ಭಾನುವಾರ, ಸೆಪ್ಟೆಂಬರ್ 19, 2021
24 °C
ಕಾರಹಳ್ಳಿಯಲ್ಲಿ ದಿನಸಿ ಕಿಟ್‌ ವಿತರಣೆ

ಕೊರೊನಾ ತಡೆಗೆ ಸರ್ಕಾರ ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಕೊರೊನಾ ನಿಯಂತ್ರಣ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಲ್ಲಿ ವಿಫಲವಾಗಿದೆ. ಜನರ ಅಭಿವೃದ್ಧಿ ಬಿಜೆಪಿ ಸರ್ಕಾರಕ್ಕೆ ಬೇಕಿಲ್ಲ. ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ’ ಎಂದು ಶಾಸಕ ಕೃಷ್ಣಬೈರೇಗೌಡ ದೂರಿದರು.

ತಾಲ್ಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಪ್ರಜಾಪ್ರತಿನಿಧಿ ಸಮಿತಿ ರಚನೆಯ ಪೂರ್ವಭಾವಿ ಸಭೆ ಮತ್ತು ಬಡವರಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಇದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಚೇರಿಗಳು ಒಂದೊಂದು ಭಾಗದಲ್ಲಿ ಹರಿದು ಹಂಚಿಹೋಗಿದ್ದವು. 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯನ್ನು ಪ್ರತ್ಯೇಕ ಮಾಡಿದಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನೇ ಬೇರೆ ಮಾಡಲಾಗಿತ್ತು ಎಂದರು.

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಎಲ್ಲಾ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು, ಮುಖಂಡರ ಒಮ್ಮತದಂತೆ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬಳಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಉದ್ಘಾಟಿಸಿದರು. ಒಂದೇ ಸೂರಿನಡಿ ಎಲ್ಲಾ ಕಚೇರಿಗಳು ಕೆಲಸ ಮಾಡುವಂತೆ ಕಾಂಗ್ರೆಸ್ ಸರ್ಕಾರ ಮಾಡಿದೆ. ಇಂತಹ ಅಂಶಗಳನ್ನು ಕಾರ್ಯಕರ್ತರು ಜನರಿಗೆ ಮನದಟ್ಟು ಮಾಡಬೇಕು ಎಂದು ಹೇಳಿದರು.

ಈ ಭಾಗಕ್ಕೆ ಯಾವ ನದಿಯಿಂದಲೂ ನೀರು ತರಲು ಆಗುತ್ತಿಲ್ಲ. ಕಾವೇರಿ ನೀರಿಗೆ ಕೈಹಾಕಿದರೆ ತಮಿಳುನಾಡಿನವರು ಎದ್ದೇಳ್ತಾರೆ. ಸತತ ಬರಗಾಲ ಎದುರಿಸುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕಾಂಗ್ರೆಸ್ ಸರ್ಕಾರದಲ್ಲಿ ಎತ್ತಿನಹೊಳೆ ಯೋಜನೆಯ ಬೃಹತ್ ಕಾಮಗಾರಿಗೆ ದಿಟ್ಟ ನಿರ್ಧಾರ ಕೈಗೊಂಡು ಹಸಿರು ನಿಶಾನೆ ತೋರಿದ್ದ ಹೆಗ್ಗಳಿಕೆ ಇದೆ ಎಂದರು.

ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಬಿಜೆಪಿ ಸರ್ಕಾರ ಏಪ್ರಿಲ್ ತಿಂಗಳಿನಲ್ಲಿ ಲಾಕ್‌ಡೌನ್ ಅಸ್ತ್ರವನ್ನು ಬಳಸಿ ರೈತರು, ಕಾರ್ಮಿಕರಿಗೆ ಸಂಕಷ್ಟಕ್ಕೆ ಸಿಲುಕಿಸಿತು. ಕೊರೊನಾ ಸಾವಿನ ಸಂಖ್ಯೆಯ ಬಗ್ಗೆ ಸುಳ್ಳು ಅಂಕಿಅಂಶ ಕೊಟ್ಟಿದೆ ಎಂದು ಟೀಕಿಸಿದರು.

ಎರಡನೇ ಅಲೆ ಸಂಪೂರ್ಣವಾಗಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದ ಬಂದಿದೆ. ಎಲ್ಲರೂ ನೋವು, ತೊಂದರೆ ಅನುಭವಿಸುವಂತೆ ಆಯಿತು. ಸರಿಯಾಗಿ ಕೊರೊನಾ ಲಸಿಕೆ ಸರಿಯಾಗಿ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್. ರವಿ, ಮಾಜಿ ಶಾಸಕರಾದ ಮುನಿನರಸಿಂಹಯ್ಯ, ಕೆ. ವೆಂಕಟಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಪ್ರಸನ್ನಕುಮಾರ್, ಉಪಾಧ್ಯಕ್ಷ ವಿ. ಶಾಂತಕುಮಾರ್, ಚನ್ನಹಳ್ಳಿ ರಾಜಣ್ಣ, ಎಸ್.ಪಿ. ಮುನಿರಾಜು, ಕೆಪಿಸಿಸಿ ಸದಸ್ಯರಾದ ಚಿನ್ನಪ್ಪ, ಚೇತನ್‌ಗೌಡ, ಸಿ. ಜಗನ್ನಾಥ್, ಕೆ.ಸಿ. ಮಂಜುನಾಥ್, ಅನಂತ್‌ಕುಮಾರಿ, ರಾಧಮ್ಮ, ಕೋದಂಡರಾಮು, ವಿಜಯಪುರ ಬ್ಲಾಕ್ ಅಧ್ಯಕ್ಷ ವಿ. ರಾಮಚಂದ್ರಪ್ಪ, ಲಕ್ಷ್ಮೇಗೌಡ, ಜಯರಾಮು, ಟಿ.ಎಸ್. ರಾಜಣ್ಣ, ಶಶಿಕುಮಾರ್, ಕೆಂಪಣ್ಣ, ಅಮೀರ್‌ಜಾನ್, ತಾಜ್‌ಪೀರ್, ಜೋಸೆಫ್ (ರಾಜಣ್ಣ), ಸಜ್ಜಾದ್, ಗೋಪಾಲಗೌಡ, ದಿನ್ನೂರು ವೆಂಕಟೇಶ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.