ಬುಧವಾರ, ಆಗಸ್ಟ್ 21, 2019
22 °C

ಪಾಳು ಬಿದ್ದ ಉದ್ಯಾನ ಅಭಿವೃದ್ಧಿಗೆ ಒತ್ತಾಯ

Published:
Updated:
Prajavani

ವಿಜಯಪುರ: ‘ಜನರ ಲಕ್ಷಾಂತರ ರೂಪಾಯಿ ತೆರಿಗೆ ಹಣವನ್ನು ಖರ್ಚು ಮಾಡಿ ನಿರ್ಮಾಣ ಮಾಡಿರುವ ಪಾರ್ಕ್, ಈಗ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಇದನ್ನು ಸಂರಕ್ಷಣೆ ಮಾಡಬೇಕು' ಎಂದು ಸ್ಥಳೀಯ ನಿವಾಸಿಗಳಾದ ರಮೇಶ್, ಮೋಹನ್, ಒತ್ತಾಯಿಸಿದ್ದಾರೆ.

‘ಇಲ್ಲಿನ 6 ನೇ ವಾರ್ಡ್‌ನಲ್ಲಿ ಪುರಸಭೆಯಿಂದ ಉದ್ಯಾನ ನಿರ್ಮಾಣ ಮಾಡಿದ್ದಾರೆ. ಇದರ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಸಂಜೆಯಾದರೆ ಕುಡುಕರಿಗೆ ಸ್ವರ್ಗ ತಾಣವಾಗಿ  ಪರಿಣಮಿಸುತ್ತಿದ್ದು, ಇಲ್ಲಿನ ನಿವಾಸಿಗಳ ನೆಮ್ಮದಿಗೆ ಭಂಗವುಂಟಾಗುತ್ತಿದೆ’ ಎಂದು ದೂರಿದ್ದಾರೆ.

‘ಪುರಸಭೆಯವರು ತೂಗುಯ್ಯಾಲೆ, ಜಾರುವ ಬಂಡಿ, ಮಕ್ಕಳ ಆಟದ ಸಲಕರಣೆ ಸೇರಿದಂತೆ ಜನರು ವಾಯುವಿಹಾರಕ್ಕೆ ಪಾದಚಾರಿಗಳ ಮಾರ್ಗವನ್ನು ನಿರ್ಮಾಣ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

ಕುಳಿತುಕೊಂಡು ವಿಶ್ರಾಂತಿ ಪಡೆದುಕೊಳ್ಳಲು ಆಸನಗಳನ್ನೂ ನಿರ್ಮಾಣ ಮಾಡಿದ್ದಾರೆ. ವಾರ್ಡಿನ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಿಕ್ಕೆ ನೀರಿನ ಶೇಖರಣಾ ಸಂಪನ್ನು ನಿರ್ಮಾಣ ಮಾಡಿದ್ದಾರೆ. ಸಂಪು ನಿರ್ಮಾಣ ಮಾಡಿರುವ ಜಾಗವನ್ನು ಹೊರತುಪಡಿಸಿ ಉಳಿದ ಎಲ್ಲ ಕಡೆ ದಟ್ಟವಾಗಿ ಬೆಳೆದು ನಿಂತಿರುವ ಕಳೆ ಗಿಡಗಳ ಮರೆಯಲ್ಲಿ, ಪರಿಕರಗಳು ಹುದುಗಿಹೋಗಿವೆ ಎಂದಿದ್ದಾರೆ.

ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಮಾತನಾಡಿ, ‘ಆರನೇ ವಾರ್ಡಿನಲ್ಲಿರುವ ಪಾರ್ಕ್ ಹಾಗೂ ಬಸವನಕುಂಟೆ ಬಳಿಯರುವ ಪಾರ್ಕ್‌ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ. ಆರನೇ ವಾರ್ಡ್‌ನ ಉದ್ಯಾನದಲ್ಲಿ ಕಿತ್ತುಹೋಗಿರುವ ಕಾಂಪೌಂಡ್ ಬೇಲಿಯನ್ನು ಸರಿಪಡಿಸಿದ ನಂತರ ಕಳೆಗಿಡಗಳನ್ನು ತೆರವು ಮಾಡಲಾಗುವುದು. ಇದರ ನಿರ್ವಹಣೆಗಾಗಿ ಸ್ಥಳೀಯರಿಗೆ ಗುತ್ತಿಗೆ ನೀಡಲು ತೀರ್ಮಾನ ಕೈಗೊಳ್ಳುತ್ತೇವೆ. ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಜನರು ಪುರಸಭೆಗೆ ದೂರು ಕೊಟ್ಟರೆ, ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

Post Comments (+)