ಮಂಗಳವಾರ, ಮೇ 11, 2021
19 °C
ಯುಗಾದಿ ಸಂಭ್ರಮದಲ್ಲಿ ಆತಂಕ; ತರಕಾರಿ ಬೆಲೆ ಕುಸಿತ, ಖರೀದಿಯಲ್ಲಿ ಕಾಣದ ಉತ್ಸಾಹ

ಮಾವು, ಬೇವು ದುಬಾರಿ: ಕೊರೊನಾ ಕರಿನೆರಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಕೊರೊನಾ ಕರಿನೆರಳಿನ ನಡುವೆ ಯುಗಾದಿ ಹಬ್ಬ ಆಗಮಿಸಿದೆ. ನೀರಿನ ಸಮಸ್ಯೆ ಎಲ್ಲೆಡೆ ಕಾಡುತ್ತಿದೆ. ಇದರ ಪರಿಣಾಮ ಯುಗಾದಿ ಮೇಲೂ ಬಿದ್ದಿದೆ. ಈ ಬಾರಿಯ ಶ್ರೀಪ್ಲವ ಸಂವತ್ಸರದ ಯುಗಾದಿ ಸ್ವಾಗತಕ್ಕೆ ಮಾವು, ಬೇವು, ಹೂವು, ದುಬಾರಿಯಾಗಿದೆ. ಹಬ್ಬದ ಸಂಭ್ರಮ ಸಾಧಾರಣವಾಗಿದೆ.

ಚೆಂಡು ಹೂ ₹50, ಕಾಕಡ ಒಂದು ಕೆಜಿಗೆ ₹600, ಕನಕಾಂಬರ, ಮಲ್ಲಿಗೆ, ಮಳ್ಳೆ ಹೂ ಒಂದು ಕೆಜಿಗೆ ₹500, ಬಟನ್ಸ್, ರೋಸ್, ಸೇವಂತಿ ₹200 ಆಗಿದೆ. ಮಾವಿನ ಎಲೆ ₹20ರಿಂದ ₹25ವರೆಗೆ ಮಾರಾಟವಾಗುತ್ತಿದೆ. ಬೇವಿನ ಸೊಪ್ಪು ಬೆಲೆ ಏರಿಕೆಯಾಗಿದೆ. ಇದರೊಂದಿಗೆ ತೆಂಗಿನಕಾಯಿ ಒಂದಕ್ಕೆ 30ರಿಂದ ₹40ಆಗಿದೆ. ಈ ನಡುವೆ ತರಕಾರಿ ಬೆಲೆ ಕುಸಿತವಾಗಿದೆ.

ಈ ಬಾರಿ ಮಾವಿನ ಫಸಲು ಹೆಚ್ಚಾಗಿದೆ. ಮಾವಿನ ಮರಗಳಲ್ಲಿ ಹೂಬಿಟ್ಟು, ಕಾಯಿ ಬರುವ ಸ್ಥಿತಿ ಇರುವುದರಿಂದ ತೋಟಗಳ ಮಾಲೀಕರು ಸೊಪ್ಪು ಕೀಳಲು ಬಿಡದೆ ತೋಟಗಳಿಗೆ ಕಾವಲಿರಿಸಿದ್ದಾರೆ. ಇದರಿಂದಾಗಿ ಊರ ಹೊರಗಿನ ದೊಡ್ಡ ಮರಗಳಲ್ಲಿ ಸಾಹಸ ಮಾಡಿ ಮಾವಿನ ಸೊಪ್ಪು ತರಬೇಕಿರುವುದರಿಂದ ಬೆಲೆ ಸಹಜವಾಗಿ ಹೆಚ್ಚಾಗಿದೆ. ಮಾವಿನ ಹಣ್ಣಿಗಾಗಿ ಹೂ ಬಿಟ್ಟಿರುವ ಮರಗಳಲ್ಲಿ ಮಾವಿನ ಸೊಪ್ಪು ಕೀಳಿಸುವುದಿಲ್ಲ. ಇನ್ನು ಸೊಪ್ಪಿನ ಮರಗಳನ್ನೇ ಹುಡುಕಿ ತರಬೇಕು. ರಸ್ತೆ ಬದಿಯಲ್ಲಿದ್ದ ಮರಗಳು ಈಗ ಕಡಿಮೆಯಾಗಿದೆ. ನಾಲ್ಕಾರು ಮೈಲಿಗಳಿಂದ ತರುವ ಸಾಗಣೆ ವೆಚ್ಚ ಸೇರಿ ಮಾವಿನ ಕುಡಿ ಹೆಚ್ಚಿನ ಬೆಲೆಗೆ ಮಾರಬೇಕಾಗಿದೆ ಎನ್ನುತ್ತಾರೆ ಮಾವಿನ ಸೊಪ್ಪಿನ ಮಾರಾಟಗಾರರು.

ಮಾರುಕಟ್ಟೆಯಲ್ಲಿ ಹಬ್ಬಕ್ಕೆಂದೇ ಬೆಲೆ ಹೆಚ್ಚಾಗಿದೆ. ಈಗಾಗಲೇ ಬೆಳೆ, ಬೆಲ್ಲ ಹೆಚ್ಚಾಗಿಯೇ ಇವೆ. ಹಬ್ಬ ಆಚರಿಸಬೇಕಿರುವುದರಿಂದ ಕೊಳ್ಳುವುದು ಅನಿವಾರ್ಯ. ಈ ನಡುವೆ ಕೋವಿಡ್-19 ಆತಂಕದ ನಡುವೆ ಹಬ್ಬ ಮಾಡಲೇಬೇಕಾಗಿದೆ. ಆದರೆ, ಹಿಂದಿನ ಉತ್ಸಾಹ ಈಗಿಲ್ಲ ಎನ್ನುವುದು ಹಲವರ ಅಭಿಪ್ರಾಯ.

ಈ ನಡುವೆಯೂ ಶ್ರೀಪ್ಲವ ಸಂವತ್ಸರದ ಯುಗಾದಿ ಸ್ವಾಗತಕ್ಕೆ ಮಾರುಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕರು ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಳೆದ ಸಾರಿ ಯುಗಾದಿಗೆ ಕಾಮಣ್ಣ ಮೂರ್ತಿಗೆ ಪೂಜೆ ಈ ಬಾರಿಯೂ ಇಲ್ಲ.

ಯುಗಾದಿ ವೇಳೆ ಬಯಲು ಸೀಮೆಯಲ್ಲಿ ವಿಶಿಷ್ಟವಾಗಿ ಆಚರಿಸುವ ಕಾಮಣ್ಣಮೂರ್ತಿ ತಣ್ಣಗೆ ಮಾಡುವ ಆಚರಣೆಗೆ ಈ ಬಾರಿಯೂ ಬ್ರೇಕ್ ಬಿದ್ದಿದೆ. ಕಳೆದ ಬಾರಿ ಕೊರೊನಾ ಲಾಕ್‍ಡೌನ್ ನಿಂದಾಗಿ ಆಚರಣೆಗೆ ತಡೆ ನೀಡಲಾಗಿತ್ತು. ಈ ಬಾರಿ ಹುಣ್ಣಿಮೆಯಂದು ಕೆಲ ಪ್ರದೇಶಗಳಲ್ಲಿ ಕಾಮದಹನದ ಕ್ರಿಯೆ ನಡೆದಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು