ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಸಂಸ್ಕರಿಸಿ ಮರುಬಳಕೆಗೆ ‘ಶುದ್ಧೀಕರಣ ಘಟಕ’

ಇಂಡಿಗೋ ಬ್ಲೂ ಕೈಗಾರಿಕೆಯಲ್ಲಿ ₹10 ಕೋಟಿ ವೆಚ್ಚದಲ್ಲಿ ನಿರ್ಮಾಣ
Last Updated 11 ಡಿಸೆಂಬರ್ 2018, 12:38 IST
ಅಕ್ಷರ ಗಾತ್ರ

ಬಾಶೆಟ್ಟಿಹಳ್ಳಿ (ದೊಡ್ಡಬಳ್ಳಾಪುರ): ‘ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡುವ ವಿಧಾನವನ್ನು ಸರಳೀಕರಣ ಮಾಡಲಾಗಿದೆ. ಇದರಿಂದ ನಿರುದ್ಯೋಗಿ ಯುವಕರಿಗೆ ಉದ್ಯೋಗಗಳು ದೊರೆಯಲಿವೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಹೇಳಿದರು.

ಬಾಶೆಟ್ಟಹಳ್ಳಿಯಲ್ಲಿನ ಗೋಕುಲದಾಸ್ ಎಕ್ಸ್ ಪೋರ್ಟ್ ಗ್ರೂಪ್‌ನ ಇಂಡಿಗೋ ಬ್ಲೂ ಸಂಸ್ಥೆಯಲ್ಲಿ ಸೋಮವಾರ ಜೆಡ್‍ಎಲ್‍ಡಿ ನೀರು ಶುದ್ಧೀಕರಣ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

’ಕೈಗಾರಿಕಾ ಪ್ರದೇಶಗಳಿಂದ ಬರುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಅನಿವಾರ್ಯ. ತ್ಯಾಜ್ಯ ನಿರ್ವಹಣೆ ಮಾಡದೆ ನೀರನ್ನು ಎಲ್ಲೆಂದರಲ್ಲಿ ಹರಿಯಲು ಬಿಡುತ್ತಿರುವುದರಿಂದ ಈ ವ್ಯಾಪ್ತಿಯ ಗ್ರಾಮಗಳ ಜನತೆಗೆ ತೀವ್ರ ತೊಂದರೆ ಉಂಟಾಗುತ್ತಿದೆ’ ಎಂದು ಹೇಳಿದರು.

‘ಈ ಕುರಿತಂತೆ ಶಾಸಕ ಟಿ.ವೆಂಕಟರಮಣಯ್ಯ ದೂರು ನೀಡಿದ್ದರು. ಈ ಕುರಿತು ಕಾರ್ಖಾನೆ ಮಾಲೀಕರಿಗೂ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ಕಾರ್ಖಾನೆಗಳಲ್ಲಿ ಬಳಸುವ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವಂತಹ ಜೆಡ್‍ಎಲ್‍ಡಿನೀರು ಶುದ್ಧೀಕರಣ ಘಟಕವನ್ನು ಕಡ್ಡಾಯವಾಗಿ ಸ್ಥಾಪಿಸಲು ಸೂಚನೆ ನೀಡಲಾಗಿದೆ’ ಎಂದರು.

’ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪ್ರಥಮ ಬಾರಿಗೆ ಗೋಕುಲ್ ದಾಸ್ ಎಕ್ಸ್ ಪೋರ್ಟ್ ಗ್ರೂಪ್‍ನ ಇಂಡಿಗೋ ಬ್ಲೂ ಸಂಸ್ಥೆ ಈ ಘಟಕವನ್ನು ಅಳವಡಿಸಿಕೊಳ್ಳುವ ಮೂಲಕ ಇತರ ಕಾರ್ಖಾನೆಗಳಿಗೆ ಮಾದರಿಯಾಗಿದೆ’ ಎಂದು ಪ್ರಶಂಶಿಸಿದರು.

ಗೋಕುಲ್ ದಾಸ್ ಎಕ್ಸ್ ಪೋರ್ಟ್ ಗ್ರೂಪ್‍ನ ಇಂಡಿಗೋ ಬ್ಲೂ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಗಣಪತಿ ಮಾತನಾಡಿ, ’ಪರಿಸರ ರಕ್ಷಣೆ ಹಾಗೂ ಕುಸಿಯುತ್ತಿರುವ ಅಂತರ್ಜಲದ ಕಾಳಜಿಯಿಂದಾಗಿ ನೀರಿನ ಮರು ಬಳಕೆ ಮಾಡಲು ಸಂಸ್ಥೆಯು10 ಕೋಟಿ ವೆಚ್ಚದಲ್ಲಿ 700 ಲೀಟರ್ ನೀರನ್ನು ಸಂಸ್ಕರಿಸುವ ಜೆಡ್‍ಎಲ್‍ಡಿ ಘಟಕವನ್ನು ಸ್ಥಾಪಿಸಿದೆ. ಶೇ 92ರಷ್ಟು ನೀರನ್ನು ಸಂಸ್ಕರಿಸಿ ಮರುಬಳಕೆಗೆ ನೀಡಲಿದೆ. ಅಲ್ಲದೆ ಉಳಿದ ಶೇ 8ರಷ್ಟು ಉಪ್ಪನ್ನು ತಯಾರಿಸಲಿದ್ದು ಅದನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಿದ್ದೇವೆ’ ಎಂದರು.

ಸಹಕಾರಿ ಯೂನಿಯನ್ ಜಿಲ್ಲಾ ನಿರ್ದೇಶಕ ಬಿ.ಸಿ.ಆನಂದ್ ಮಾತನಾಡಿ, ‘ನೀರು ಸಂಸ್ಕರಣಾ ಘಟಕ ಸ್ಥಾಪಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮಕೈಗೊಳ್ಳಲು ಮೂಲ ಕಾರಣ ವೀರಪುರದ ಗ್ರಾಮದ ಯುವಕರ ಪರಿಸರ ಕಾಳಜಿ. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳು ಕಡ್ಡಾಯವಾಗಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗ ನೀಡಿದರೆ ಸಂಘಟಿತರಾಗಿ ಪ್ರತಿಭಟನೆ ನಡೆಸುತ್ತಾರೆ ಎನ್ನುವ ತಪ್ಪು ಕಲ್ಪನೆಯನ್ನು ಬಿಡಬೇಕಿದೆ’ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಇಒ ಬಿ.ಎನ್.ರಮೇಶ್, ಕಾರ್ಯನಿರ್ವಹಣಾಧಿಕಾರಿ ಆಸಿಫ್‍ಖಾನ್, ತ್ಯಾಜ್ಯ ನಿರ್ವಹಣೆ ಹಿರಿಯ ಪರಿಸರ ಅಧಿಕಾರಿ ಡಾ.ಎ.ರಮೇಶ್, ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾರಾಯಣಮ್ಮ, ಉಪಾಧ್ಯಕ್ಷೆ ಶಿಲ್ಪ, ಡಿವೈಎಸ್‌ಪಿ ಆರ್.ಮೋಹನ್ ಕುಮಾರ್, ಗೋಕುಲ್ ದಾಸ್ ಎಕ್ಸ್ ಪೋರ್ಟ್ ಗ್ರೂಪ್‍ನ ಇಂಡಿಗೋ ಬ್ಲೂ ಸಂಸ್ಥೆ ದೊಡ್ಡಬಳ್ಳಾಪುರ ಘಟಕದ ಮುಖ್ಯವ್ಯವಸ್ಥಾಪಕ ಶ್ರೀನಿವಾಸ್, ಪಿಡಿಒ ಕುಮಾರ್, ಮುಖಂಡರಾದ ತಿ. ರಂಗರಾಜು, ಬಿ. ಕೃಷ್ಣಪ್ಪ, ಮುನಿರಾಜ್, ಪ್ರೇಮ್‍ಕುಮಾರ್, ಎಳ್ಳುಪುರ ರಾಮಾಂಜಿನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT