ಶುಕ್ರವಾರ, ಆಗಸ್ಟ್ 6, 2021
22 °C
ವಿಜಯಪುರ: ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಜನ್ಮದಿನ, ಪ್ರಶಸ್ತಿ ಪ್ರದಾನ

‘ಸಾಹಿತ್ಯ ಹರಿಯುವ ನದಿಯಾಗಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಸಾಹಿತ್ಯ ಕ್ಷೇತ್ರ ನಿಂತ ನೀರಾಗಬಾರದು. ಅದಕ್ಕಿರುವ ಅಡ್ಡಿ ಆತಂಕ ನಿವಾರಿಸಲು ಕನ್ನಡಿಗರು ಶ್ರಮಿಸಬೇಕು’ ಎಂದು ಕೆಪಿಸಿಸಿ ಸದಸ್ಯ ಎ.ಸಿ.ಶ್ರೀನಿವಾಸ್ ತಿಳಿಸಿದರು.

ಇಲ್ಲಿನ ಗಾಂಧಿಚೌಕದಲ್ಲಿರುವ ಮಹಂತಿನಮಠದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಅವರ ಜನ್ಮದಿನದ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕ್ವಿಟ್ ಇಂಡಿಯಾ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದಾಗ ವಿದ್ಯಾಭ್ಯಾಸಕ್ಕೆ ಎರಡು ವರ್ಷ ವಿದಾಯ ಹೇಳಿದ್ದ ಎಚ್.ನರಸಿಂಹಯ್ಯ ಅವರು, 1947ರಲ್ಲಿ ಸ್ವಾತಂತ್ರ್ಯ ಬಂದ ನಂತರ ಮೈಸೂರಿನಲ್ಲಿ ನಡೆದ ಮೈಸೂರು ಚಲೋ ಚಳವಳಿಯಲ್ಲಿ ಭಾಗವಹಿಸಲು ತಮ್ಮ ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿದ್ದರು. ಸಾಹಿತ್ಯ ಕ್ಷೇತ್ರವು ಕೇವಲ ಸಾಹಿತ್ಯ ಉಳಿಸಲಿಕ್ಕಷ್ಟೇ ಸೀಮಿತವಾಗಬಾರದು. ಕಲಾವಿದರು, ಜಾನಪದ ಸಾಹಿತ್ಯ, ಬಂಡಾಯ ಸಾಹಿತ್ಯ, ಸೋಬಾನೆ, ಸೇರಿದಂತೆ ಎಲ್ಲಾ ಪ್ರಕಾರಗಳಲ್ಲಿ ಅಭಿರುಚಿಯನ್ನು ಹೊಂದಿರುವ ಕಲಾವಿದರನ್ನು ಮುನ್ನೆಲೆಗೆ ಬರುವಂತೆ ಮಾಡಬೇಕಾಗಿದೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಮಾತನಾಡಿ, ‘ಸಾಹಿತ್ಯ ಪರಿಷತ್ತು ನಾಡಿನ ಜ್ವಲಂತ ಸಮಸ್ಯೆಗಳ ನಿವಾರಣೆಗಾಗಿಯೂ ಶ್ರಮಿಸಲಾಗುತ್ತಿದೆ. ಈಗಾಗಲೇ ನಮ್ಮ ಭಾಗದಲ್ಲಿನ ಎಲ್ಲಾ ಸಾಹಿತಿಗಳು, ಕವಿಗಳು, ಯುವ ಕವಿಗಳು, ಸಾಹಿತ್ಯ ಪ್ರೇಮಿಗಳನ್ನು ಗುರುತಿಸಿ ಪ್ರೋತ್ಸಾಹ ಮಾಡುವ ಕೆಲಸ ಮಾಡಲಾಗುತ್ತಿದೆ. ಎಚ್.ನರಸಿಂಹಯ್ಯ ಅವರಿಗೆ ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅಚಲವಾದ ನಂಬಿಕೆ. ಮೂಢನಂಬಿಕೆ, ಮೌಢ್ಯದ ವಿರುದ್ಧ ಸತತ ಹೋರಾಟ ನಡೆಸಿದವರು. ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದರು. ಅಧ್ಯಾಪಕ, ಆಡಳಿತಗಾರ, ಸ್ನೇಹಮಯ ಮಾನವತಾವಾದಿ, ವಿಚಾರವಾದಿ, ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು ಇಂತಹ ಮಹನೀಯರನ್ನು ಆದರ್ಶವಾಗಿ ಪಡೆಯಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ’ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿದರು. ಮುಖಂಡ ಎ.ಸಿ.ಶ್ರೀನಿವಾಸ್ ಅವರಿಗೆ ಎಚ್.ನರಸಿಂಹಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಕಸಾಪ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ರಾಜಗೋಪಾಲ್, ಪದಾಧಿಕಾರಿಗಳಾದ ಕಾರ್ಯದರ್ಶಿ ಶಿವಕುಮಾರ್, ಪರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಹೆಗಡೆ, ಕಾರ್ಯಾಧ್ಯಕ್ಷ ರಾಮು ಭಗವಾನ್, ಮುಖಂಡ ಶೇಷಗಿರಿರಾವ್, ನಾರಾಯಣಸ್ವಾಮಿ, ಕಸಾಪ ನಗರ ಘಟಕದ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ಪ್ರಧಾನ ಕಾರ್ಯದರ್ಶಿ ಮುನಿವೆಂಕಟರಮಣಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು