ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನರಾಯಪಟ್ಟಣ | ಸರ್ಕಾರ ಕಾರ್ಪೋರೆಟ್‌ ಪೋಷಿತ ಹುಲಿ: ನಾಗಮೋಹನ ದಾಸ್‌

ಧರಣಿ ನಿರತ ಸ್ಥಳದಲ್ಲಿ ‘ಭೂ ಸ್ವಾಧೀನ ಒಳಸುಳಿಗಳು’ ಪುಸ್ತಕ ಲೋಕಾರ್ಪಣೆ
Last Updated 18 ಜನವರಿ 2023, 11:14 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ (ದೇವನಹಳ್ಳಿ): 'ರೈತರು ಇಂದು ಘನೆತೆ, ಸ್ವಾಭಿಮಾನದಿಂದ ಬದುಕುವ ಪರಿಸ್ಥಿತಿ ಇಲ್ಲ. ಹಸಿರು ಕ್ರಾಂತಿಯ ಪರಿಣಾಮ 305 ಮಿಲಿಯನ್‌ ಟನ್‌ ಆಹಾರ ಉತ್ಪಾದನೆ ಮಾಡುವ ಕೃಷಿಕರನ್ನು ಸರ್ಕಾರ ಸಾಂಸ್ಕೃತಿಕ, ಆರ್ಥಿಕ, ಸಾಮಾಜಿ ದಿವಾಳಿತನಕ್ಕೆ ತಂದೊಡ್ಡಿದೆ' ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಧರಣಿ ನಿರತ ಸ್ಥಳದಲ್ಲಿ 'ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ' ಪ್ರಕಟಿಸಿರುವ 'ಭೂ ಸ್ವಾಧೀನ ಒಳಸುಳಿಗಳು' ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

'ಹೋರಾಟದ ಕಣದಲ್ಲಿ ಇದೇ ಮೊದಲ ಬಾರಿಗೆ ಪುಸ್ತಕ ಬಿಡುಗಡೆ ಮಾಡಿದ್ದೇನೆ. ಸರ್ಕಾರಗಳು, ಕೆಐಎಡಿಬಿ ಅಧಿಕಾರಿಗಳು ಕಾರ್ಪೋರೆಟ್‌ ಪೋಷಿತ ಹುಲಿಗಳಂತೆ, ರೈತರ ಹೋರಾಟ ಹತ್ತಿಕ್ಕಲು ವಿವಿಧ ತಂತ್ರಗಾರಿಕೆ ಮಾಡುತ್ತಾರೆ. ಅದಕ್ಕೆಲ್ಲ ಬಗ್ಗಬೇಡಿ. ಒಗ್ಗಟ್ಟಿನಿಂದ ಇದ್ದರೇ ಹುಲಿಗಳು ಏನು ಮಾಡಲು ಆಗುವುದಿಲ್ಲ. ಆದರೆ ಅಧಿಕಾರಿ ವರ್ಗ, ದಲ್ಲಾಳಿಗಳು ನರಿಗಳಂತೆ ಅವರ ತಂತ್ರಗಾರಿಕೆಗೆ ಸಲಾಮು ಹೊಡೆಯುತ್ತಿದ್ದಾರೆ. ಐಕ್ಯತೆಯಿಂದ ಅವರನ್ನೆಲ್ಲಾ ಓಡಿಸಿ' ಎಂದು ಸಲಹೆ ನೀಡಿದರು.

'ಸಂಸತ್ತಿನಲ್ಲಿ ಕೃಷಿಯ ಮೂರು ಕಾಯಿದೆಗಳು ಚರ್ಚಿಸದೆ ಅನುಮೋದನೆ ಮಾಡುತ್ತಾರೆ. ರೈತ ಹೋರಾಟದ ಫಲವಾಗಿ ರದ್ದು ಮಾಡುತ್ತಾರೆ. ರಾಜ್ಯದಲ್ಲಿ ಯಾಕೆ ಅದು ಸಾಧ್ಯವಾಗಿಲ್ಲ. ಸರ್ಕಾರಗಳ ನೀತಿಯಿಂದ ಸರಿದಾರಿ ಕಾಣದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭೂಮಿಗೆ ಮದುವೆಗೆ, ಸಾಲಕ್ಕೆ, ಕೋರ್ಟ್‌ ಜಾಮೀನಿಗೂ ಸಂಬಂಧವಿದೆ. ಭೂಮಿ ಎಂಬುದು ಒಂದು ಆರ್ಥಿಕ ಸ್ಥಿತಿ ಮಾತ್ರವಲ್ಲ'ಎಂದು ತಿಳಿಸಿದರು.

‘ಪ್ರಪಂಚದ ಎಲ್ಲ ನಾಗರಿಕತೆ ಪ್ರಾರಂಭವಾಗಿದ್ದು, ರೈತರಿಂದ, ಭೂಮಿ ಕಳೆದುಕೊಂಡರೇ ಕೋಟ್ಯಾಂತರ ಜೀವ ಸಂಕುಲದ ಸ್ಥಿತಿಯೇನು, ತ್ಯಾಗ, ಐಕ್ಯತೆಗಳು ಇಲ್ಲದಿದ್ದರೇ ಯಾವ ಹೋರಾಟವೂ ಫಲ ನೀಡುವುದಿಲ್ಲ. ಕಾನೂನಿನ ಅರಿವಿನಿಂದ ಶೋ‍ಷಣೆ, ವಂಚನೆಯ ವಿರುದ್ಧ ರಕ್ಷಣೆ ಪಡೆಯಬಹುದಾಗಿದೆ. ಭೂ ಸ್ವಾಧೀನವೂ ಒಂದು ಸಮಸ್ಯೆ ಎಂದು ಪರಿಗಣನೆ ಮಾಡಿದಾಗ ಮಾತ್ರ ಅದಕ್ಕೆ ಪರಿಹಾರ ಹುಡುಕಲು ಸಾಧ್ಯ' ಎಂದರು.

ವಿಜ್ಞಾನ ಲೇಖಕ, ಪತ್ರಕರ್ತ ನಾಗೇಶ್‌ ಹೆಗಡೆ ಮಾತನಾಡಿ, 'ನಮ್ಮಿಂದ ಪಡೆದ ನೈಸರ್ಗಿಕ ಸಂಪತ್ತನ್ನು ಬಳಸಿ ಮಾರಾಟ ವಸ್ತುಗಳನ್ನು ಮಾಡಲು ನಮ್ಮ ಭೂಮಿಯನ್ನೇ ಕಲುಷಿತ ಮಾಡುತ್ತಾರೆ. ಗ್ರಾಮದಲ್ಲಿರುವ ಸ್ಥಳೀಯ ಸಂಪನ್ಮೂಲ, ಜೀವವೈವಿಧ್ಯ, ಸಸ್ಯ ಸಂಪತ್ತು, ನೈಸರ್ಗಿಕ ಆಸ್ತಿಗಳ ಕುರಿತು ಮಾಹಿತಿ ಕಲೆ ಹಾಕಿ. ಇದು ಭೂಮಿ ಉಳಿವಿಗೆ ನೆರವಾಗುತ್ತದೆ' ಎಂದು ಸಲಹೆ ನೀಡಿದರು.

'ಕೆಐಎಡಿಬಿ ಎಂಬ ನರ ಭಕ್ಷಕ ಹುಲಿಗೆ ಸಿಲುಕದಿರಲು ನ್ಯಾಯಾಂಗದಿಂದ ರಕ್ಷಣೆ ಪಡೆಯಬೇಕಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ 10 ಎಕರೆ ಕೈಗಾರಿಕೆ ಮಾಡಿದರೆ ಕೆಲಸವೂ ದೊರೆಯುತ್ತದೆ. ಬೃಹತ್‌ ಪ್ರಮಾಣದ ಕೈಗಾರಿಕೆಗಳ ಅಗತ್ಯ ಇರುವುದಿಲ್ಲ. ಆದರೆ ಯುವಕರಿಂದ 40% ಕಮಿಷನ್‌ ದೊರೆಯದ ಕಾರಣ ಸರ್ಕಾರ ಅದನ್ನು ಮಾಡುತ್ತಿಲ್ಲ. ಗ್ರಾ.ಪಂ ಮಟ್ಟದಲ್ಲಿ ಜೀವವೈವಿಧ್ಯ ಸಮಿತಿಗಳನ್ನು ರಚಿಸಿ ಭೂಮಿ ಉಳಿವಿಗೆ ಹೋರಾಟ ಮಾಡುವ ಅವಶ್ಯಕತೆ ಇದೆ'ಎಂದು ಚಿಂತಕ ಕೆ.ಪಿ.ಸುರೇಶ್‌ ತಿಳಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡ ಆಂಜನೇಯ ರೆಡ್ಡಿ, 'ಇಂದು ಬಿಡುಗಡೆಯಾದ ಪುಸ್ತಕವೂ ಕರ್ನಾಟಕದ ಅನೇಕ ಕಡೆಯಲ್ಲಿಯಾಗುತ್ತಿರುವ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ರೈತರು ಯಾವ ರೀತಿ ಎದುರಿಸಬೇಕು ಎಂಬುದನ್ನು ತಿಳಿಸುತ್ತದೆ. ವರ್ಷಗಳ ಕಾಲ ಹೋರಾಟ ಮಾಡುತ್ತಿದ್ದರೂ ಸರ್ಕಾರ ಗಮನ ಹರಿಸುತ್ತಿಲ್ಲ. ಶೇ 74 ರಷ್ಟು ರೈತರು ಭೂಮಿ ನೀಡುವುದಿಲ್ಲ ಎಂದು ದಾಖಲೆ ಸಮೇತ ತಕರಾರು ಸಲ್ಲಿಸಿದ್ದಾರೆ. ಸರ್ಕಾರವೂ ಭೂ ಸ್ವಾಧೀನ ಪ್ರಕ್ರಿಯೆ ಕುರಿತು ಸ್ಪಷ್ಟ ನಿಲುವಿಗೆ ಬರಬೇಕು' ಎಂದು ಒತ್ತಾಯಿಸಿದರು.

ಇದೇ ವೇಳೆ ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ ತಂಡದ ವಾತ್ಸಲಾ, ರಜಿನಿ, ರಕ್ಷಿತ್‌, ನವೀನ್‌, ರೈತ ಸಂಘದ ಪ್ರಮುಖರು, ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯರು, ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT