ಮಂಗಳವಾರ, ಆಗಸ್ಟ್ 3, 2021
21 °C
ವಿಜಯಪುರ: ಕೋವಿಡ್‌ ತಂದಿಟ್ಟ ಸಂಕಟ

ಮಣ್ಣಿನ ಗಣಪಕ್ಕೆ ಇಲ್ಲವಾದ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್‌–19ರಿಂದಾಗಿ ಸಮಾಜದ ನಾನಾ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತೆಯೇ, ಗಣಪತಿ ಮೂರ್ತಿ ತಯಾರಿಸುವ ಕಲಾವಿದರು ಸಹ ಸಂಕಷ್ಟ ಎದುರಿಸುತ್ತಿದ್ದಾರೆ. ಕಷ್ಟುಪಟ್ಟು ವರ್ಷವಿಡೀ ತಯಾರಿಸಿರುವ ಮಣ್ಣಿನ ಮೂರ್ತಿಗಳು ಮಾರಾಟವಾಗುತ್ತವೋ ಇಲ್ಲವೋ ಎನ್ನುವ ಆತಂಕ ಅವರನ್ನು ಕಾಡತೊಡಗಿದೆ.

ಎರಡು ತಿಂಗಳು ಮೊದಲೇ ಗಣೇಶ ಮೂರ್ತಿಗಳನ್ನು ಕಾಯ್ದಿರಿಸುತ್ತಿದ್ದ ಜನರು, ಈ ಬಾರಿ ಇಲ್ಲಿಯ ವರೆಗೆ ಈ ಕಡೆ ಸುಳಿಯಲಿಲ್ಲ ಎನ್ನುತ್ತಾರೆ ಕಲಾವಿದರು. 

‘ನಾವು ಕುಟುಂಬ ಸಮೇತವಾಗಿ ವರ್ಷವಿಡೀ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತೇವೆ. ಮಣ್ಣು ಖರೀದಿ ಮಾಡಬೇಕು. ಕಾರ್ಮಿಕರಿಗೆ ಕೂಲಿ ಕೊಡಬೇಕು. ನೀರು ಖರೀದಿ ಮಾಡಬೇಕು. ಮೂರ್ತಿಗಳ ತಯಾರಿಕೆಗಾಗಿ ಬಳಕೆ ಮಾಡಿಕೊಳ್ಳುತ್ತಿರುವ ಶೆಡ್‌ಗೆ ಬಾಡಿಗೆ ಕಟ್ಟಬೇಕು. ಅಚ್ಚುಗಳು ಖರೀದಿ ಮಾಡಬೇಕು ಈ ಬಾರಿ ಇದಕ್ಕೆ ಎಲ್ಲಿಂದ ದುಡ್ಡು ಹೊಂದಿಸುವುದು’ ಎನ್ನುತ್ತಾರೆ ಕಲಾವಿದ ಜಿ.ರಾಜಗೋಪಾಲ್ 

‘ಪ್ರತಿವರ್ಷ ಇಷ್ಟೊತ್ತಿಗೆ ಹೆಚ್ಚು ಬೇಡಿಕೆ ಬರುತ್ತಿತ್ತು. ಮುಂಗಡ ಹಣ ನೀಡಿ ಕಾಯ್ದಿರಿಸುತ್ತಿದ್ದರು. ಈ ಬಾರಿ ಕೊರೊನಾದಿಂದಾಗಿ ಬೇಡಿಕೆ ಬಂದಿಲ್ಲ. ಈ ಬಾರಿ ಹಬ್ಬಗಳ ಆಚರಣೆಗೆ ಅವಕಾಶ ಕೊಡ್ತಾರೋ ಇಲ್ಲವೋ ಎಂದು ಜನರು ಹಿಂದೇಟು ಹಾಕುತ್ತಿದ್ದಾರೆ. ಮೈಸೂರು, ಚಿತ್ತೂರು, ರಾಮನಗರ, ದೊಡ್ಡಬಳ್ಳಾಪುರ, ನಂಜನಗೂಡು ಸೇರಿದಂತೆ ಅನೇಕ ಕಡೆಗಳಿಗೆ ಮೂರ್ತಿಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದರು. ನಾವೂ ಕೂಡಾ ಮೂರ್ತಿಗಳಿಗೆ ಬಣ್ಣ ಹಾಕದೆ ಬಿಟ್ಟಿದ್ದೇವೆ’ ಎಂದು ತಮ್ಮ ಸಂಕಷ್ಟಗಳನ್ನು ಮುಂದಿಟ್ಟರು.

ಕಲಾವಿದ ಗಗನ್ ಮಾತನಾಡಿ, ‘ನಾನು ಪದವಿ ಮುಗಿಸಿಕೊಂಡಿದ್ದೇನೆ. ಅನೇಕ ಕಡೆಗಳಲ್ಲಿ ಕೆಲಸ ಹುಡುಕಾಡಿದೆ ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಲಾಕ್‌ಡೌನ್ ಆದ ನಂತರವಂತೂ ಎಲ್ಲಿಗೂ ಹೋಗಲಿಕ್ಕೆ ಸಾಧ್ಯವಾಗಲಿಲ್ಲ. ಆದ್ದರಿಂದ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಸಾಕಷ್ಟು ಪರಿಶ್ರಮಪಟ್ಟು ತಯಾರಿಸಿದ್ದೇವೆ. ಈ ಬಾರಿ ಹಬ್ಬಗಳಿಗೆ ಸರ್ಕಾರವೇನಾದ್ರೂ ಅವಕಾಶ ನೀಡದಿದ್ದರೆ, ನಮ್ಮ ಶ್ರಮವೆಲ್ಲಾ ವ್ಯರ್ಥವಾಗುತ್ತದೆ. ಸರ್ಕಾರ, ಏನು ನಿರ್ಧಾರ ತೆಗೆದುಕೊಳ್ಳುತ್ತೋ ಕಾದು ನೋಡಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.