ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಪ್ರಯಾಣಿಕರಿಗೆ ಮಿತಿ, ಸಂಕಷ್ಟದಲ್ಲಿ ಟ್ಯಾಕ್ಸಿ ಚಾಲಕರು

ಸಡಿಲಗೊಂಡ ಲಾಕ್‌ಡೌನ್‌ * ಬಾರದ ಪ್ರಯಾಣಿಕರು * ಆದಾಯದಲ್ಲಿ ಇಳಿಕೆ
Last Updated 23 ಮೇ 2020, 20:00 IST
ಅಕ್ಷರ ಗಾತ್ರ

ವಿಜಯಪುರ: ಲಾಕ್‌ಡೌನ್‌ ಘೋಷಣೆಯಾದ ನಂತರ ಪ್ರವಾಸಿ ಟ್ಯಾಕ್ಸಿ ನಂಬಿ ಜೀವನ ನಡೆಸುತ್ತಿದ್ದ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಮಾಡಿದ್ದು ಒಳ್ಳೆಯ ಬೆಳವಣಿಗೆ. ಇದೀಗ ಲಾಕ್‌ಡೌನ್‌ ಸಡಿಲಗೊಳಿಸಲಾಗಿದ್ದು, ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ನೀಡಿದ್ದರೂ ನಮ್ಮ ಜೀವನ ಮಟ್ಟ ಸುಧಾರಣೆಯಾಗುತ್ತಿಲ್ಲ. ಲಾಕ್‌ಡೌನ್‌ ಎರಡು ತಿಂಗಳ ಆದಾಯವನ್ನು ಕಸಿದಿದೆ ಎಂದು ಪ್ರವಾಸಿ ಟ್ಯಾಕ್ಸಿ ಮಾಲೀಕ ಚಂದ್ರಪ್ಪ ತಿಳಿಸಿದರು.

ಬ್ಯಾಂಕ್‌ನಿಂದ ಸಾಲ ಪಡೆದವರು, ಪ್ರವಾಸೋದ್ಯಮ ಇಲಾಖೆಯಿಂದ ಸಹಾಯಧನ ಪಡೆದು ಕಾರುಗಳು ಖರೀದಿಸಿದವರಿಗೆ ಕಷ್ಟವಾಗಿದೆ. ಇದರಿಂದಲೇ ಜೀವನ ನಡೆಯುತ್ತಿತ್ತು. ಇದೀಗ ಬಾಡಿಗೆ ಕಾರಿನಲ್ಲಿ ಪ್ರಯಾಣಿಸುವವರೇ ಕಡಿಮೆಯಾಗಿದ್ದಾರೆ.ಮನೆ ಬಾಡಿಗೆ ಕಟ್ಟಿಲ್ಲ. ಕುಟುಂಬದ ನಿರ್ವಹಣೆಗೂ ತುಂಬಾ ಕಷ್ಟವಾಗಿಬಿಟ್ಟಿದೆ ಎಂದು ಅಳಲು ತೋಡಿಕೊಂಡರು.

ಸರ್ಕಾರ, ಲಾಕ್‌ಡೌನ್‌ ಸಡಿಲಿಕೆ ಮಾಡಿ ಪ್ರವಾಸಿ ಟ್ಯಾಕ್ಸಿಗಳ ಸಂಚಾರಕ್ಕೆ ಅವಕಾಶ ಕೊಟ್ಟಿದೆ. ಆದರೆ, ಟ್ಯಾಕ್ಸಿಯಲ್ಲಿ ಚಾಲಕ ಹೊರತುಪಡಿಸಿ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡದ ಗ್ರಾಹಕರು ಕೊಡುವ ಬಾಡಿಗೆಗಳು ಸಾಕಾಗುವುದಿಲ್ಲ. ಹೆಚ್ಚು ಮಂದಿ ಕೂರಿಸಿಕೊಂಡು ಹೋದರೆ ಮಾತ್ರವೇ ಕೂಲಿಯ ಹಣ ಉಳಿಯುತ್ತದೆ. ಇಲ್ಲವಾದರೆ ಟ್ಯಾಕ್ಸಿಗಳು ಓಡಿಸುವುದು ಕಷ್ಟಕರವಾಗುತ್ತದೆ ಎಂದರು.

ಚಾಲಕ ಹರೀಶ್ ಮಾತನಾಡಿ, ಇಎಂಐ ಕಟ್ಟಲು ಅವಕಾಶ ನೀಡಿದ್ದಾರೆ. ಸಂಪಾದನೆ ಇಲ್ಲದೇ ಕಂತು ಕಟ್ಟುವುದು ಹೇಗೆ. ಆಗಸ್ಟ್ ತಿಂಗಳ ನಂತರವಾದರೂ ಕಟ್ಟಲೇಬೇಕು. ಮನೆಗಳ ಮುಂದೆ ಕಾರುಗಳನ್ನು ಖಾಲಿಯಾಗಿ ನಿಲ್ಲಿಸಿಕೊಂಡಿದ್ದೇವೆ. ವರ್ಷಕ್ಕೊಮ್ಮೆ ತೆರಿಗೆ ಕಟ್ಟಲೇಬೇಕಿದೆ. ಈಗಾಗಲೇ ನಾವು ಬಹಳಷ್ಟು ಸಂಕಷ್ಟಕ್ಕೆ ಸಿಲುಕಿದ್ದೇವೆ. ದೂರದ ಪ್ರಯಾಣಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಜನರೂ ಬರುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ನಮ್ಮ ಕುಟುಂಬಗಳು ಬೀದಿಗೆ ಬರುತ್ತವೆ ಎಂದು ಹೇಳಿದರು.

ಪೆಟ್ರೋಲ್, ಡಿಸೇಲ್ ದರ ಜಾಸ್ತಿಯಾಗಿದೆ. ಪ್ರಯಾಣಿಕರು ಕಡಿಮೆ ಎಂದು ಹೆಚ್ಚು ಬಾಡಿಗೆ ಕೇಳುವುದಕ್ಕೂ ಆಗುವುದಿಲ್ಲ. ಕಡಿಮೆ ಬಾಡಿಗೆಗೆ ಕರೆದುಕೊಂಡು ಹೋದರೂ ನಮಗೇನೂ ಪ್ರಯೋಜನವಿಲ್ಲ. ನಾವು ಸುಮ್ಮನೆ ಮನೆಯಲ್ಲಿರುವಂತೆಯೂ ಇಲ್ಲ. ನಮ್ಮ ಜೀವನ ಅಡಕತ್ತರಿಯಲ್ಲಿ ಸಿಕ್ಕಿದಂತಾಗಿದೆ. ಸರ್ಕಾರ ನಮ್ಮಂಥ ಟ್ಯಾಕ್ಸಿ ಚಾಲಕರ ಕುಟುಂಬಗಳ ನೆರವಿಗೆ ಬರಬೇಕಿದೆ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT