ಲೋಕಕಲ್ಯಾಣ ಮನೋಭಾವನೆ ಮೈಗೂಡಿಸಿಕೊಳ್ಳಿ

ಶುಕ್ರವಾರ, ಮೇ 24, 2019
29 °C
ವಿಜಯಪುರದಲ್ಲಿ ಶಿವಕುಮಾರಸ್ವಾಮಿ ನಗರದ ಲೋಕಾರ್ಪಣೆ ಕಾರ್ಯಕ್ರಮ

ಲೋಕಕಲ್ಯಾಣ ಮನೋಭಾವನೆ ಮೈಗೂಡಿಸಿಕೊಳ್ಳಿ

Published:
Updated:
Prajavani

ವಿಜಯಪುರ: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಲ್ಲಿದ್ದ ಲೋಕಕಲ್ಯಾಣ ಮನೋಭಾವನೆಯನ್ನು ವೀರಶೈವ ಸಮುದಾಯದ ಪ್ರತಿಯೊಬ್ಬರೂ ಮೈಗೂಡಿಸಿಕೊಂಡಾಗ ಸಮಾಜವು ಉದ್ಧಾರವಾಗುವುದರಲ್ಲಿ ಸಂಶಯವಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಎಸ್. ತಿಪ್ಪಣ್ಣ ಹೇಳಿದರು.

ಇಲ್ಲಿನ ಶಾಂತವೀರಯ್ಯ, ಚನ್ನವೀರಯ್ಯ, ಶಿವರುದ್ರಯ್ಯ, ಬಸವರಾಜಪ್ಪ, ಗಿರಿಜಾಶಂಕರ ಕಲ್ಯಾಣ ಮಂಟಪ, ಪ್ರಗತಿ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಜುನಾಥ ಬಡಾವಣೆ, ವಿ.ಎಂ.ರುದ್ರಪ್ಪನವರ ಬಡಾವಣೆ ನಿವಾಸಿಗಳಿಂದ ಶಿವಕುಮಾರಸ್ವಾಮಿ ನಗರದ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ವೀರಶೈವ ಲಿಂಗಾಯಿತ ಸಮಾಜದ ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ನಡೆಯಬೇಕು. ಎಲ್ಲ ಜಾತಿ ವರ್ಗದವರನ್ನು ಒಂದೇ ರೀತಿಯಲ್ಲಿ ಕಂಡಿದ್ದ ಶಿವಕುಮಾರ ಸ್ವಾಮೀಜಿ ಅವರು ಸಮಾಜಕ್ಕೆ ದಾರಿದೀಪವಾಗಿದ್ದಾರೆ ಎಂದರು.

 ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ವೀರಶೈವ ಲಿಂಗಾಯಿತ ಧರ್ಮ ಶ್ರೇಷ್ಠವಾಗಿದೆ. ಈ ಧರ್ಮದಲ್ಲಿ ಹುಟ್ಟಿರುವುದಕ್ಕೆ ನಾವು ಹೆಮ್ಮೆ ಪಡಬೇಕು. ನಾವೆಲ್ಲರೂ ಶಿವಕುಮಾರ ಸ್ವಾಮೀಜಿ ಅವರ ಹಾದಿಯಲ್ಲಿ ನಡೆಯಬೇಕು ಎಂದರು.

ಎಚ್.ಡಿ. ದೇವೇಗೌಡರು ದೇಶದ ಪ್ರಧಾನಿಯಾಗಿದ್ದಾಗ, ‘ಹಿಂದುಳಿದ ವರ್ಗಗಳ ಇಲಾಖೆಯ ಸಮೀಕ್ಷೆ ಪ್ರಕಾರ, ಒಕ್ಕಲಿಗರು, ವೀರಶೈವ ಲಿಂಗಾಯಿತರು ಹಿಂದುಳಿದಿದ್ದಾರೆ ಎಂದು ಗುರುತಿಸಿದೆಯಾದರೂ ಕೇವಲ ಒಕ್ಕಲಿಗರು ಮಾತ್ರ ಹಿಂದುಳಿದಿದ್ದಾರೆ ಎಂದು ತಿದ್ದುಪಡಿ ಮಾಡಿಸಿದರು. ಇದರಿಂದ ಸಮುದಾಯದ ಬೆಳವಣಿಗೆಗೆ ತೊಡಕಾಯಿತು. ನಾವ್ಯಾರೂ ಇದರ ವಿರುದ್ಧ ದ್ವನಿಯೆತ್ತಲಿಲ್ಲ. ಸ್ವತಃ ನನ್ನನ್ನೂ ಸೋಲಿಸಲಿಕ್ಕೂ ಪ್ರಯತ್ನ ಮಾಡಿದ್ದರು’ ಎಂದರು.

ಬಸವಣ್ಣನವರ ಉದ್ದೇಶ ಈಡೇರಬೇಕಾಗಿದೆ. ನಾವು ಎಲ್ಲ ಸಮಾಜದೊಟ್ಟಿಗೆ ಬದುಕಬೇಕು. ಲಿಂಗಾಯಿತ ಧರ್ಮದ ಮೂಲ ಉದ್ದೇಶವನ್ನು ತಿಳಿಸಬೇಕು ಎಂದರು.

ಪುರಸಭಾ ಸದಸ್ಯ ಎಂ. ಸತೀಶ್ ಕುಮಾರ್ ಮಾತನಾಡಿ, ನಾವೆಲ್ಲರೂ ಮಾನವ ಧರ್ಮವನ್ನು ಸಂರಕ್ಷಣೆ ಮಾಡಬೇಕಾಗಿದೆ. ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರವೇ ಅಭಿವೃದ್ಧಿಯತ್ತ ಸಾಗಲು ಸಾಧ್ಯವಿದೆ. ನಾವೆಲ್ಲರೂ ಸಮಾಜದ ಏಳಿಗೆಗಾಗಿ ಶ್ರಮಿಸೊಣ ಎಂದರು.

ಶಿವಕುಮಾರಸ್ವಾಮೀಜಿ ಅವರ ಅಷ್ಟೋತ್ತರ ಬಿಡುಗಡೆ ಮಾಡಲಾಯಿತು. ವೀರಶೈವ ಲಿಂಗಾಯಿತ ಸದಸ್ಯರ ಗುರುತಿನ ಚೀಟಿಗಳನ್ನು ಬಿಡುಗಡೆ ಮಾಡಿದರು. ವಿ.ಎಸ್.ರಮೇಶ್ ಅವರನ್ನು ಸನ್ಮಾನಿಸಿದರು.

ದೇವನಹಳ್ಳಿ ತಾಲ್ಲೂಕು ಘಟಕದ ಅದ್ಯಕ್ಷ ಎಂ.ಎಸ್. ರಮೇಶ್, ಬಿ.ಎನ್. ಶಿವಶಂಕರ್, ವೀರಭದ್ರಪ್ಪ, ಹರಳೂರು ಶಿವಶಂಕರ್, ರೇಣುಕಾ ಪ್ರಸನ್ನ, ತಿಂಡ್ಲು ಬಸವರಾಜ್, ಶಾಂತ ವೀರಯ್ಯ, ವಿ.ಎಸ್. ರಮೇಶ್, ಎಸ್. ವಿಜಯಕುಮಾರ್, ನಾಗಭೂಷಣ್, ವಿರೂಪಾಕ್ಷ ಶಾಸ್ತ್ರಿ, ಭಾರತಿ ಪ್ರಭುದೇವ್ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !