ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿಕ್ಕಸಿಹಿ ನೀರಿನ ಕೆರೆಗೆ ಕಾಯಕಲ್ಪ ನೀಡಿ’

ಕಳೆದ ಮೂವತ್ತು ವರ್ಷದಿಂದ ಕೆರೆ ತುಂಬಿರುವ ಕುರುಹುಗಳೇ ಇಲ್ಲ * ಈಗ ಶೇ80ರಷ್ಟು ಪ್ರಗತಿ
ಅಕ್ಷರ ಗಾತ್ರ

ದೇವನಹಳ್ಳಿ:‘ಇಡೀ ಪಟ್ಟಣದ ಜನರು ಈ ಕೆರೆ ನೀರನ್ನೇ ಅವಲಂಬಿಸಿದ್ದರು. ಪ್ರತಿವರ್ಷ ನಡೆಯುತ್ತಿದ್ದ ತಪ್ಪೋತ್ಸವ ಮತ್ತು ಐತಿಹಾಸಿಕ ಕೋಟೆ ವೇಣುಗೋಪಾಲಸ್ವಾಮಿ ದೇವರ ಅಭಿಷೇಕಕ್ಕೆ ಇದೇ ಕೆರೆ ನೀರು ಬಳಸುತ್ತಿದ್ದರು. ಕಳೆದ ಮೂವತ್ತು ವರ್ಷಗಳಿಂದ ಚಿಕ್ಕಸಿಹಿ ನೀರಿನ ಕೆರೆ ತುಂಬಿರುವ ಕುರುಹುಗಳೇ ಇಲ್ಲ’ ಎಂದು ನೆನಪಿಸಿಕೊ‌ಳ್ಳುತ್ತಾರೆ ಹಿರಿಯರು.

ಒಂದೇ ಕೆರೆಯಲ್ಲಿ ನಾಲ್ಕು ಕೊಳವೆ ಬಾವಿ ಕೊರೆಯಿಸಿದರೂ ತಾತ್ಕಾಲಿಕ ಪರಿಹಾರ ಇಲ್ಲವಾಗಿದೆ. ಅಂತರ್ಜಲ ಕುಸಿತದಿಂದ ಸಮಸ್ಯೆ ಉಂಟಾಗಿದೆ ಎನ್ನುತ್ತಾರೆ ಪುರಸಭೆ ಹಿಂದಿನ ಆಡಳಿತದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಎಂ.ಕುಮಾರ್.

ಜಿಲ್ಲಾಧಿಕಾರಿ ಕರೀಗೌಡ ಒಂದು ದಿನ ಏಕಾಏಕಿ ಕೆರೆಗೆ ಭೇಟಿ ನೀಡಿದರು. ಪುರಸಭೆಯ ಎಲ್ಲ ಸದಸ್ಯರು ಮತ್ತು ಅಧಿಕಾರಿಗಳನ್ನು ಕಚೇರಿಗೆ ಆಹ್ವಾನಿಸಿ ಮಾತುಕತೆ ನಡೆಸಿದರು. ಈ ಹಿಂದಿನ ಅವಧಿಯಲ್ಲಿ ಪುರಸಭೆ ಸದಸ್ಯರಾಗಿದ್ದ ಗೋಪಾಲಕೃಷ್ಣ, ಕಳೆದ ಆರೇಳು ವರ್ಷದಿಂದ ಸಂಸದರ ನಿಧಿಯಿಂದ ಕೆರೆ ಅಭಿವೃದ್ಧಿಪಡಿಸಿ ವಾಕಿಂಗ್ ಟ್ರ್ಯಾಕ್ ಮತ್ತು ಸಂಗೀತ ದೀಪ ಅಳವಡಿಸಲು ಅನುದಾನ ಬಂದಿದೆ ಎಂದು ಹೇಳುತ್ತಲೇ ಬಂದರೂ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಸಾರ್ವಜನಿಕರ ಸಹಭಾಗಿತ್ವದಲ್ಲಿ ಆರಂಭವಾದ ಕೆರೆ ಅಭಿವೃದ್ಧಿ ಕಂಡು ತಾಲ್ಲೂಕಿನ ಇತರ ಕೆರೆಗಳ ಅಭಿವೃದ್ಧಿಗೂ ಆಯಾ ಗ್ರಾಮಗಳ ಜನರು ಮುಂದಾದ ಘಟನೆಯನ್ನು ಕುಮಾರ್‌ ನೆನಪಿಸಿಕೊಂಡರು.

ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ಮಾತನಾಡಿ, ಕೆರೆ ವಿಸ್ತೀರ್ಣ 21.34 ಎಕರೆ ಇದೆ. ಪುರಸಭೆ ವತಿಯಿಂದ ಸಹಕಾರ ನೀಡಲಾಗುವುದು. ಪ್ರಸ್ತುತ 65 ಸಾವಿರ ಟಿಪ್ಪರ್ ಲೋಡ್ ಮಣ್ಣು ಹೊರ ತೆಗೆಯಲಾಗಿದೆ. ಕೆರೆ ಅರ್ಧಭಾಗ ಕಲ್ಲು ಮಣ್ಣುಗಳ ಡಂಪಿಂಗ್ ಯಾರ್ಡ್ ಆಗಿತ್ತು. ಈಗ ಶೇ 80ರಷ್ಟು ಪ್ರಗತಿಯಾಗಿದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಕರೀಗೌಡ ಜಲಮೂಲ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿದ ಪರಿಣಾಮ ಕೆರೆಗಳಲ್ಲಿ ಹೂಳು ಎತ್ತಲಾಗಿದೆ. ಪಾರಿವಾಳ ಗುಡ್ಡ ಮತ್ತು ಹಳೆ ಎ.ಆರ್.ಟಿ.ಒ ಕಚೇರಿಯಿಂದ ಬರುವ ರಾಜಕಾಲುವೆ ಅನೇಕ ಕಡೆ ಒತ್ತುವರಿಯಾಗಿದೆ. ತೆರವುಗೊಳಿಸಿದರೆ ಮಾತ್ರ ಕೆರೆ ಅಭಿವೃದ್ಧಿ ಸಾರ್ಥಕವಾಗಲಿದೆ ಎನ್ನುತ್ತಾರೆ ಪುಟ್ಟಪ್ಪನಗುಡಿ ನಿವಾಸಿ ಆಂಜಿನಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT