ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಹಿಪ್ಪುನೇರಳೆಗೆ ಬಂಗಾರದ ಬೆಲೆ

ರೇಷ್ಮೆ ಹುಳು ಸಾಕಾಣಿಕೆ ಬಿಟ್ಟು ಸೊಪ್ಪು ಮಾರಾಟಕ್ಕೆ ಮುಂದಾದ ರೈತರು
Last Updated 26 ಜನವರಿ 2023, 5:12 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ಹೋಬಳಿಯಲ್ಲಿ ಹಿಪ್ಪುನೇರಳೆ ಸೊಪ್ಪಿಗೆ ಬಂಗಾರದ ಬೆಲೆ ಬಂದಿದೆ. ಬೆಳೆಗಾರರು ರೇಷ್ಮೆ ಹುಳು ಸಾಕಾಣಿಕೆಗೆ ಬದಲಾಗಿ ಸೊಪ್ಪು ಮಾರಾಟ ಮಾಡಿ ಲಾಭಗಳಿಸಲು ಹಾದಿಯಲ್ಲಿದ್ದಾರೆ.

ರಾಜ್ಯ ಸರ್ಕಾರ ರೇಷ್ಮೆ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಹಿಪ್ಪುನೇರಳೆ ನಾಟಿ, ಚಂದ್ರಿಕೆ ಖರೀದಿ, ರೇಷ್ಮೆ ಹುಳು ಸಾಕಾಣಿಕೆ ಮನೆ, ಹನಿ ನೀರಾವರಿ ಪದ್ಧತಿ ಅಳವಡಿಕೆ ಹೀಗೆ ಹಲವಾರು ರೀತಿಯಲ್ಲಿ ರೈತರಿಗೆ ಪ್ರೋತ್ಸಾಹ ಧನ ನೀಡುತ್ತಿದೆ.

ಈ ನಡುವೆಯೇ ಅಂತರ್ಜಲ ಮಟ್ಟ ಕುಸಿತದ ಪರಿಣಾಮ ನೀರಿನ ಕೊರತೆಯಿಂದ ಬಹಳಷ್ಟು ರೈತರು ಹಿಪ್ಪುನೇರಳೆ ತೋಟಗಳನ್ನು ನಾಶಪಡಿಸಿ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳತ್ತ ಮುಖ ಮಾಡಿದ್ದರು. ಇದರಿಂದ ಹಿಪ್ಪುನೇರಳೆ ಸೊಪ್ಪಿನ ಕೊರತೆ ಕಂಡುಬಂದಿತ್ತು. ಇದೇ ಈಗ ಸೊಪ್ಪಿನ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ತೀವ್ರ ಚಳಿಯ ಕಾರಣದಿಂದ ಸೊಪ್ಪು ವೇಗವಾಗಿ ಬೆಳೆಯುತ್ತಿಲ್ಲ. ಒಂದು ಬಾರಿ ಸೊಪ್ಪು ಕಟಾವು ಮಾಡಿದರೆ ಮತ್ತೊಂದು ಕಟಾವಿಗೆ 50 ದಿನಗಳ ಸಮಯ ಬೇಕು. ಆದರೆ, ಚಳಿಯ ಪರಿಣಾಮ 70 ದಿನಗಳಾದರೂ ಸೊಪ್ಪು ಹುಲುಸಾಗಿ ಬೆಳೆಯುತ್ತಿಲ್ಲ. ಈ ಕಾರಣದಿಂದ ಸೊಪ್ಪಿನ ಕೊರತೆ ಕಂಡು ಬರುತ್ತಿದೆ. ಇದರಿಂದ ರೇಷ್ಮೆ ಹುಳು ಸಾಕಾಣಿಕೆ ಮಾಡಲು ರೈತರು ಹಿಂದಡಿ ಇಡುತ್ತಿದ್ದಾರೆ.

ಇತ್ತೀಚೆಗೆ ಹಿಪ್ಪುನೇರಳೆ ತೋಟಗಳಲ್ಲಿ ಎಲೆ ಸುರುಳಿ ರೋಗ ಕಾಣಿಸಿಕೊಂಡಿತ್ತು. ರೈತರು ರೋಗಕ್ಕೆ ತುತ್ತಾದ ಸೊಪ್ಪು ಕಟಾವು ಮಾಡಿ ಜಾನುವಾರುಗಳಿಗೆ ಹಾಕಿದ್ದಾರೆ. ತಮ್ಮ ತೋಟಗಳಲ್ಲಿ ಸೊಪ್ಪು ಬೆಳೆದು, ರೇಷ್ಮೆ ಹುಳು ಸಾಕಾಣಿಕೆ ಮಾಡುವ ರೈತರು ಮಾತ್ರ ಗೂಡು ಬೆಳೆಯುತ್ತಿದ್ದಾರೆ.

ಶೇ 75ರಷ್ಟು ರೈತರು, ಸೊಪ್ಪು ಖರೀದಿಸಿ ಹುಳು ಸಾಕಾಣಿಕೆ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಾರೆ. ಇವರಲ್ಲಿ ಬಹುತೇಕರು ಜೀವನೋಪಾಯಕ್ಕೆ ಪರ್ಯಾಯ ಮಾರ್ಗ ಅನುಸರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ವಿಮಾನ ನಿಲ್ದಾಣದಲ್ಲಿ ಉದ್ಯೋಗ ಹುಡುಕಿಕೊಂಡು ಹೋಗಿದ್ದಾರೆ.

‘ಒಂದು ಮೂಟೆ ಸೊಪ್ಪಿನ ಬೆಲೆ ಸುಮಾರು ₹ 1,250 ಮುಟ್ಟಿದೆ. ಒಂದು ಮೊಟ್ಟೆಗೆ ಒಂದು ಕೆ.ಜಿ. ಗೂಡು ಬೆಳೆದರೂ ಸೊಪ್ಪಿನ ಬೆಲೆ ಏರಿಕೆಯಿಂದ ರೈತರು ಹೆಚ್ಚು ಸಾಲವನ್ನು ಹೊತ್ತುಕೊಳ್ಳಬೇಕಿದೆ. ಆದಕಾರಣ ಬಹುತೇಕ ರೈತರು ಹುಳು ಸಾಕಾಣಿಕೆ ಮಾಡುವುದರ ಬದಲಿಗೆ ಸೊಪ್ಪು ಮಾರಾಟ ಮಾಡುತ್ತಿದ್ದಾರೆ’ ಎಂದು ರೈತ ಮಿತ್ತನಹಳ್ಳಿ ಮುನಿಆಂಜಿನಪ್ಪ ಹೇಳಿದರು.

ರೈತ ಕೃಷ್ಣಪ್ಪ ಮಾತನಾಡಿ, ‘ನಾವು ನೀರಿನ ಅಭಾವದಿಂದ ಹಿಪ್ಪುನೇರಳೆ ತೋಟಗಳನ್ನು ಕಿತ್ತು ಹಾಕಿ ದಾಳಿಂಬೆ ಹಾಕಿದ್ದೆವು. ತೀವ್ರ ಚಳಿಗೆ ದಾಳಿಂಬೆ ಬೆಳೆಯೂ ನಾಶವಾಗಿದೆ. ಈಗ ಹಿಪ್ಪುನೇರಳೆ ಸೊಪ್ಪಿನ ಬೆಲೆ ಗಗನಕ್ಕೇರಿದೆ. ಇಷ್ಟೊಂದು ಬೆಲೆ ಬರುತ್ತದೆಂದು ಊಹಿಸಿರಲಿಲ್ಲ’ ಎಂದರು.

‌‘ನಾವು ಒಂದು ಮೂಟೆ ಸೊಪ್ಪನ್ನು ₹ 50ಕ್ಕೆ ಮಾರಾಟ ಮಾಡಿದ್ದೇವೆ. ಇಂದು ₹ 1,300ಕ್ಕೆ ಮಾರಾಟವಾಗುತ್ತಿದೆ. ದಾಳಿಂಬೆ ಕಿತ್ತು ಹಾಕಿ ಈಗ ಹಿಪ್ಪುನೇರಳೆ ಕಡ್ಡಿ ನಾಟಿ ಮಾಡಿದ್ದೇವೆ’ ಎಂದರು.

‘ಹಿಪ್ಪುನೇರಳೆ ಬೆಳೆದಿರುವ ರೈತರು ಸ್ಥಳದಲ್ಲಿಯೇ ಹಣ ಕೊಟ್ಟರೆ ಮಾತ್ರ ಕಟಾವು ಮಾಡಿಸುತ್ತಾರೆ. ನಗದು ಕೊಡದಿದ್ದರೆ ಕಟಾವು ಮಾಡಲು ಬಿಡುವುದಿಲ್ಲ. ಕೈಯಲ್ಲಿ ನಗದು ಇಟ್ಟುಕೊಂಡು ಬೆಳೆ ಬೆಳೆಯುವುದು ಅಸಾಧ್ಯ. ಇದರಿಂದ ಬೇರೆ ಕೆಲಸ ಹುಡುಕಿಕೊಳ್ಳುತ್ತಿದ್ದೇವೆ’ ಎಂದು ರೇಷ್ಮೆ ಬೆಳೆಗಾರ ಹನುಮಂತರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT