ಶನಿವಾರ, ಅಕ್ಟೋಬರ್ 16, 2021
22 °C
ಚನ್ನರಾಯಸ್ವಾಮಿ ಬೆಟ್ಟದಲ್ಲಿ ಜಾಲಾರಿ ಹೂವಿನ ಘಮ

ದೊಡ್ಡಬಳ್ಳಾಪುರ: ಪರಿಸರ ಪ್ರಿಯರ ಕಣ್ಮನ ಸೆಳೆಯುವ ತಾಣ

ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಪ್ರತಿವರ್ಷ ವಸಂತ ಋತುವಿನಲ್ಲಿ ಸುವಾಸನೆ ಜಾಲಾರಿ ಹೂವುಗಳಿಂದ ಮೈದುಂಬಿಕೊಳ್ಳುವ ಚನ್ನರಾಯಸ್ವಾಮಿ ಬೆಟ್ಟ ಪರಿಸರ ಪ್ರಿಯರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಈ ಭಾಗದ ಕೆಲವೇ ಕೆಲವು ಬೆಟ್ಟಗಳಲ್ಲಿ ಮಾತ್ರ ವಿಶೇಷವಾಗಿ ಕಾಣುವ ಜಾಲಾರಿ ಮರಗಳು ಮಳೆಗಾಲದಲ್ಲಿ ಸಮೃದ್ಧವಾಗಿ ಬೆಳೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತವೆ. ವಸಂತ ಋತು ಆರಂಭವಾಗುತ್ತಿದ್ದಂತೆ ಹೂವು ಮೊಗ್ಗೊಡೆದು ಅರಳಲು ಪ್ರಾರಂಭವಾಗುತ್ತವೆ. ಈ ಹೂವು ನೋಡಿ ಕಣ್ತುಂಬಿಕೊಳ್ಳುವ ಸಲುವಾಗಿಯೇ ಬೆಟ್ಟಕ್ಕೆ ರಾತ್ರಿ ವೇಳೆ ಹೋಗಿ ಬೆಟ್ಟದ ಮೇಲಿನ ದೇವಾಲಯದಲ್ಲಿ ತಂಗಿದ್ದು ಸೂರ್ಯೋದಯ ಸಮಯದಲ್ಲಿ ಹೂವಿನ ಘಮಲು ಸವಿಯುವುದೇ ಒಂದು ಖುಷಿಯ ವಿಚಾರ ಎನ್ನುತ್ತಾರೆ ಚಾರಣಿಗ ದಿವಾಕರ್‌ ನಾಗ್‌.

ಮಳೆಗಾಲದಲ್ಲಿ ನೀರಿನ ಝರಿ, ಜಲಪಾತ ಚಾರಣಿಗರನ್ನು ಆಕರ್ಷಿಸಿದರೆ, ಬೇಸಿಗೆಯಲ್ಲಿ ಇಲ್ಲಿನ ಜಾಲಾರಿ ಮರಗಳು ಸೇರಿದಂತೆ ವಿವಿಧ ಔಷಧ ಸಸ್ಯ ಸಂಪತ್ತು ಬೆಟ್ಟಕ್ಕೆ ಬರುವಂತೆ ಮಾಡುತ್ತವೆ. ಇದರಿಂದಾಗಿಯೇ ಬೇಸಿಗೆಯಲ್ಲಿ ಪ್ರತಿದಿನ ಅದರಲ್ಲೂ ವಿಶೇಷವಾಗಿ ಭಾನುವಾರದಂದು ಬೆಳಿಗ್ಗೆ 5ಗಂಟೆಯಿಂದಲೇ ಬೆಟ್ಟಕ್ಕೆ ವಾಯು ವಿಹಾರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿರುತ್ತದೆ.

ಇಲ್ಲಿನ ಜಾಲಾರಿ ಮರಗಳು ಹಾಗೂ ಔಷಧ ಸಸ್ಯ ಸಂಪತ್ತು ಇರುವುದರಿಂದ ಬೇಸಿಗೆಯಲ್ಲಿ ಅರಣ್ಯ ಇಲಾಖೆ ವಿಶೇಷ ಕಾಳಜಿ ವಹಿಸಿ ಬೆಟ್ಟಕ್ಕೆ ಬೆಂಕಿ ಬೀಳದಂತೆ ನಿಗಾವಹಿಸಬೇಕು. ಇದರಿಂದ ಬೆಟ್ಟ ಮತ್ತಷ್ಟು ಹಸಿರೀಕರಣಗೊಳಿಸಲು ಹಾಗೂ ಈಗ ಇರುವ ಸಸ್ಯ ಸಂಪತ್ತು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಪಂಚಗಿರಿಗಳ ಪೈಕಿ ಬೇರಾವ ಬೆಟ್ಟದಲ್ಲೂ ಬೆಳೆಯದ ಜಾಲಾರಿ ಮರಗಳು ಚನ್ನರಾಯಸ್ವಾಮಿ ಬೆಟ್ಟದಲ್ಲಿ ಮಾತ್ರ ಬೆಳೆಯುವ ವಿಶೇಷ ಗುಣದ ಮಣ್ಣನ್ನು ಹೊಂದಿದೆ. ಹೀಗಾಗಿ ಜಾಲಾರಿ ಸಸಿಗಳನ್ನು ಅಭಿವೃದ್ಧಿಗೊಳಿಸಿ ಮತ್ತಷ್ಟು  ಮರಗಳನ್ನು ಬೆಳೆಸುವ ಕಡೆಗೆ ವಿಶೇಷ ಕಾಳಜಿವಹಿಸಬೇಕಿದೆ.

ಪಂಚಗಿರಿ ಶ್ರೇಣಿ ಬೆಟ್ಟಗಳಲ್ಲಿ ಸಸಿಗಳನ್ನು ಬೆಳೆಸಲು ಈ ಹಿಂದಿನ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಡಾ.ಮಂಜುಳ ಹಾಗೂ ಅರಣ್ಯ ಅಧಿಕಾರಿ ನಾಗೇಶ್‌  ಮಾತ್ರ ಆಸಕ್ತಿ ವಹಿಸಿ ಒಂದಿಷ್ಟು ಸಸಿಗಳನ್ನು ನಡೆಸಿದ್ದರು. ಆ ನಂತರ ಯಾರೊಬ್ಬರು ಸ್ಥಳೀಯವಾಗಿ ಬೆಳೆಯುವ ಸಸಿಗಳನ್ನು ನೆಟ್ಟು ಬೆಳೆಸುವ ಕಡೆಗೆ ಮುಂದಾಗಲೇ ಇಲ್ಲ. ಚನ್ನರಾಯಸ್ವಾಮಿ ಬೆಟ್ಟದ ಪಶ್ಚಿಮ ಭಾಗ ದೊಡ್ಡಬಳ್ಳಾಪುರ ತಾಲ್ಲೂಕಿಗೆ ಸೇರುತ್ತದೆಯಾದರೂ ಅರಣ್ಯ ಅಧಿಕಾರಿಗಳು ಸಸಿಗಳನ್ನು ಬೆಳೆಸುವುದಿರಲಿ ಬೇಸಿಗೆಯಲ್ಲಿ ಬೆಟ್ಟದಲ್ಲಿ ಒಣಗಿ ನಿಂತ ಹುಲ್ಲಿಗೆ ಬೆಂಕಿ ಬೀಳದಂತೆ ತಡೆಯುವಲ್ಲೂ ವಿಫಲರಾಗಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.