ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್‌: ಬೆಳಗ್ಗೆ, ಸಂಜೆ ಬಿರುಸಿನ ಮತದಾನ

ಬೇಸಿಗೆ ಬೇಗೆಗೆ ಹೊರಬಾರದ ಜನ । ಆನೇಕಲ್‌ನಲ್ಲಿ ಶೇ 52 ರಷ್ಟು ಮತದಾನ
Published 26 ಏಪ್ರಿಲ್ 2024, 13:58 IST
Last Updated 26 ಏಪ್ರಿಲ್ 2024, 13:58 IST
ಅಕ್ಷರ ಗಾತ್ರ

ಆನೇಕಲ್: ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಮತದಾನ ಆನೇಕಲ್‌ ವಿಧಾನಸಭಾ ಕ್ಷೇತ್ರದಾದ್ಯಂತ ಶಾಂತಿಯುತ ನಡೆಯಿತು.

ಬೆಳಗಿನಿಂದಲೂ ಚುರುಕಾಗಿ ಆರಂಭವಾದ ಮತದಾನ ಮಧ್ಯಾಹ್ನದ ವೇಳೆಗೆ ನಿಧಾನಗತಿಯಲ್ಲಿ ಸಾಗಿತು. ಬಿಸಿಲಿನ ಬೇಗೆಯಿಂದಾಗಿ ಮಧ್ಯಾಹ್ನ ಮತದಾರರು ಮನೆಯಿಂದ ಹೊರಬರಲಿಲ್ಲ. ಸಂಜೆ ಬಳಿಕ ಮತ್ತೆ ಮತದಾನ ಚುರುಕಾಯಿತು.

ಮತಯಂತ್ರಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಉಂಟಾದ ತಕ್ಷಣ ಅಧಿಕಾರಿಗಳು ಮತಗಟ್ಟೆಗಳಿಗೆ ಧಾವಿಸಿ ತಾಂತ್ರಿಕ ಸಮಸ್ಯೆ ಪರಿಹರಿಸಿ ಸುಗಮ ಮತದಾನಕ್ಕೆ ಅನುವು ಮಾಡಿಕೊಟ್ಟರು.

ಬೆಳಗಿನಿಂದಲೂ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು. ಮತಕೇಂದ್ರಗಳ ಸಮೀಪ ಕಾಂಗ್ರೆಸ್‌ ಮತ್ತು ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷದ ಕಾರ್ಯಕರ್ತರು ಮತದಾರರನ್ನು ಮನವೊಲಿಸುತ್ತಿದ್ದ ದೃಶ್ಯ ಕಂಡು ಬಂದಿತು. ಮತಚೀಟಿ ನೀಡಿ ತಮ್ಮ ಪಕ್ಷಗಳಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದರು.

ಆನೇಕಲ್ ಪಟ್ಟಣದ ಮತಗಟ್ಟೆ ಕೇಂದ್ರದ ಸಮೀಪದಲ್ಲಿ ಮತ ಚಲಾಯಿಸಲು ಮಾಹಿತಿ ಪಡೆಯುತ್ತಿರುವ ಮತದಾರರು
ಆನೇಕಲ್ ಪಟ್ಟಣದ ಮತಗಟ್ಟೆ ಕೇಂದ್ರದ ಸಮೀಪದಲ್ಲಿ ಮತ ಚಲಾಯಿಸಲು ಮಾಹಿತಿ ಪಡೆಯುತ್ತಿರುವ ಮತದಾರರು

ಬೆಳಗ್ಗೆ 10ರ ವೇಳೆಯಲ್ಲಿ ಮತಗಟ್ಟೆಗಳ ಮುಂಭಾಗದ ಉದ್ದನೆಯ ಸರತಿ ಸಾಲು ಕಂಡು ಬಂದಿತು. 12ರ ನಂತರ ಮತದಾನದ ಮಂದಗತಿಯಲ್ಲಿ ಸಾಗಿತು. ಮಧ್ಯಾಹ್ನ 3ರ ಸಮಯಕ್ಕೆ ಶೇ.44ರಷ್ಟು ಮತದಾನವಾಗಿತ್ತು. ಸಂಜೆ ಐದರ ವೇಳೆಗೆ ಶೇ.52ರಷ್ಟು ಮತದಾನವಾಗಿತ್ತು.

ಆನೇಕಲ್‌ನಲ್ಲಿ ಬಿಸಿಲಿನ ಬೇಗೆಯಿಂದಾಗಿ ಛತ್ರಿಯ ಮೊರೆ ಹೋದ ಮತದಾರರು
ಆನೇಕಲ್‌ನಲ್ಲಿ ಬಿಸಿಲಿನ ಬೇಗೆಯಿಂದಾಗಿ ಛತ್ರಿಯ ಮೊರೆ ಹೋದ ಮತದಾರರು

ಆನೇಕಲ್ ತಾಲ್ಲೂಕಿನ ಸರ್ಜಾಪುರ, ಹೆಬ್ಬಗೋಡಿ, ಚಂದಾಪುರ, ಬನಹಳ್ಳಿ, ಅತ್ತಿಬೆಲೆಯಲ್ಲಿ ಸಖಿ ಮತಗಟ್ಟೆ ತೆರೆಯಲಾಗಿತ್ತು. ಸಖಿ ಮತಗಟ್ಟೆಗಳನ್ನು ಪಿಂಕ್‌ ಬಣ್ಣದಿಂದ ಸಿಂಗರಿಸಲಾಗಿತ್ತು. ಮತದಾನ ಮಾಡಿದ ಮಹಿಳೆಯರು ಸೆಲ್ಫಿ ಸ್ಟ್ಯಾಂಡ್‌ಗಳಲ್ಲಿ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು.

ತಾಲ್ಲೂಕಿನ ಮರಸೂರಿನಲ್ಲಿ ಸ್ಥಾಪಿಸಲಾಗಿದ್ದ ಯುವ ಮತಗಟ್ಟೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದ ಯುವ ಸಮುದಾಯ ಸಂಭ್ರಮಿಸಿದರು. ಹಿರಿಯ ನಾಗರಿಕರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದ ದೃಶ್ಯ ಕಂಡು ಬಂದಿತು.

ಆನೇಕಲ್ ತಾಲ್ಲೂಕಿನ ಮರಸೂರು ಮತಗಟ್ಟೆಯಲ್ಲಿ ಮತ ಚಲಾಯಿಸಿದ ಸಂಭ್ರಮದಲ್ಲಿರುವ ಹಿರಿಯ ನಾಗರಿಕರು
ಆನೇಕಲ್ ತಾಲ್ಲೂಕಿನ ಮರಸೂರು ಮತಗಟ್ಟೆಯಲ್ಲಿ ಮತ ಚಲಾಯಿಸಿದ ಸಂಭ್ರಮದಲ್ಲಿರುವ ಹಿರಿಯ ನಾಗರಿಕರು

ಹಿರಿಯ ನಾಗರಿಕರಿಕೆ ವಾರದ ಹಿಂದೆ ಮನೆಯಲ್ಲೇ ಮತದಾನ ವ್ಯವಸ್ಥೆ ಮಾಡಿದ್ದರೂ, ಕೆಲ ಹಿರಿಯ ಜೀವಗಳು ಮತಗಟ್ಟೆಗೆ ಬಂದು ಮತ ಚಲಾಯಿಸಿ, ಮತದಾನದ ಮಹತ್ವ ಸಾರಿದರು.

ಆನೇಕಲ್ ತಾಲ್ಲೂಕಿನ ಮರಸೂರು ಯುವ ಮತಗಟ್ಟೆಯಲ್ಲಿ ಮೊದಲ ಮತ ಚಲಾಯಿಸಿ ಸಂಭ್ರಮಿಸಿದ ಯುವತಿ
ಆನೇಕಲ್ ತಾಲ್ಲೂಕಿನ ಮರಸೂರು ಯುವ ಮತಗಟ್ಟೆಯಲ್ಲಿ ಮೊದಲ ಮತ ಚಲಾಯಿಸಿ ಸಂಭ್ರಮಿಸಿದ ಯುವತಿ

ತಾಲ್ಲೂಕಿನ ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆರಟಿಗನಬೆಲೆಯಲ್ಲಿ ವಿಷಯ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿತ್ತು. ಎಲ್ಲಾ ಮತಗಟ್ಟೆಗಳ ಬಳಿ ಅಂಗವಿಕಲರಿಗೆ ವ್ಯವಸ್ಥೆ ಮಾಡಲಾಗಿತ್ತು.

ಮತ ಚಲಾಯಿಸಿದ ಪ್ರಮುಖರು: ಆನೇಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಂದಾಪುರ ಸಮೀಪದ ಇಗ್ಗಲೂರು ಮತಗಟ್ಟೆಯಲ್ಲಿ ಶಾಸಕ ಬಿ.ಶಿವಣ್ಣ. ಆನೇಕಲ್‌ ಮತಗಟ್ಟೆಯಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಮತಚಲಾಯಿಸಿದರು.

ಆನೇಕಲ್ ತಾಲ್ಲೂಕಿನ ಬನಹಳ್ಳಿಯ ಸಖಿ ಮತಗಟ್ಟೆಯಲ್ಲಿ ಮತ ಚಲಾಯಿಸಿ ಸೆಲ್ಫಿ ತೆಗೆಸಿಕೊಂಡ ಮಹಿಳೆಯರು
ಆನೇಕಲ್ ತಾಲ್ಲೂಕಿನ ಬನಹಳ್ಳಿಯ ಸಖಿ ಮತಗಟ್ಟೆಯಲ್ಲಿ ಮತ ಚಲಾಯಿಸಿ ಸೆಲ್ಫಿ ತೆಗೆಸಿಕೊಂಡ ಮಹಿಳೆಯರು
ಆನೇಕಲ್ ತಾಲ್ಲೂಕಿನ ಹಿನ್ನಕ್ಕಿ ಗ್ರಾಮದಲ್ಲಿ ಮದುವೆಯ ಬಂಧಕ್ಕೆ ಕಾಲಿಟ್ಟ ನಂತರ ಮತಗಟ್ಟೆಯಲ್ಲಿ ಮತಚಲಾಯಿಸಿ ನವಜೋಡಿ ಸಂತಸ ವ್ಯಕ್ತಪಡಿಸಿದರು
ಆನೇಕಲ್ ತಾಲ್ಲೂಕಿನ ಹಿನ್ನಕ್ಕಿ ಗ್ರಾಮದಲ್ಲಿ ಮದುವೆಯ ಬಂಧಕ್ಕೆ ಕಾಲಿಟ್ಟ ನಂತರ ಮತಗಟ್ಟೆಯಲ್ಲಿ ಮತಚಲಾಯಿಸಿ ನವಜೋಡಿ ಸಂತಸ ವ್ಯಕ್ತಪಡಿಸಿದರು

ಛತ್ರಿಯ ನೆರಳಿನಲ್ಲಿ ಮತಯಾಚನೆ

ಆನೇಕಲ್‌ ಪಟ್ಟಣದಲ್ಲಿ 35-38ಡಿಗ್ರಿಗೂ ಹೆಚ್ಚು ತಾಪಮಾನವಿತ್ತು. ಹಾಗಾಗಿ ಆನೇಕಲ್‌ನಲ್ಲಿ ಮತದಾರರು ಛತ್ರಿಯ ಮೊರೆ ಹೋದರು. ಛತ್ರಿಯ ನೆರಳಿನಲ್ಲಿ ಮತದಾನ ಕೇಂದ್ರಕ್ಕೆ ಆಗಮಿಸುತ್ತಿದ್ದ ದೃಶ್ಯ ಕಂಡು ಬಂದಿತು. ಕಾರ್ಯಕರ್ತರು ಛತ್ರಿಯ ನೆರಳಿನಲ್ಲಿ ಮತಯಾಚನೆ ಮಾಡುತ್ತಿದ್ದ ದೃಶ್ಯ ಪಟ್ಟಣದ ದೇವರಕೊಂಡಪ್ಪ ವೃತ್ತದಲ್ಲಿ ಕಂಡು ಬಂದಿತು. ಮತಗಟ್ಟೆಗಳ ಹಲವೆಡೆ ಬಳಿ ಶಾಮೀಯಾನ ವ್ಯವಸ್ಥೆ ಮಾಡಲಾಗಿತ್ತು. ಬಿಗಿ ಪೊಲೀಸ್‌ ಬಂದೋಬಸ್ತ್‌ ತಾಲ್ಲೂಕಿನಾದ್ಯಂತ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು 600 ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು. ಎಲ್ಲಾ ಮತಗಟ್ಟೆಗಳ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳ ಬಳಿ ಹೆಚ್ಚುವರಿ ಪೊಲೀಸ್‌ ನಿಯೋಜಿಸಲಾಗಿತ್ತು. ಎಲ್ಲೆಡೆ ಶಾಂತಿಯುತ ಮತದಾನ ನಡೆದಿದೆ ಎಂದು ಡಿವೈಎಸ್ಪಿ ಮೋಹನ್‌ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT