ಭಾನುವಾರ, ಜೂಲೈ 12, 2020
22 °C

ದೇವನಹಳ್ಳಿ| ಸಫಾಯಿ ಕರ್ಮಚಾರಿಗಳಿಗೆ ನೆರವು ನೀಡಲು ಒತ್ತಾಯ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಸಾಮಾಜಿಕ ನಿರ್ಲಕ್ಷ್ಯ ಒಳಗಾಗಿರುವ ಸಫಾಯಿ ಕರ್ಮಚಾರಿಗಳ ಕುಟುಂಬಗಳಿಗೆ ನೆರವು ನೀಡಲು ಸರ್ಕಾರ ಮುಂದಾಗಬೇಕು ಎಂದು ಸಫಾಯಿ ಕರ್ಮಚಾರಿ ಕಾವಲು ಸಮಿತಿ ಜಿಲ್ಲಾ ಘಟಕ ಸಂಚಾಲಕ ಮ್ಯಾಥ್ಯು ಮುನಿಯಪ್ಪ ಒತ್ತಾಯಿಸಿದರು.

ಇಲ್ಲಿನ ಸಾವಕನಹಳ್ಳಿ ಗೇಟ್ ಬಳಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ವತಿಯಿಂದ ಸಫಾಯಿ ಕರ್ಮಚಾರಿಗಳಿಗೆ (ಮ್ಯಾನ್ಯುಯಲ್ ಸ್ಕೈವೆಂಜರ್ಸ್) ದಿನಸಿ ಕಿಟ್ ಸ್ಯಾನಿಟೈಸರ್‌ ಮತ್ತು ಮಾಸ್ಕ್ ವಿತರಣೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

‘ತಮ್ಮ ಜೀವನದುದ್ದಕ್ಕೂ ಮಲ ಮೂತ್ರ ಶುಚಿತ್ವಗೊಳಿಸುವ ಸಫಾಯಿ ಕರ್ಮಚಾರಿಗಳು ರಾಜ್ಯದಲ್ಲಿ 3,202 ಮಂದಿ ಇದ್ದಾರೆ. ಗ್ರಾಮಾಂತರ ಜಿಲ್ಲೆಯಲ್ಲಿ 452, ದೇವನಹಳ್ಳಿ ತಾಲ್ಲೂಕಿನಲ್ಲಿ 156 ಸಫಾಯಿ ಕರ್ಮಚಾರಿಗಳಿದ್ದಾರೆ. ಸಮಾಜದ ಕಟ್ಟ ಕಡೆಯ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಇಂತಹ ನತದೃಷ್ಟ ಕಾರ್ಮಿಕರಿಗೆ ಸರ್ಕಾರ ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲಾ ರೀತಿಯ ಸವಲತ್ತು ನೀಡಬೇಕಿತ್ತು’ ಎಂದು ಹೇಳಿದರು.

‘ಸಫಾಯಿ ಕರ್ಮಚಾರಿಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೊಯೇ ಇಲ್ಲವೊ ಗೊತ್ತಿಲ್ಲ. ಸ್ಥಳೀಯ ಸಂಬಂಧಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಸಫಾಯಿ ಕರ್ಮಚಾರಿಗಳು ಕಣ್ಣಿಗೆ ಬಿದ್ದಿಲ್ಲ. ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಮೇಲ್ತುವಾರಿ ಸಮಿತಿ ಸದಸ್ಯ ಡಾ.ಓಬಳೇಶ್ ಅವರ ಸಲಹೆ ಮೇರೆಗೆ ಕಾವಲು ಸಮಿತಿಯಿಂದ ತಲಾ 10 ಕೆ.ಜಿ ಅಕ್ಕಿ ಮತ್ತು ರಾಗಿ ,ಬೆಳೆ, ಆಡುಗೆ ಎಣ್ಣೆ, ಗೋಧಿ ಹಿಟ್ಟು ,ಉಪ್ಪು ಒಂದೊಂದು ಕೆ.ಜಿ ಎಲ್ಲಾ ರೀತಿಯ ಸಾಂಬಾರು ಪುಡಿ ಪ್ರತಿ ಪ್ಯಾಕೇಟ್ 100 ಗ್ರಾಂ., ಬೆಳ್ಳುಳ್ಳಿ, ಈರುಳ್ಳಿ ಕನಿಷ್ಠ 15 ದಿನಗಳಿಗೆ ಆಗುವಷ್ಟು ಆಡುಗೆ ಪರಿಕರ ವಿತರಿಸಲಾಗುತ್ತಿದೆ ಕರ್ಮಚಾರಿಗಳು ಅಂತರ ಕಾಯ್ದುಕೊಳ್ಳಬೇಕು’ ಎಂದು ಹೇಳಿದರು.

ಮಾದಿಗ ದಂಡೋರ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ‘ಭಾರತ ಸೇರಿದಂತೆ ಇಡಿ ವಿಶ್ವ ಕೊರೊನಾ ಮಹಾಮಾರಿ ಸೋಂಕಿನ ಭೀತಿಯಿಂದ ತಲ್ಲಣಗೊಂಡಿದೆ. ಜೀವ ಉಳಿಸಿ ಆರೋಗ್ಯ ಸುಧಾರಣೆಗೆ ಮುಂದಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಲಾಕ್ ಡೌನ್ ಆದೇಶ ಪರಿಣಾಮಕಾರಿಯಾಗಿದೆ. ಇದೊಂದು ಅದ್ಭುತ ಮುಂದಾಲೋಚನೆ ಕ್ರಮ’ ಎಂದು ಪ್ರಶಂಸಿಸಿದರು.

‘ಸಫಾಯಿ ಕರ್ಮಚಾರಿಗಳ ಬದುಕು ಶೋಚನೀಯ ಪ್ರಾಣದ ಹಂಗು ತೊರೆದು ಮಾಡುವ ಕಾಯಕ ಸುಲಭವಲ್ಲ. ಗ್ರಾಮ ಪಂಚಾಯಿತಿ, ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರತ ಸಫಾಯಿ ಕರ್ಮಚಾರಿಗಳಿಗೆ ಕಾವಲು ಸಮಿತಿ ಸದಸ್ಯರು ಕಾರ್ಮಿಕರ ಬೆಂಬಲಕ್ಕೆ ನಿಂತಿರುವುದು ಉತ್ತಮ ಬೆಳವಣಿಗೆ’ ಎಂದು ಹೇಳಿದರು.
‘ಸರ್ಕಾರ ವಲಸಿಗರಿಗೆ, ಸ್ಥಳೀಯರ ಕಾರ್ಮಿಕರಿಗೆ, ಅನ್ನ ಅಶ್ರಯ ನೀಡುತ್ತಿದೆ, ಸಫಾಯಿ ಕರ್ಮಚಾರಿಗಳ ಬಗ್ಗೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಂಡರೆ ಒಳ್ಳೆಯದು’ ಎಂದರು.

ಇದೇ ಸಂದರ್ಭದಲ್ಲಿ ರಾಜಪ್ಪ ವೈಯಕ್ತಿಕವಾಗಿ ಸಫಾಯಿ ಕರ್ಮಚಾರಿಗಳಿಗೆ ಮಾಸ್ಕ್ ವಿತರಿಸಿದರು. ಮುಖಂಡರಾದ ಶ್ರೀನಿವಾಸ್, ಮನು, ಮುನಿಯಪ್ಪ, ವೆಂಕಟೇಶ್ ,ರಾಮಪ್ಪ, ಚಿಕ್ಕವೆಂಕಟಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು