ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಕಾವತಿ ಪಾತ್ರದ ಕೆರೆಗಳು ಭರ್ತಿ

ಕೋಡಿ ನೀರು ನೋಡಲು ಜನಸಾಗರ: ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮ
Last Updated 31 ಆಗಸ್ಟ್ 2022, 5:10 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಅರ್ಕಾವತಿ ನದಿ ಪಾತ್ರದ ಸುಮಾರು ಹತ್ತಕ್ಕೂ ಹೆಚ್ಚಿನ ಕೆರೆಗಳು ಸೋಮವಾರ ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಕೋಡಿ ಬಿದ್ದಿವೆ.

ನಂದಿ ಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿ ತಾಲ್ಲೂಕಿನ ಮೂಲಕ ಹಾದು ಹೋಗುವುದೇ ಸಾಲು ಸಾಲು ಕೆರೆಗಳ ಮೂಲಕ. ನದಿ ಪಾತ್ರದಲ್ಲಿ ಬರುವ ಐತಿಹಾಸಿಕ 15 ಕೆರೆಗಳ ಮೂಲಕ ಹಾದು ಹೋಗುವ ನದಿಯು ಬೆಂಗಳೂರು ಉತ್ತರ ತಾಲ್ಲೂಕಿನ ಹೆಸರಘಟ್ಟ ಕೆರೆ ಸೇರಿ ಅಲ್ಲಿಂದ ಮುಂದೆ ಹರಿದು ಹೋಗಿ ತಿಪ್ಪಗೊಂಡನಹಳ್ಳಿ ಜಲಾಶಯ ಸೇರುತ್ತದೆ.

ಅರ್ಕಾವತಿ ಸಾಲಿನ ನಂದಿಬೆಟ್ಟದ ತಪ್ಪಲಿನ ಚಿಕ್ಕರಾಯಪ್ಪನಹಳ್ಳಿ, ಚನ್ನಾಪುರ, ಹೆಗ್ಗಡಿಹಳ್ಳಿ, ಮೇಳೆಕೋಟೆ, ಶಿವಪುರ, ನಾಗರಕೆರೆ, ಬಾಶೆಟ್ಟಿಹಳ್ಳಿ ಕೆರೆ, ದೊಡ್ಡತುಮಕೂರು ಕೆರೆ ಸೇರಿದಂತೆ ಹಲವಾರು ಕೆರೆಗಳು ಬೃಹತ್‌ ಪ್ರಮಾಣದಲ್ಲಿ ಮಂಗಳವಾರ ಕೋಡಿ ಹರಿಯುತ್ತಿವೆ.

ನಗರದ ಹೃದಯ ಭಾಗದಲ್ಲಿನ ನಾಗರಕೆರೆ ಅರ್ಕಾವತಿ ನದಿ ಪಾತ್ರದಲ್ಲಿನ ಅತ್ಯಂತ ಮಹತ್ವದ ಐತಿಹಾಸಿಕ ಕೆರೆಯಾಗಿದ್ದು ಈ ಬಾರಿ ಮಳೆಗಾಲದಲ್ಲಿ ಎರಡು ಬಾರಿ ಕೋಡಿ ಹರಿದಿದೆ. ಅದರಲ್ಲೂ ದೊಡ್ದ ಪ್ರಮಾಣದಲ್ಲಿ ಕೋಡಿ ನೀರು ಹರಿಯುತ್ತಿದ್ದರಿಂದ ನಗರದ ನೂರಾರು ಜನ ನೀರು ನೋಡಲು ಸೇರಿದ್ದರು.

ಅದರಲ್ಲೂ ಯುವಕರು ಕೋಡಿ ಹರಿಯುತ್ತಿದ್ದ ನೀರಿನಲ್ಲಿ ನಿಂತು ಸೆಲ್ಫಿ ಫೋಟೊಗಳನ್ನು ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯ
ವಾಗಿತ್ತು.

ನಂದಿಬೆಟ್ಟದಿಂದ ಪಶ್ಚಿಮಾಭಿಮುಖವಾಗಿ ಹರಿದು ಬರುವ ನದಿಯ ಸಾಲಿನಲ್ಲೇ ದೊಡ್ಡದಾಗಿರುವ ಮಳೇಕೋಟೆ ಕೆರೆ 2021ರಲ್ಲೂ ತುಂಬಿ ಸಣ್ಣ ಪ್ರಮಾಣದಲ್ಲಿ ಕೋಡಿ ಬಿದ್ದಿತ್ತು. 20 ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ಬೃಹತ್‌ ಪ್ರಮಾಣದಲ್ಲಿ ಕೋಡಿ ಹರಿಯುತ್ತಿದ್ದ ಮನಮೋಹಕ ದೃಶ್ಯ ನೋಡಲು ಕೆರೆ ಸುತ್ತಮುತ್ತಲಿನ ನೂರಾರು ಜನರು ಸೇರಿದ್ದರು.

ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಎರಡೂ ನಗರಗಳಿಗೂ ಕುಡಿಯುವ ನೀರು ಪೂರೈಕೆಯಾಗುವ ಜಕ್ಕಲಮೊಡಗು ಜಲಾಶಯವು ಈ ವರ್ಷದಲ್ಲಿ ಎರಡನೇ ಬಾರಿಗೆ ಬೃಹತ್‌ ಪ್ರಮಾಣದಲ್ಲಿ ಕೋಡಿ ಬಿದ್ದಿದೆ. ಜಲಾಶಯದ ಹಿನ್ನೀರಿನ ಗುಂಗೀರ್ಲಹಳ್ಳಿ ಮೂಲಕ ಚಿಕ್ಕಬಳ್ಳಾಪುರ ನಗರಕ್ಕೆ ಹೋಗುವ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಈ ಭಾಗದ ಮೂಲಕ ಸಂಚರಿಸುವ ಜನರಿಗೆ ರಸ್ತೆ ಬಂದ್‌ ಆಗಿದ್ದರಿಂದ ಎರಡೂ ತಾಲ್ಲೂಕಿನ ಸಂಪರ್ಕ ಮಂಗಳವಾರ ಬಂದ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT