ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ ಹುಲುಕುಡಿ ಬೆಟ್ಟದಲ್ಲಿ ಕಾಡ್ಗಿಚ್ಚು ಶಮನ ಮಾಡಿದ ಯುವಕರ ತಂಡ

ಹುಲುಕುಡಿ ಬೆಟ್ಟದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ
Last Updated 6 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಹುಲುಕುಡಿ ಬೆಟ್ಟದಲ್ಲಿ ನಾಲ್ಕು ದಿನಗಳ ಹಿಂದೆ ಕಾಣಿಸಿಕೊಂಡ ಬೆಂಕಿಯನ್ನು ಯುವ ಸಂಚಲನ ತಂಡ ನಂದಿಸಿದೆ.

ತಂಡದ ಸದಸ್ಯರು ಸಂಜೆ ವೇಳೆ ಬೆಟ್ಟಕ್ಕೆ ಭೇಟಿ ನೀಡಿದ್ದರು. ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಯುವಕರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಜತೆಗೆ ಸ್ವತಃ ಬೆಂಕಿ ಆರಿಸಲು ಮುಂದಾದರು. ಸತತ ಪ್ರಯತ್ನದ ಪರಿಣಾಮ ಬೆಂಕಿ ನಿಯಂತ್ರಣಕ್ಕೆ ಬಂದಿರು ಎಂದು ತಂಡದ ಅಧ್ಯಕ್ಷ ಚಿದಾನಂದ್‌ ಮಾಹಿತಿ ನೀಡಿದರು.

‘ನಮ್ಮ ಭಾಗದಲ್ಲಿರುವ ಕಿರು ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಸಂಭವಿಸಲು ಸಾಧ್ಯವೇ ಇಲ್ಲ. ಆದರೂ ಬೇಸಿಗೆಯಲ್ಲಿ ತಾಲ್ಲೂಕಿನ ಅರಣ್ಯಗಳು, ಬೆಟ್ಟಗಳಿಗೆ ಪ್ರತಿವರ್ಷವೂ ಬೆಂಕಿ ಬೀಳುತ್ತಲೇ ಇರುತ್ತದೆ. ಇದಕ್ಕೆ ಮೂಲಕಾರಣ ತಂಬಾಕು ವ್ಯಸನಿಗಳು, ಕಿಡಿಗೇಡಿಗಳು, ನಷ್ಟದ ಅರಿವಿಲ್ಲದ ಹಾಗೂ ಮೂಢನಂಬಿಕೆಯ ಕೆಲ ಜನರು ಇಂಥ ಕೃತ್ಯ ಎಸಗುತ್ತಾರೆ’ ಎಂದು ಚಿದಾನಂದ್ಬೇಸರ ವ್ಯಕ್ತಪಡಿಸಿದರು.

2019ರಲ್ಲಿ ತಾಲ್ಲೂಕಿನ ಮೀಸಲು ಅರಣ್ಯ ಪ್ರದೇಶಗಳ ಅರ್ಧ ಮಾಕಳಿದುರ್ಗ, ಉಜ್ಜನಿ, ಮುದ್ದೇನಹಳ್ಳಿ, ಘಾಟಿ ಸುಬ್ರಹ್ಮಣ್ಯ, ಹುಲುಕುಡಿ, ದೇವರಬೆಟ್ಟ,ಗಂಡ್ರಗೊಳ್ಳಿಪುರ ಅರಣ್ಯ, ಕಲ್ಲುಕೋಟೆಯೂ ಸೇರಿದಂತೆ ಸುಮಾರು 5,000 ಎಕರೆಗಳಿಗಿಂತಲೂ ಹೆಚ್ಚು ಅರಣ್ಯ ಪ್ರದೇಶವು ಬೆಂಕಿಯಲ್ಲಿ ಸಿಲುಕಿ ಸುಟ್ಟು ಕರಕಲಾಗಿ ಹೋಗಿದೆ ಎನ್ನುತ್ತದೆ ಅರಣ್ಯ ಇಲಾಖೆಯ ಮಾಹಿತಿ.

ಈ ವರ್ಷ ಇನ್ನು ಈಗಷ್ಟೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಬೆಟ್ಟಗಳು ಹಾಗೂ ಅರಣ್ಯದಲ್ಲಿ ಬೆಳೆದಿದ್ದ ಹುಲ್ಲು ಒಣಗಿ ನಿಂತಿದೆ. ಒಂದು ಸಣ್ಣ ಕಿಡಿ ತಾಗಿದರೂ ಸಾಕು. ಕ್ಷಣಾರ್ಧದಲ್ಲಿ ಅಮೂಲ್ಯ ಸಸ್ಯ ರಾಶಿ, ಪ್ರಾಣಿ ಸಂಕುಲವನ್ನು ಬೆಂಕಿ ಭಸ್ಮವಾಗಿಸುತ್ತದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಅರಣ್ಯ ಇಲಾಖೆಯೊಂದಿಗೆ ಹಾಗೂ ಪ್ರತ್ಯೇಕವಾಗಿ ಸಂಘ ಸಂಸ್ಥೆಗಳು ಸಸಿ ನೆಡುವ ಕೆಲಸ ಮಾಡುತ್ತವೆ. ಕೆಲ ಸಂಘ ಸಂಸ್ಥೆಗಳು ನೆಟ್ಟ ಸಸಿಗಳನ್ನು ಬೇಸಿಗೆಯಲ್ಲಿ ನೀರು ಹಾಕಿ ಪ್ರಾಣಿಗಳಿಂದ ಹಾಳಾಗದಂತೆ ರಕ್ಷಣೆ ಮಾಡುವ ಹೊಣೆ ಹೊತ್ತಿವೆ. ಬೇಸಿಗೆಯಲ್ಲಿ ಅರಣ್ಯಕ್ಕೆ ಬೆಂಕಿ ಬೀಳದಂತೆ ನೋಡಿಕೊಳ್ಳುವ ಕೆಲಸದಲ್ಲಿಯೂ ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು. ಸಸಿ ನೆಟ್ಟು ಬೆಳೆಸುವಷ್ಟೇ ಮುಖ್ಯವಾಗಿರುವುದು ಅರಣ್ಯವನ್ನು ಬೆಂಕಿಯಿಂದ ರಕ್ಷಣೆ ಮಾಡುವುದೂ ಮುಖ್ಯ ಎನ್ನುತ್ತಾರೆ ಪಕ್ಷಿಗಳ ಹವ್ಯಾಸಿ ಛಾಯಾಗ್ರಾಹಕ ವೈ.ಟಿ.ಲೋಹಿತ್‌.

ಜನಜಾಗೃತಿ ಅಗತ್ಯ:ವಲಯ ಅರಣ್ಯ ಇಲಾಖೆ ಸಹಯೋಗದೊಂದಿಗೆ ಯುವ ಸಂಚಲನ ತಂಡದ ವತಿಯಿಂದ ಅರಣ್ಯಕ್ಕೆ ಬೆಂಕಿ ಹಚ್ಚುವುದರಿಂದ ಆಗುವಂತಹ ಪರಿಣಾಮಗಳು ಹಾಗೂ ಅಪರಾಧ ಎಸಗಿದವರ ವಿರುದ್ದ ಕೈಗೊಳ್ಳಲಾಗುವ ಕಾನೂನು ಕ್ರಮಗಳ ಕುರಿತು ಹಾಡು, ನಾಟಕ, ಜನರೊಂದಿಗೆ ಸಂವಾದದ ಮೂಲಕ ದೊಡ್ಡಬಳ್ಳಾಪುರ ತಾಲ್ಲೂಕಿನ ಬೆಟ್ಟಗಳ ತಪ್ಪಲಿನಲ್ಲಿರುವ ಹಳ್ಳಿಗಳಾದ ಕೊಟ್ಟಿಗೆ ಮಂಚೇನಹಳ್ಳಿ, ಕಾಮೇನಹಳ್ಳಿ ಹಾಗೂ ಕಲ್ಲುಕುಂಟೆ ಜನರಲ್ಲಿ ಅರಿವು ಮೂಡಿಸುವ ಕ್ರಮಗಳನ್ನು ಮೂರು ವರ್ಷಗಳಿಂದ ಮಾಡುತ್ತಾ ಬರುತ್ತಿದೆ.

ಅರಣ್ಯದ ಮಧ್ಯೆಯೇ ಬೆಂಕಿ ನಿಯಂತ್ರಣ ಕೇಂದ್ರಗಳನ್ನು ಸ್ಥಾಪಿಸಬೇಕು. ಹೀಗಾದಾಗ ಅರಣ್ಯ ಇಲಾಖೆ ಸಿಬ್ಬಂದಿ ಮುಂಜಾಗ್ರತೆಯಿಂದ ಅರಣ್ಯದಲ್ಲಿ ತಂಗಿದ್ದು ಬೆಂಕಿ ಕಾಣಿಸಿಕೊಂಡ ಕೂಡಲೆ ನಿಯಂತ್ರಿಸುವ ಕೆಲಸ ಮಾಡಲು ಸಹಕಾರಿ ಎನ್ನುತ್ತಾರೆ ಜನರು.

ಬೆಂಕಿ ಹೊತ್ತಲು ಜನರು ಧೂಮಪಾನ ಮಾಡಿ ಎಸೆಯುವ ಸಿಗರೇಟ್‌, ಬೀಡಿಯಂತಹ ಕಿಡಿ ಹೊತ್ತಿ ಬೆಂಕಿ ತಗಲುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ. ಅರಣ್ಯದಲ್ಲಿ ಈ ರೀತಿ ಏಕಾಏಕಿ ಉಂಟಾಗುವ ಬೆಂಕಿಯನ್ನು ತಡೆಯುವ ಅಥವಾ ದೂರದವರೆಗೆ ವ್ಯಾಪಿಸದಂತೆ ಬೆಂಕಿ ರೇಖೆ (ಫೈರ್‌ ಲೈನ್‌) ತಂತ್ರ ಬಳಕೆ ಮಾಡಬೇಕು. ಅರಣ್ಯ ಪ್ರದೇಶದ ಮೂಲಕ ಸಾಗುವ ರಸ್ತೆಗಳ ಅಕ್ಕ-ಪಕ್ಕ, ಕಾಡಿನ ಕಾಲು ದಾರಿಗಳು, ಬೆಂಕಿ ಸ್ಥಳಗಳನ್ನು ಗುರುತಿಸಿ ಸುಮಾರು ಮೂರು ಮೀಟರ್‌ ಅಗಲದ ಅಂತರದಲ್ಲಿ ಅರಣ್ಯ ಸಿಬ್ಬಂದಿಯೇ ಬೆಂಕಿ ಹಚ್ಚಿ ಒಣಗಿದ ಹುಲ್ಲು, ತರಗು ಗಿಡಗಳನ್ನು ಸುಟ್ಟು ನಾಶಪಡಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT