ಶನಿವಾರ, ನವೆಂಬರ್ 28, 2020
18 °C

ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಅಧಿಕಾರಿಗಳ ಗೈರು: ಶಾಸಕ ಶರತ್ ಬಚ್ಚೇಗೌಡ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಬಾರದ ಸರ್ಕಾರಿ ಅಧಿಕಾರಿಗಳ ವಿರುದ್ಧ ಶಾಸಕ ಶರತ್ ಬಚ್ಚೇಗೌಡ ಗರಂ ಆದ ಘಟನೆ ನಡೆಯಿತು.

ತಾಲ್ಲೂಕು ಆಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಬಹುತೇಕ ಇಲಾಖೆಯ ಅಧಿಕಾರಿಗಳು ಗೈರುಹಾಜರಾಗಿದ್ದರು. ಇದರಿಂದ ಶಾಸಕರು ಕಾರ್ಯಕ್ರಮದ ನಂತರ ವಿಷಯ ಪ್ರಸ್ತಾಪಿಸಿ, ಕಾರ್ಯಕ್ರಮಕ್ಕೆ ಹಾಜರಾಗದ ಎಲ್ಲಾ ಅಧಿಕಾರಿಗಳಿಗೂ ಕೂಡಲೇ ನೋಟಿಸ್ ಜಾರಿ ಮಾಡುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.

‘ಕನ್ನಡ ರಾಜ್ಯೋತ್ಸವ ಯಾರದೋ ಮನೆಯ ಕಾರ್ಯಕ್ರಮವಲ್ಲ. ಖಾಸಗಿ ವ್ಯಕ್ತಿಯ ಹುಟ್ಟುಹಬ್ಬವಲ್ಲ. ನಮಗೆ ಅನ್ನ ಕೊಡುತ್ತಿರುವ, ಕೆಲಸ ಕೊಟ್ಟಿರುವ ನಮ್ಮ ರಾಜ್ಯಕ್ಕೆ ಗೌರವ ನೀಡದಿದ್ದರೆ ಹೇಗೆ, ಸರ್ಕಾರಿ ಸಂಬಳ ಪಡೆಯುವವರು ಕಾರ್ಯಕ್ರಮಕ್ಕೆ ಬಾರದಿರುವುದು ಸರಿಯಲ್ಲ’ ಎಂದು ಹೇಳಿದರು.

ಇಷ್ಟಕ್ಕೇ ಸಮಾಧಾನವಾಗದ ಶಾಸಕರು, ಜಿಲ್ಲಾಧಿಕಾರಿ ಜೊತೆಗೆ ಮಾತನಾಡಿ ತಮ್ಮ ಕಚೇರಿಯಲ್ಲಿಯೇ ಗೈರುಹಾಜರಾಗಿರುವ ಅಧಿಕಾರಿಗಳ ಸಭೆ ಕರೆದು ಲಿಖಿತವಾಗಿ ಅವರಿಂದ ಕಾರಣ ಕೇಳಿವಂತೆ ಸೂಚಿಸಿದರು.

ಕರ್ನಾಟಕ ಮುಂಚೂಣಿಯಲ್ಲಿದೆ: ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಶರತ್‌ ಬಚ್ಚೇಗೌಡ, ‘ರಾಜ್ಯವು ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿದಿದ್ದು ದೇಶದಲ್ಲಿ ಅಗ್ರಸ್ಥಾನದಲ್ಲಿದೆ’ ಎಂದರು.

ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಎಲ್ಲವನ್ನೂ ಕೇಂದ್ರಿಕೃತ ವ್ಯವಸ್ಥೆಗೆ ತರುತ್ತಿದೆ. ಇದರಿಂದ ರಾಜ್ಯಗಳ ಅಸ್ತಿತ್ವಕ್ಕೆ ಧಕ್ಕೆ ಎದುರಾಗಿದೆ. ರಾಜ್ಯಕ್ಕೆ ಬರಬೇಕಾದ ಕೇಂದ್ರದ ಪಾಲು ಸರಿಯಾಗಿ ಬರುತ್ತಿಲ್ಲ. ಇದರ ವಿರುದ್ಧ ಪ್ರಜೆಗಳು ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಂಡಿಸಿದ ಮುಂಗಡ ಪತ್ರದಲ್ಲಿ ಕೇಂದ್ರದಿಂದ ₹ 33 ಸಾವಿರ ಕೋಟಿ ಸಾಲ ಪಡೆದಿದೆ. ಆದರೆ, ಕೇಂದ್ರದಿಂದ ಬರಬೇಕಾದ ತೆರಿಗೆ ಹಣ ಬಾಕಿ ಉಳಿದಿದೆ. ಅದನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದರು.

ಕರ್ನಾಟಕವು ವಿವಿಧತೆಯಲ್ಲಿ ಏಕತೆ ಸಾಧಿಸುತ್ತಾ ಬಂದಿದೆ. ಈಗ ಚುನಾವಣಾ ನೀತಿಸಂಹಿತೆ ಹಾಗೂ ಕೊರೊನಾ ಕಾರಣದಿಂದ ಸರಳವಾಗಿ ರಾಜ್ಯೋತ್ಸವ ಅಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಗೀತಾ, ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ, ನಗರಸಭಾ ಸದಸ್ಯರಾದ ಕೇಶವಮೂರ್ತಿ, ಗೌತಮ್, ರಾಕೇಶ್, ಕನ್ನಡ ಸಂಘದ ಹೋ.ರಾ. ವೆಂಕಟೇಶ್, ರಾಜಣ್ಣ, ಮುಖಂಡರಾದ ಉದಯ್ ಕುಮಾರ್‌, ವಿಜಯ್ ಕುಮಾರ್‌ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು