ಶನಿವಾರ, ಫೆಬ್ರವರಿ 27, 2021
31 °C
ಆರೋಗ್ಯ ತಪಾಸಣೆ, ನೈರ್ಮಲ್ಯ ಅರಿವು ಶಿಬಿರ

ಅಂಗವಿಕಲರು ಛಲ ಬೆಳೆಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಅಂಗವೈಕಲ್ಯ ಹೊಂದಿದ ಮಾತ್ರಕ್ಕೆ ಯಾರೂ ಧೈರ್ಯಗೆಡಬಾರದು. ಮುನ್ನುಗ್ಗಿ ಕೆಲಸ ಮಾಡುವ ಛಲ ಬೆಳೆಸಿಕೊಳ್ಳಬೇಕು. ಎಲ್ಲರಲ್ಲೂ ಒಂದೊಂದು ಪ್ರತಿಭೆ ಇದ್ದೆ ಇರುತ್ತದೆ. ಅದನ್ನು ಹೊರತರಲು ಪ್ರೋತ್ಸಾಹ ನೀಡಬೇಕು’ ಎಂದು ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಹೇಳಿದರು.

ಇಲ್ಲಿನ ಸ್ವರ್ಣ ಜಯಂತಿ ಶಹರಿ ರೋಜ್‌ಗಾರ್ ಕಚೇರಿಯಲ್ಲಿ ಅಂಗವಿಕಲರಿಗೆ ಸರ್ಕಾರಿ ಆಸ್ಪತ್ರೆಗಳು ಮತ್ತು ನೋಂದಾಯಿತ ಸ್ವಯಂ ಸೇವಾ ಸಂಸ್ಥೆಗಳ ಸಹಾಯದೊಂದಿಗೆ ಆರೋಗ್ಯ ತಪಾಸಣಾ ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಹಾಗೂ ಮೌಲ್ಯಮಾಪನ ಶಿಬಿರ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

‘ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕರು ಅಂಗವಿಕಲರನ್ನು ಗೌರವಿಸಲು ಮುಂದಾಗಬೇಕು. ಅವರನ್ನು ಹೀಯಾಳಿಸಬಾರದು. ಸಾಮಾನ್ಯರಂತೆ ಬಾಳಿ ಬದುಕಲು ಅಂಗವಿಲಕರ ಕಷ್ಟಗಳಿಗೆ ಪ್ರತಿಯೊಬ್ಬರೂ ನೆರವಾಗಬೇಕು’ ಎಂದು ಸಲಹೆ ನೀಡಿದರು.

‘ನಾವು ಯಾರಿಗೇನೂ ಕಮ್ಮಿ ಇಲ್ಲ. ಯಾರ ಹಂಗೂ ನಮಗಿಲ್ಲ. ನಮಗೂ ಒಂದು ಮನಸ್ಸಿದೆ, ಕನಸಿದೆ, ಬದುಕಿದೆ, ಅಸಹಾಯಕತೆಯ ಅನುಕಂಪದ ಅಲೆಯಲ್ಲಿ ಮುಳುಗಿಸಿ ಕರುಣೆಯಲ್ಲಿ ತೇಲಿಸುವ ಅಗತ್ಯವೂ ನಮಗಿಲ್ಲ. ನಮಗೆ ಅವಕಾಶ ಕೊಡಿ. ಆಗುವುದಿಲ್ಲ ಎಂಬುದನ್ನೆಲ್ಲಾ ಸಾಧ್ಯವಾಗಿಸುತ್ತೇವೆ ಎನ್ನುವ ಆತ್ಮವಿಶ್ವಾಸದ ನುಡಿಗಳನ್ನು ಮಾತನಾಡುವಂತಹ ಶಕ್ತಿಯನ್ನು ಅವರಲ್ಲಿ ನಾವೆಲ್ಲರೂ ತುಂಬಿಸಬೇಕಾಗಿದೆ’ ಎಂದು ಹೇಳಿದರು. 

ಅವರು ಎಲ್ಲರಂತೆ ಬದುಕಬೇಕು. ಅವರಿಗೆ ಅನುಕಂಪದ ಬದಲಿಗೆ ಅವಕಾಶದ ವೇದಿಕೆಯನ್ನು ನೀಡಿ ನೀವು ಸಮರ್ಥರು, ಅಸಾಧ್ಯವಾದದ್ದನ್ನು ಸಾಧಿಸುವ ಸಾಧಕರು ಎಂಬ ಆತ್ಮವಿಶ್ವಾಸದ ನುಡಿಗಳಿಂದ ಅವರನ್ನು ಪ್ರೇರಣೆಗೊಳಿಸಿದರೆ ಸಾಧನೆ ಮಾಡುವ ಸಾಧಕರಾಗುತ್ತಾರೆ. ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ಅವರಿಗೆ ತಲುಪಿಸುವಂತಹ ಕೆಲಸ ಮಾಡಲಾಗುತ್ತದೆ’ ಎಂದು ಹೇಳಿದರು.

ಜಿಲ್ಲಾ ವಿಕಲಚೇತನರ ಪುನರ್ ವಸತಿ ಕೇಂದ್ರದ ನೋಡಲ್ ಅಧಿಕಾರಿ ರವಿಕುಮಾರ್ ಮಾತನಾಡಿ, ಅಂಗವಿಕಲರ ವೈಯಕ್ತಿಕ ಮೌಲ್ಯಮಾಪನ ಮಾಡುವ ಮೂಲಕ ಅವರಿಗೆ ಅಗತ್ಯವಾಗಿ ಬೇಕಾಗಿರುವ ಸೌಲಭ್ಯಗಳ ಕುರಿತು ಅವರಿಂದ ಬೇಡಿಕೆಯನ್ನು ಪಡೆಯುವುದರ ಜೊತೆಗೆ, ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ನೇರವಾಗಿ ಅವರಿಗೆ ತಲುಪಿಸುವ ಉದ್ದೇಶದಿಂದ ಪುರಸಭೆಯಲ್ಲಿ ಶೇ 5 ರ ಅನುದಾನದಲ್ಲಿ ರೂಪಿಸಬೇಕಾಗಿರುವ ಕಾರ್ಯಕ್ರಮಗಳನ್ನು ಕುರಿತು ಕ್ರಿಯಾ ಯೋಜನೆ ತಯಾರಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಜಿಲ್ಲಾ ಅಂಕವಿಕಲರ ಪುನರ್ ವಸತಿ ಕೇಂದ್ರದಿಂದ ಕೃತಕ ಕೈ ಕಾಲುಗಳ ಜೋಡಣೆ ಮಾಡುವುದು, ತಜ್ಞರಿಂದ ಪರಿಶೀಲನೆ ನಡೆಸಿ, ಪುನರ್‌ವಸತಿ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

‘ಒಟ್ಟು 148 ಮಂದಿ ಫಲಾನುಭವಿಗಳಿದ್ದಾರೆ. ಅವರಿಗೆ ಬೇಕಾಗಿರುವ ಥೆರಪಿ ನೀಡಲು ಅನುಕೂಲ ಮಾಡಲಾಗುತ್ತದೆ. ನಗರದಲ್ಲಿ ಅಂಗವಿಕಲರಿಗೆ ಶೌಚಾಲಯಗಳ ಸಮಸ್ಯೆ ಜಾಸ್ತಿಯಾಗಿದೆ. ಅವರಿಗೆ ಪಾಶ್ಚಾತ್ಯ ಮಾದರಿಯ ಶೌಚಾಲಯಗಳ ವ್ಯವಸ್ಥೆಯಾಗಬೇಕು. ವೀಲ್ ಚೇರ್ ಒದಗಿಸುವುದು, ನಡಿಗೆ ಕೋಲು, ಬುದ್ದಿಮಾಂದ್ಯ ಮಕ್ಕಳಿಗೆ ವಿಶೇಷ ತರಬೇತಿ ನೀಡುವಂತಹ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ’ ಎಂದರು  

ಅಂಗವಿಕಲರಿಗೆ ವೀಲ್ ಚೇರ್‌ಗಳನ್ನು ವಿತರಿಸಲಾಯಿತು. ಪುರಸಭೆ ವ್ಯವಸ್ಥಾಪಕ ಆಂಜನೇಯಲು, ಗಜೇಂದ್ರ, ಮೂರ್ತಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.