ಸೋಮವಾರ, ಅಕ್ಟೋಬರ್ 14, 2019
28 °C

ಅಕ್ರಮ ಮದ್ಯ ಮಾರಾಟ: ಪೊಲೀಸ್‌ ದಾಳಿ

Published:
Updated:
Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನ ಕೊಡಿಗೇಹಳ್ಳಿ ಗ್ರಾಮದ ಸುರೇಶ್‌ ಎಂಬುವವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗ್ರಾಮಾಂತರ ಪೊಲೀಸರು ಬುಧವಾರ ದಾಳಿ ನಡೆಸಿ ಸುಮಾರು ₹70 ಸಾವಿರ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

‘ದಾಳಿ ನಡೆಸಲು ಪೊಲೀಸರು ಮನೆಯ ಬಳಿ ಬರುತ್ತಿದ್ದಂತೆ ಸುರೇಶ್‌ ತಪ್ಪಿಸಿಕೊಂಡಿದ್ದಾನೆ. ಮನೆಯಲ್ಲಿನ ಶೌಚಾಲಯ, ಚರಂಡಿ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಮದ್ಯದ ಬಾಟಲಿಗಳನ್ನು ದಾಸ್ತಾನು ಮಾಡಿದ್ದ. ಈ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಪೊಲೀಸರು ದಾಳಿ ಮಾಡಿ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಗಾಂಧಿ ಜಯಂತಿ ದಿನವಾದ ಬುಧವಾರ ಬಾರ್‌ಗಳು ಬಂದ್‌ ಆಗಿದ್ದವು. ಇದರಿಂದಾಗಿ ಸುರೇಶ್‌ ಮನೆಯಲ್ಲಿ ವ್ಯಾಪಾರ ಭರದಿಂದ ನಡೆಯುತ್ತಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಕ್ರಮವಾಗಿ ಗ್ರಾಮಗಳಲ್ಲಿನ ಹಲವಾರು ಮನೆಗಳಲ್ಲಿ ಮದ್ಯಮಾರಾಟ ಮಾಡುವ ದಂಧೆ ಮಿತಿ ಮೀರಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

Post Comments (+)