ಭಾನುವಾರ, ಅಕ್ಟೋಬರ್ 20, 2019
21 °C
ಅಂತರ ರಾಷ್ಟ್ರೀಯ ಜೈನ್ ಶಿಕ್ಷಣ ಸಂಸ್ಥೆ ಕಟ್ಟಡಕ್ಕೆ ಭೂಮಿ ಪೂಜೆ

ಸಂಸ್ಕಾರ ಕಲಿಕೆಯ ಸಂಸ್ಥೆಗಳು ಅವಶ್ಯಕ

Published:
Updated:
Prajavani

ದೇವನಹಳ್ಳಿ : ಇಂದು ಮಕ್ಕಳಿಗೆ ಸಂಸ್ಕಾರ ಕಲಿಸುವ ಶಿಕ್ಷಣ ಸಂಸ್ಥೆಗಳ ಅವಶ್ಯಕತೆ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು.

ಇಲ್ಲಿನ ಪಾರಿವಾಳ ಗುಡ್ಡದಲ್ಲಿರುವ ಸ್ಥೂಲಭದ್ರ ಜೈನ್ ಮಂದಿರದ ಆವರಣದಲ್ಲಿ ಜೈನಮಂದಿರದ ಆಡಳಿತ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಜೈನ್ ಶಿಕ್ಷಣ ಸಂಸ್ಥೆ ಕಟ್ಟಡಕ್ಕೆ ನಡೆದ ಭೂಮಿ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದರು.

‘ಈಚೆಗಿನ ದಿನಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು ವ್ಯಾಪಾರೀಕರಣ ಹೆಚ್ಚು ಮಾಡಿಕೊಳ್ಳುತ್ತಿವೆ, ಧಾರ್ಮಿಕತೆ, ನೈತಿಕ ಮೌಲ್ಯ ಮತ್ತು ನೀತಿ ಶಿಕ್ಷಣ ಕಡಿಮೆಯಾಗುತ್ತಿದೆ. ಸಂಸ್ಕಾರದಿಂದ ಉತ್ತಮ ನಾಗರಿಕರಾಗಲು ಸಾಧ್ಯ. ಸಂಸ್ಕಾರವಿಲ್ಲದ ಶಿಕ್ಷಣದಿಂದ ದೇಶದಲ್ಲಿ ಆಗುತ್ತಿರುವ ಅನಾಹುತ ಗಮನಿಸಬೇಕಾಗಿದೆ’ ಎಂದು ಹೇಳಿದರು.

ಇಲ್ಲಿನ ಜೈನ್ ಆಡಳಿತ ಮಂಡಳಿ ಮೊದಲ ಬಾರಿಗೆ ದೇವಾಲಯಗಳನ್ನು ನಿರ್ಮಾಣ ಮಾಡಿ ನಂತರ ಶಿಕ್ಷಣ ಸಂಸ್ಥೆ ಮೂಲಕ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಮುಂದಾಗಿರುವುದು ಅವರ ಸೇವಾ ಕಾಳಜಿಯನ್ನು ತೋರಿಸುತ್ತದೆ, ಇಂತಹ ಕೆಲಸಗಳು ಸಮಾಜಮುಖಿಯಾದಾಗ ಮತ್ತಷ್ಟು ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.

ಸ್ಥೂಲ ಭದ್ರ ಜೈನ ಮಂದಿರ ಆಡಳಿತ ಮಂಡಳಿ ಮುಖ್ಯಸ್ಥ ಚಂದ್ರಸೂರಿ ಮಹಾರಾಜ್ ಮಾತನಾಡಿ, ಜೈನ್ ಸಮುದಾಯದ ಧಾರ್ಮಿಕ ಪರಂಪರೆ ಉಳಿಸುವ ಪ್ರಯತ್ನ ಕಳೆದ 20 ವರ್ಷಗಳಿಂದ ಈ ಬೆಟ್ಟದಲ್ಲಿ ನಡೆಯುತ್ತಿದೆ ಎಂದರು. ಉಚಿತ ಕಣ್ಣಿನ ತಪಾಸಣೆ, ಹೃದಯ ಸಂಬಂಧಿ ಕಾಯಿಲೆಗಳಿಗೆ ತಪಾಸಣೆ ಮತ್ತು ಚಿಕಿತ್ಸೆ, ಉಚಿತ ಉಪಹಾರದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಜೈನ್ ಸಮುದಾಯದ ಹಿರಿಯ ಮಖಂಡರ ಅಭಿಪ್ರಾಯದಂತೆ ಅತ್ಯುನ್ನತ ಗುಣಮಟ್ಟದ ಶಿಕ್ಷಣ ಸಂಸ್ಥೆಗೆ ಅಡಿಗಲ್ಲು ಹಾಕಲಾಗಿದೆ ಎಂದು ಹೇಳಿದರು. ಪಾರಿವಾಳ ಗುಡ್ಡದ ಮೇಲೆ ಇರುವ ಜೈನ್ ಮಂದಿರಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ, ಕುಡಿಯುವ ನೀರು, ರಸ್ತೆ ಮತ್ತು ಬೀದಿ ದೀಪಗಳ ಅವಶ್ಯಕತೆ ಇದೆ, ಪ್ರವಾಸೋದ್ಯಮ ಸಚಿವರಾಗಿರುವುದರಿಂದ ತಾವುಗಳು ಸಚಿವ ಸಂಪುಟದಲ್ಲಿ ಚರ್ಚಿಸಿ ಮೂಲ ಸೌಲಭ್ಯಕ್ಕೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಜೈನ್ ಮುಖಂಡರಾದ ನಿರ್ಮಲ್ ಸುರಾನ, ಇಂದ್ರಜೀ, ಚಂದ್ರಜೀ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಬಿ.ರಾಜಣ್ಣ, ಉಪಾಧ್ಯಕ್ಷ ಎಚ್.ಎಂ.ರವಿಕುಮಾರ್, ತಾಲ್ಲೂಕು ಉಪಾಧ್ಯಕ್ಷ ಕೆ.ಸಿ.ಮುನಿರಾಜು, ಮುಖಂಡ.ಎ.ವಿ.ನಾರಾಯಣಸ್ವಾಮಿ ಇದ್ದರು.

Post Comments (+)