ಬುಧವಾರ, ಮಾರ್ಚ್ 3, 2021
25 °C
ಸಂಶೋಧಕರ ಹೊಸ ಅನ್ವೇಷಣೆ * ವಿಕಾಸದ ಮಾರ್ಗ ಕಂಡುಕೊಳ್ಳಲು ಶಾಸನಗಳು ಅಮೂಲ್ಯ ಸಾಧನ

ಸಂಸ್ಕೃತಿ ಪರಿಚಯಿಸುವ ಕನ್ನಡ ಲಿಪಿ ಶಾಸನ

ವಡ್ಡನಹಳ್ಳಿ ಭೋಜ್ಯನಾಯ್ಕ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಇತಿಹಾಸ ಅರಿಯಲು ಶಾಸನ, ವೀರಗಲ್ಲು, ಮಾಸ್ತಿಗಲ್ಲು ಅತಿ ಪ್ರಮುಖ ಎನ್ನುತ್ತಾರೆ ಇತಿಹಾಸ ಸಂಶೋಧಕರು. ಇದಲ್ಲದೆ ಕನ್ನಡ ಸಾಹಿತ್ಯ, ಕಲೆ, ರಾಜಕೀಯ, ಧಾರ್ಮಿಕ, ಆರ್ಥಿಕ ಸ್ಥಿತಿ ತಿಳಿಯಲು ಕೂಡ ಆಕರ ಮೂಲಗಳಾಗಿವೆ. 

ದೇಶದ ಶಾಸನಗಳ ಚರಿತ್ರೆ ಆರಂಭವಾಗುವುದೇ ಸಾಮ್ರಾಟ್ ಆಶೋಕನ ಕಾಲದಿಂದ. ಬಂಡೆಕಲ್ಲು ಮೇಲೆ ಕೆತ್ತಿಸಿರುವ ಬೌದ್ಧ ಧರ್ಮದ ತತ್ವಗಳ ಸಾರ ಇಂದಿಗೂ ಇತಿಹಾಸದ ಕುರುಹುಗಳಾಗಿ ಉಳಿದಿವೆ. ನಂತರದ ಕಾಲಘಟ್ಟದಲ್ಲಿ ಹರಪ್ಪ – ಮೊಹೆಂಜೊದಾರೊ ನಾಗರಿಕತೆ ಇತಿಹಾಸದ ಏಳು– ಬೀಳು ಚಿತ್ರಿಸುತ್ತದೆ.

ದಕ್ಷಿಣ ಭಾರತವನ್ನು ಆಳಿದ ಚಾಲುಕ್ಯರು, ಪಲ್ಲವರು, ಚೋಳರು, ಶಾತವಾಹನರು, ಕದಂಬರು ಪ್ರಜಾ ಸೇವಕರು, ಉತ್ತಮ ಆಡಳಿತಗಾರರಾಗಿಯೂ ಹೆಸರಾಗಿದ್ದರು ಎಂಬುದಕ್ಕೆ ದೊರೆತಿರುವ ಶಾಸನ, ಲಿಪಿಗಳೇ ಸಾಕ್ಷ್ಯ ಎನ್ನುತ್ತಾರೆ ಇತಿಹಾಸಕಾರರು.

ತಮಿಳುನಾಡು ಹೊರತುಪಡಿಸಿದರೆ ದೇಶದಲ್ಲಿ ಅತಿಹೆಚ್ಚು ಕಲ್ಲಿನ ಕೆತ್ತನೆಯ ಶಾಸನ, ಮೀರಗಲ್ಲು, ಮಾಸ್ತಿಗಲ್ಲು, ವೀರಶೈವ ಮತ್ತು ವೈಷ್ಣವ ದೇವಾಲಯವನ್ನು ಹೊಂದಿರುವ ಎರಡನೇ ರಾಜ್ಯ ಕರ್ನಾಟಕ. ಇಲ್ಲಿನ ಇತಿಹಾಸ ಆಸಕ್ತರು ಸ್ವಯಂಪ್ರೇರಿತವಾಗಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಕೇಂದ್ರ ಪ್ರಾಚ್ಯವಸ್ತು ಮತ್ತು ಸಂರಕ್ಷಣೆ ಇಲಾಖೆ ನಿರಾಸಕ್ತಿ ತೋರಿದೆ ಎನ್ನುತ್ತಾರೆ ಇತಿಹಾಸ ಅನ್ವೇಷಕ ಬಿಟ್ಟಸಂದ್ರ ಗುರುಸಿದ್ದಯ್ಯ.

ಲಿಂಗಧೀರಗೊಲ್ಲಹಳ್ಳಿ ಬಳಿ ದೊರತಿರುವ ಶಾಸನದಲ್ಲಿ ಉಲ್ಲೇಖಿಸಿದಂತೆ; ‘ಆವತಿ ನಾಡಪ್ರಭು ಬಿಯಿರೈಯ ಗವುಡರು ಲಿಂಧದೀ(ಮೀ) ರಂಣಹಳ್ಳಿಯಲ್ಲಿ ಕೆತ್ತಿಸಿರುವ ಶಾಸನದಿಂದ ತಿಳಿದು ಬರುವಂತೆ ಇದು ಅವರಿಗೆ ಸೇರುವ (ಒಡೆತದಲ್ಲಿ ಬರುವ) ಸಿಮನಹಳ್ಳಿ ಸ್ಥಳದೊಳಗೆ ಸಲ್ಲುತ್ತದೆ (ಬಂಡೆ) ಗೊಲ್ಲಹಳ್ಳಿ ಗ್ರಾಮವೊಂದನ್ನು ತಮ್ಮ ಆಂಣನವರಾದ ಬಯಿಚಯ ಗವುಡ ಅಯ್ಯನವರಿಗೆ ಪುಣ್ಯವಾಗಬೇಕೆಂದು ದಾನ ನೀಡಿದ್ದಾರೆ. ಗ್ರಾಮದ ಚುತುಸ್ಸಿಮೆಗೆ ಸಲ್ಲುವಂತಹ ಗದ್ದೆ, ಬೆದ್ದಲು, ಕಾಡಾರಂಬ, ನೀರಾಂಬ ಮಾತ್ರವಲ್ಲದೆ ಮನೆ ಮೇಲಿನ ಮಗ್ಗದ ಮೇಲಿನ ತೆರಿಗೆಗಳೆಲ್ಲವೂ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತಾರೆ. ಇದರೊಂದಿಗೆ ಭತ್ತಾದಾಯ, ಸುವರ್ಣಾದಾಯಗಳು ಲಿಂಗದ ವೀರರಿಗೆ ಸಲ್ಲುವ ವಿವರಗಳು ಇಲ್ಲಿ ಪತ್ತೆ ಆಗಿರುವ ಶಾಸನದಲ್ಲಿ ವಿವರಿಸಲಾಗಿದೆ’ ಎಂದು ಸಂಶೋಧಕರು ಮಾಹಿತಿ ನೀಡಿದರು.

ತಾಲ್ಲೂಕಿನ ಇತಿಹಾಸ, ಸಂಸ್ಕೃತಿ, ಧರ್ಮ ಪ್ರತಿಬಿಂಬಿಸುವ ಅನೇಕ ಗ್ರಾಮಗಳಿದ್ದವು ಎಂಬುದಕ್ಕೆ ಆವತಿ, ಲಿಂಗಧೀರಗೊಲ್ಲಹಳ್ಳಿ ಬಸವೇಶ್ವರ ದೇವಾಲಯದ ಮುಂದೆ ಶೋಧಿಸಲಾಗಿರುವ ಕಂಬ ಶಾಸನವೇ ಇದಕ್ಕೆ ಸಾಕ್ಷ್ಯ ಎನ್ನುತ್ತಾರೆ ಸಂಶೋಧಕರ ತಂಡ.

ಕೊಟ್ಟ ದಾನವಾಗಲಿ,ಪಡೆದ ವ್ಯಕ್ತಿಗಳಾಗಲಿ, ರಾಜ ಮನೆತನಗಳಾಗಲಿ ಇಂದು ಉಳಿದಿಲ್ಲ. ಕಾಲನ ದವಡೆಯಲ್ಲಿ ಅಡಗಿ ಹೋಗಿವೆ. ಹಿಂದಿನವರ ಅಶೋತ್ತರ, ಸಂಸ್ಕೃತಿ, ವಿಕಾಸದ ಮಾರ್ಗ ಕಂಡುಕೊಳ್ಳಲು ಶಾಸನಗಳು ಅಮೂಲ್ಯ ಸಾಧನಗಳಾಗಿವೆ. ಇವುಗಳನ್ನು ರಕ್ಷಿಸಬೇಕಾಗಿದೆ ಎಂಬುದು ಇತಿಹಾಸಕಾರರ ಅಭಿಪ್ರಾಯವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.