ ನಡೆಯುತ್ತಲೇ ಇರುತ್ತದೆ
ಪೋಲನಹಳ್ಳಿ ಪ್ರಮೋದ್‌, ರೈತ ಹೋರಾಟಗಾರ
ಚೀಮಾಚನಹಳ್ಳಿ ರಮೇಶ್‌ ರೈತ ಹೋರಾಟಗಾರ
ಚೀಮಾಚನಹಳ್ಳಿ ರಮೇಶ್‌ ರೈತ ಹೋರಾಟಗಾರ
ರೈತರ ಮೇಲೆ ರಾಜಕೀಯ ಪಕ್ಷಗಳ ಧೋರಣೆ ಖಂಡಿಸಿ ಪ್ರತಿರೋಧ ಸಮಾವೇಶ ಮಾಡಿದ್ದೇವು 13 ಹಳ್ಳಿಗಳಲ್ಲಿಯೂ ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು. ರಾಜ್ಯದ ವಿವಿಧ ಹೋರಾಟ ಸಂಗತಿಗಳ ಸಲಹೆಯಂತೆ ಬಹಿಷ್ಕಾರ ಹಿಂಪಡೆದು. ಈ ಬಾರಿ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇವೆ. ಭೂ ಸ್ವಾಧೀನ ಕೈಬಿಡುವವರೆಗೂ ಹೋರಾಟ ನಿರಂತರ
ಚೀಮಾಚನಹಳ್ಳಿ ರಮೇಶ್‌, ರೈತ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT