ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ ಕೋರ್ಟ್‌ಗೆ ಹಾಜರಾಗಿದ್ದ ಇಂದಿರಾ

ದೇಶದ ಗಮನ ಸೆಳೆದಿದ್ದ ಮತದಾರರ ಪಟ್ಟಿ ವಿವಾದ
Last Updated 6 ಫೆಬ್ರುವರಿ 2023, 5:35 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1977ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ರಾಜ್ಯಸಭೆಗೆ ಆಯ್ಕೆಯಾಗಲು ದೊಡ್ಡಬಳ್ಳಾಪುರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಪ್ರಯತ್ನಿಸಿದ್ದನ್ನು ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಇಂದಿರಾ ಗಾಂಧಿ ಅವರು ದೊಡ್ಡಬಳ್ಳಾಪುರದ ನ್ಯಾಯಾಲಯಕ್ಕೆ 1979ರ ಫೆ.16 ರಂದು ಬಂದಿದ್ದರು. ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ 1977ರಲ್ಲಿ ಸೋಲು ಅನುಭವಿಸಿದ್ದರು. ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರು ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸುವ ಚಿಂತನೆ ನಡೆಸಿದ್ದರು. ಆಗ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ರಾಜ್ಯದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡಲು ಕಾಂಗ್ರೆಸ್‌ ಮುಖಂಡರು ಮತ್ತು ಅಂದಿನ ಮುಖ್ಯಮಂತ್ರಿ ದೇವರಾಜು ಅರಸು ನಿರ್ಧರಿಸಿದರು.

ಆ ಸಂದರ್ಭದಲ್ಲಿ ರಾಜ್ಯಸಭೆಗೆ ಆಯಾ ರಾಜ್ಯದಲ್ಲಿ ಮತದಾರರಾದವರು ಮಾತ್ರ ಆಯ್ಕೆಯಾಗಬೇಕು ಎನ್ನುವ ನಿಯಮ ಇತ್ತು. ಇದರಿಂದಾಗಿ ಅವರು ನಂದಿಬೆಟ್ಟದ ತಪ್ಪಲಿನಲ್ಲಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ವಿಷ್ಣು ಆಶ್ರಮದ ವಿಳಾಸದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಗಮನಿಸಿದ ದೊಡ್ಡಬಳ್ಳಾಪುರದ ಅಮಾವಾಸ್ಯೆ ನೀಲಕಂಠಯ್ಯ ಎಂಬುವರು ಮತದಾರರ ಪಟ್ಟಿಗೆ ಇಂದಿರಾ ಹೆಸರು ನೋಂದಣಿ ಮಾಡದಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.

ವಿಷ್ಣು ಆಶ್ರಮದ ವಿಳಾಸದಲ್ಲಿ ಅವರು ಕಾಯಂ ವಾಸಿಯಲ್ಲ. ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿಗೆ ಮತದಾರರ ಪಟ್ಟಿ ಸೇರ್ಪಡೆಗೆ ಸಲ್ಲಿಸಿರುವ ಪ್ರಮಾಣ ಪತ್ರ ಸುಳ್ಳಾಗಿದೆ. ನ್ಯಾಯಾಲಯಕ್ಕೆ ಸಲ್ಲಿರುವ ದೂರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅಮಾವಾಸ್ಯೆ ನೀಲಕಂಠಯ್ಯ ಪರ ವಕೀಲ ರಾಮ್ ಜೇಠ್ಮಲಾನಿ,
ಎ.ಲಕ್ಷ್ಮೀಸಾಗರ್ ಮತ್ತು ಎಸ್.ವಿ.ಜಗನ್ನಾಥ್‌ ಅರ್ಜಿ ಸಲ್ಲಿಸಿದರು. ಅರ್ಜಿಯಲ್ಲಿ ಇಂದಿರಾ ಗಾಂಧಿ ಅವರು ಮೊದಲ ಆರೋಪಿಯಾಗಿ ಮತ್ತು ಆರ್.ಎಲ್.ಜಾಲಪ್ಪ ಎರಡನೇ ಆರೋಪಿ ಆಗಿದ್ದರು.

ಇಂದಿರಾ ಗಾಂಧಿ ಅವರನ್ನು ಕರ್ನಾಟಕದಿಂದ ಲೋಕಸಭೆಗೆ ಆಯ್ಕೆ ಮಾಡುವ ಪ್ರಯತ್ನ ಪ್ರಾರಂಭಗೊಂಡಿತು. ಆಗ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಡಿ.ಬಿ.ಚಂದ್ರೇಗೌಡ ರಾಜೀನಾಮೆ ಸಲ್ಲಿಸಿದರು. ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮರು ಚುನಾವಣೆಯಲ್ಲಿ ಇಂದಿರಾಗಾಂಧಿ ಸಂಸದರಾಗಿ ಅಯ್ಕೆಯಾಗಿ 1978ರಲ್ಲಿ ಲೋಕಸಭೆ ಪ್ರವೇಶ ಮಾಡಿದರು.

ದೊಡ್ಡಬಳ್ಳಾಪುರ ನ್ಯಾಯಾಲಯದಲ್ಲಿ ಅಮಾವಾಸ್ಯೆ ನೀಲಕಂಠಯ್ಯ ಅವರ ದೂರಿನ ವಿಚಾರಣೆಯನ್ನು ನ್ಯಾಯಾಧೀಶ ಎ.ಮೋಹನ್‌ರಾವ್‌ ನಡೆಸಿದರು. ಇಂದಿರಾ ಮತ್ತು ಜಾಲಪ್ಪ ಪರವಾಗಿ ವಕೀಲರಾದ ಜಿ.ರಾಮಸ್ವಾಮಿ, ರಾಜೇಂದ್ರಬಾಬು ಮತ್ತು ದೊಡ್ಡಬಳ್ಳಾಪುರ ಎ.ಆರ್.ನಾಗರಾಜನ್‌ ವಾದಿಸಿದ್ದರು.

ನ್ಯಾಯಾಲಯದ ವಿಚಾರಣೆಗೆ ಇಂದಿರಾ ಗಾಂಧಿ ಅವರು ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕಾಯಿತು. ಇದರಿಂದಾಗಿ 1979ರಲ್ಲಿ ಅವರು ದೊಡ್ಡಬಳ್ಳಾಪುರ ನ್ಯಾಯಾಲಯಕ್ಕೆ ಹಾಜರಾದರು. ಅಂದು ಬೆಳಿಗ್ಗೆ 10 ಗಂಟೆಗೆ ಅವರು ದೊಡ್ಡಬಳ್ಳಾಪುರಕ್ಕೆ ಬಂದಿದ್ದರು. ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ನ್ಯಾಯಾಧೀಶರ ಮುಂದೆ ಹಾಜರಾದರು. ತಾವು ಸಲ್ಲಿಸಿದ ಪ್ರಮಾಣಪತ್ರ ಸರಿಯಾಗಿದೆ ಎಂದು ನ್ಯಾಯಾಧೀಶರ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದರು ಎನ್ನುತ್ತಾರೆ ಅಂದು ನ್ಯಾಯಾಲಯದಲ್ಲಿದ್ದ
ವಕೀಲರು.

ದೊಡ್ಡಬಳ್ಳಾಪುರದ ನ್ಯಾಯಾಲಯದಿಂದ ಇಂದಿರಾ ಗಾಂಧಿ ಅವರು ನೇರವಾಗಿ ನಂದಿಬೆಟ್ಟದ ತಪ್ಪಲಿನ ವಿಷ್ಣು ಆಶ್ರಮಕ್ಕೆ ತೆರಳಿ ಕೆಲ ಸಮಯ ಇದ್ದು ಬೆಂಗಳೂರಿಗೆ ತೆರಳಿದ್ದರು.

ಇಡೀ ದೇಶವೇ ದೊಡ್ಡಬಳ್ಳಾಪುರದ ಮತದಾರರ ಪಟ್ಟಿ ವಿವಾದವನ್ನು ಕುತೂಹಲದಿಂದ ನೋಡುವಂತಹ ಸ್ಥಿತಿ ಅಂದಿನ ಕಾಲಕ್ಕೆ ನಿರ್ಮಾಣವಾಗಿತ್ತು.

ಹೈಕೋರ್ಟ್‌ಗೆ ವರ್ಗಾವಣೆ

ದೊಡ್ಡಬಳ್ಳಾಪುರ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಮುಂದುವರೆದಾಗ ಇಂದಿರಾ ಪರ ವಕೀಲರು ಈ ಪ್ರಕರಣ ಜನಪ್ರತಿಧಿಗಳ ಕಾಯ್ದೆಯಡಿ ಹೈಕೋಟ್‌ರ್ನಲ್ಲಿ ವಿಚಾರಣೆ ಆಗಬೇಕಾಗಿದೆ. ಇದು ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡುವಂತಿಲ್ಲ ಎಂದು ವಾದಿಸಿದರು.

ಇದರಿಂದಾಗಿ ಇಂದಿರಾ ಗಾಂಧಿ ಅವರ ವಿರುದ್ಧ ದಾಖಲಾಗಿದ್ದ ಮೊಕದ್ದಮೆ ಬೆಂಗಳೂರಿನ ಹೈಕೋರ್ಟ್‌ಗೆ ವರ್ಗಾವಣೆಗೊಂಡಿತು. ಕೆಲವು ವರ್ಷಗಳ ನಂತರ ದೂರುದಾರ ಅಮಾವಾಸ್ಯೆ ನೀಲಕಂಠಯ್ಯ ಅವರು ನಿಧನ ನಂತರ ಈ ಮೊಕದ್ದಮೆಗೆ ತೆರೆ ಬಿದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT