ಶುಕ್ರವಾರ, ಮಾರ್ಚ್ 24, 2023
22 °C
ವಿಜಯಪುರ: ರೈತರ ಮೊಗದಲ್ಲಿ ಮೂಡಿದ ಮಂದಹಾಸ

ಸಕಾಲದ ಮಳೆ: ಉತ್ತಮ ಬೆಳೆ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ತೀವ್ರ ಮಳೆ ಕೊರತೆಯಿಂದಾಗಿ ಫಸಲು ಬರುವ ಮುನ್ನವೇ ಬೆಳೆ ಒಣಗುವುದು ಕಳೆದ ಹಲವು ವರ್ಷಗಳಿಂದ ಸಾಮಾನ್ಯವಾಗಿತ್ತು. ತೀವ್ರವಾಗಿ ನಷ್ಟ ಅನುಭವಿಸಿದ್ದ ರೈತರ ಪಾಲಿಗೆ ಈ ಬಾರಿ ಸಕಾಲದಲ್ಲಿ ಸುರಿದಿರುವ ಮಳೆ ವರದಾನವಾಗಿದೆ. ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದೇವೆ ಎಂದು ರೈತ ವೆಂಕಟೇಗೌಡ ಸಂತಸ ವ್ಯಕ್ತಪಡಿಸಿದರು.

ಸತತವಾಗಿ ನಾಲ್ಕೈದು ವರ್ಷಗಳಿಂದ ಬಿತ್ತನೆ ಮಾಡುವವರೆಗೂ ಬೀಳುತ್ತಿದ್ದ ಮಳೆ, ಬಿತ್ತನೆಯಾಗಿ ಕಾಳುಗಳು ಮೊಳಕೆಯೊಡೆದ ನಂತರ ಬರುತ್ತಿರಲಿಲ್ಲ. ಇದರಿಂದ ಸಾವಿರಾರು ರೂಪಾಯಿ ಸಾಲ ಮಾಡಿ, ಬಂಡವಾಳ ಹೂಡಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಸರ್ಕಾರ, ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದರೂ ಯಾವುದೇ ಪರಿಹಾರ ನೀಡುತ್ತಿರಲಿಲ್ಲ. ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಆಗಿರುವುದರಿಂದ ಬೆಳೆ ಸಮೃದ್ಧವಾಗಿದೆ. ಹೊಲಗಳಲ್ಲಿ ರಾಗಿಯ ಪೈರು ಸಮೃದ್ಧವಾಗಿದ್ದು, ಉತ್ತಮ ಬೆಳೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದ ಅವರು ಹೇಳಿದರು. 

ತಾಲ್ಲೂಕಿನ ಬಹುತೇಕ ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಗಿ, ಮುಸುಕಿನಜೋಳ, ಭತ್ತ, ನೆಲಗಡಲೆ, ನವಣೆ, ತೊಗರಿ, ಅಲಸಂದೆ, ಮತ್ತಿತರ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಹೊಲಗಳಲ್ಲಿ ಬೆಳೆ ಸಮೃದ್ಧವಾಗಿದೆ. ಕಳೆದ ವರ್ಷ ಮುಂಗಾರು ಕೈಕೊಟ್ಟಿದ್ದರಿಂದ ಮಳೆಯಾಶ್ರಿತ ನೆಲಗಡಲೆ ಮತ್ತು ರಾಗಿಯನ್ನು ಬೆಳೆದಿದ್ದ ರೈತರು ಕೈ ಸುಟ್ಟುಕೊಂಡಿದ್ದರು. ಈಗ ರಾಗಿ ತೆನೆ ಬರುವ ಹಂತದಲ್ಲಿದೆ. ನೆಲಗಡಲೆ ಉತ್ತಮವಾಗಿ ಕಾಯಿ ಬಿಟ್ಟಿದೆ ಎಂದು ಹೇಳಿದರು.  

ರಾಗಿ, ನೆಲಗಡಲೆ ಜತೆಗೆ ಮಿಶ್ರ ಬೇಸಾಯದಲ್ಲಿ ಬೆಳೆದಿರುವ ಸಜ್ಜೆ, ನವಣೆ, ಸಾಮೆ, ಬಿಳಿಜೋಳ, ಮುಸುಕಿನ ಜೋಳ ಸೇರಿದಂತೆ ನವಧಾನ್ಯ ಗಳನ್ನು ಬಿತ್ತನೆ ಮಾಡಿದ ಕಾರಣದಿಂದ ಸಾಂಪ್ರದಾಯಿಕ ಬೇಸಾಯ ಮತ್ತೆ ಗರಿಗೆದರಿದೆ. ರಾಗಿ ಬೆಳೆ ಬಹುತೇಕ ಕಡೆಗಳಲ್ಲಿ ನಾಲ್ಕು ಅಡಿಗಳಷ್ಟು ಎತ್ತರಕ್ಕೆ  ಬೆಳೆದು ನಿಂತಿದೆ. ತೆನೆ ಬರುವ ಹಂತ ತಲುಪಿದೆ. ನೆಲಗಡಲೆಯಲ್ಲಿ ಬಹುತೇಕ ಕಾಯಿ ಬಲಿತಿರುವುದರಿಂದ ಇನ್ನು 15 ದಿನಗಳಲ್ಲಿ ಫಸಲು ರೈತರ ಕೈ ಸೇರಲಿದೆ ಎಂದು ಅವರು ಹೇಳಿದರು.

ಕೆಲವು ಕಡೆಗಳಲ್ಲಿ ನೆಲಗಡಲೆಗೆ ಕಾಗೆ, ಕೋತಿ ಹಾಗೂ ಕಾಡು ಹಂದಿಗಳ ಕಾಟ ಇರುವುದರಿಂದ ರೈತರು ಹೊಲಗಳ ಬಳಿ ಗುಡಿಸಲು ಹಾಕಿ ಕಾವಲು ಕಾಯುತ್ತಿದ್ದಾರೆ. ಕೆಲವರು ಪಟಾಕಿಗಳನ್ನು ಸಿಡಿಸಿ ನೆಲಗಡಲೆ ತಿನ್ನಲು ಬರುವ ಪ್ರಾಣಿ ಪಕ್ಷಿಗಳನ್ನು ಬೆದರಿಸುತ್ತಿದ್ದಾರೆ ಎಂದು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.